ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಫೆಂಗಲ್ ಚಂಡಮಾರುತದ ಪರಿಣಾಮ ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ತರಕಾರಿ ಬೆಳೆಗೆ ಹಾನಿಯಾಗಿರುವ ಕಾರಣ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಇದರಿಂದಾಗಿ ಸೊಪ್ಪು, ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗಿದೆ.ಚಂಡಮಾರುತದ ಪರಿಣಾಮ ನಗರದ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಪೂರೈಕೆ ಕಡಿಮೆಯಾಗಿದೆ. ಪರಿಣಾಮ, ಈರುಳ್ಳಿ ದರ ಶತಕ ಸಮೀಪಿಸಿದ್ದರೆ, ಟೊಮೆಟೋ ಸೇರಿ ಬಹುತೇಕ ಎಲ್ಲ ತರಕಾರಿಗಳ ಬೆಲೆಯೂ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.ಕೆಜಿಗೆ 40-60 ಇದ್ದ ಈರುಳ್ಳಿ ಬೆಲೆ 70-80 ರುಪಾಯಿಗೆ, ಕೆಜಿಗೆ 30 ಇದ್ದ ಟೊಮೆಟೋ ಬೆಲೆ 50 ರುಪಾಯಿಗೆ ಏರಿದೆ. ತರಕಾರಿಗಳ ದರ ಏರಿಕೆ
ಕಳಪೆ ತರಕಾರಿಗಳ ಪೂರೈಕೆಯ ಬಗ್ಗೆ ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ. ಇನ್ನೂ ಮಳೆಯಿಂದಾಗಿ ತರಕಾರಿಗಳ ಗುಣಮಟ್ಟದಲ್ಲೂ ಪರಿಣಾಮ ಬಿದ್ದಿದೆ. ಬೆಳ್ಳುಳ್ಳಿಯ ಬೆಲೆ ಒಂದು ಕೆಜಿಗೆ 530- 550 ರು. ಮತ್ತು ಅಗತ್ಯ ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪುಗಳು ಕ್ರಮವಾಗಿ 40- 100 ರು. ಮತ್ತು 10ರಿಂದ 25 ರು.ಗೆ ಏರಿಕೆಯಾಗಿದೆ.ಉತ್ತಮ ಗುಣಮಟ್ಟದ ಪ್ರಥಮ ದರ್ಜೆ ಈರುಳ್ಳಿ ದರ 80 - 90 ರು. ತಲುಪಿದ್ದರೆ, ಟೊಮೆಟೋ 14 ಕೆಜಿಗಳ ಬಾಕ್ಸ್ ಒಂದಕ್ಕೆ 800 ರು. ವರೆಗೂ ಮಾರಾಟವಾಗಿದೆ. ಹಾಪ್ ಕಾಮ್ಸ್‌ನಲ್ಲಿ ಈರುಳ್ಳಿ ಕೇಜಿ 100ಕ್ಕೆ ಮಾರಾಟವಾಗಿದ್ದರೆ, ಬೆಳ್ಳುಳ್ಳಿ ಕೇಜಿಗೆ 547 ಆಗಿ ದಾಖಲೆ ಬರೆದಿದೆ. ಸಾಮಾನ್ಯ ಮಾರುಕಟ್ಟೆಯಲ್ಲೂ ಬೆಳ್ಳುಳ್ಳಿ ಗರಿಷ್ಠ 400 ರಿಂದ 500 ರು.ಬೆಲೆಯಿತ್ತು.
ಈರುಳ್ಳಿ ದರ ಹೆಚ್ಚಳಜತೆಗೆ ನಗರದ ಗಲ್ಲಿ ಗಲ್ಲಿಗಳಲ್ಲಿ ತಳ್ಳು ಗಾಡಿ ಮತ್ತು ಆಟೋಗಳಲ್ಲಿ ಕಡಿಮೆ ಬೆಲೆಗೆ ಮಾರಲಾಗುತ್ತಿರುವ ಚಿಕ್ಕ ಗಾತ್ರದ ಈರುಳ್ಳಿಗೆ ಬೇಡಿಕೆ ಬಂದಿದೆ. ಬೆಳ್ಳುಳ್ಳಿಯನ್ನು ಕೇಜಿಗೆ 480-500 ರು. ನಂತೆ ಮಾರುತ್ತಿದ್ದೇವೆ ಎಂದು ತಳ್ಳುಗಾಡಿ ತರಕಾರಿ ವ್ಯಾಪಾರಿ ಸೈಯ್ಯದ್ ಹೇಳುತ್ತಾರೆ. ಇನ್ನು, ನುಗ್ಗಿಕಾಯಿ ಕೂಡ ಮಾರುಕಟ್ಟೆಯಲ್ಲಿ ವಿರಳವಾಗಿದ್ದು, ಒಂದಕ್ಕೆ 15- 18 ರು. ನಂತೆ, ಕೇಜಿಗೆ 500 ರು. ನಂತೆ ಮಾರಲಾಗುತ್ತಿದೆ. ಮಳೆಯಿಂದ ತರಕಾರಿ ಹೆಚ್ಚು ಹಾನಿಯಾಗಿದ್ದು, ಸಗಟು ಮಾರುಕಟ್ಟೆಯಲ್ಲೇ ಈರುಳ್ಳಿ, ಟೊಮೆಟೋ ದರ ವಿಪರೀತವಾಗಿದೆ. ಹೀಗಾಗಿ ಚಿಲ್ಲರೆ ವ್ಯಾಪಾರಸ್ಥರೂ ದರ ಹೆಚ್ಚಿಸಬೇಕಾಗಿದೆ. ಮಳೆ ಪರಿಣಾಮ ಸಗಟು ಮಾರುಕಟ್ಟೆಗೆ ತರಕಾರಿ ಕಡಿಮೆ ಬಂದಿದೆ. ಎರಡು ಮೂರು ವಾರ ಬೆಲೆಯೇರಿಕೆ ಕಾಣಬಹುದು. ಬಳಿಕ ಯಥಾಸ್ಥಿತಿಗೆ ಬರಲಿದೆ ಎಂದು ಎಪಿಎಂಸಿ ಎಸ್ ಎಲ್ ವಿಟಿ ತರಕಾರಿ ಮಂಡಿ ವೆಂಕಟೇಶ್ ತಿಳಿಸುತ್ತಾರೆ.