ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಚಾಲನೆ

| Published : Sep 23 2025, 01:04 AM IST

ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದಂತೆ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಸಮೀಕ್ಷೆ ಆರಂಭಗೊಂಡಿದೆ.

ಬಳ್ಳಾರಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯಾದ್ಯಂತ ಆರಂಭಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ನಡೆಸುವ ಸಮೀಕ್ಷಾ ಕಾರ್ಯಕ್ಕೆ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಬಳ್ಳಾರಿ ನಗರದ ಗುಗ್ಗರಹಟ್ಟಿಯ ವೆಂಕಟಮ್ಮ ಕಾಲೋನಿಯಲ್ಲಿ ಸೋಮವಾರ ಚಾಲನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದಂತೆ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಸಮೀಕ್ಷೆ ಆರಂಭಗೊಂಡಿದೆ. ಈ ಸಮೀಕ್ಷಾ ಕಾರ್ಯವು ಅ.7ರವರೆಗೆ ನಡೆಯಲಿದೆ. ಇದಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 60 ಪ್ರಶ್ನಾವಳಿಗಳುಳ್ಳ ಸಮೀಕ್ಷಾ ಕಾರ್ಯವು ಆಪ್ ಮೂಲಕ ನಡೆಯಲಿದ್ದು, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು.

ಸಮೀಕ್ಷಾ ಕಾರ್ಯಕ್ಕೆ ತರಬೇತಿ ಪಡೆದ ಮಾಸ್ಟರ್ ಟ್ರೇನರ್‌ಗಳು ತಮ್ಮ ಕೆಳಹಂತದ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಮಾರ್ಗದರ್ಶನ ಮಾಡಲಾಗಿದೆ. ಪ್ರತಿ 108 ಮನೆಗಳಿಗೆ ಒಬ್ಬ ಗಣತಿದಾರ, 20 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರಂತೆ ನೇಮಿಸಿ ಸಮೀಕ್ಷೆ ನಡೆಸಲಾಗುತ್ತಿದೆ. ಯಾವ ಕುಟುಂಬವೂ ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರದಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದರಲ್ಲದೆ, ನಿಗದಿತ ಸಮಯದಲ್ಲಿ ಸಮೀಕ್ಷೆ ಕಾರ್ಯ ಮುಗಿಯಬೇಕು. ಯಾವುದೇ ರೀತಿಯ ಗೊಂದಲ ಮಾಡಿಕೊಳ್ಳದೆ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಮೇಯರ್ ಮುಲ್ಲಂಗಿ ನಂದೀಶ್, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ ಸೇರಿದಂತೆ ಸಮೀಕ್ಷಾದಾರರು, ಸಾರ್ವಜನಿಕರು ಇದ್ದರು.

ದಸರಾ ಸಡಗರ ನಡುವೆ ಗಣತಿ ಕಾರ್ಯಕ್ಕೆ ಭಾರದ ಹೆಜ್ಜೆ ಹಾಕಿದ ನೌಕರರು:

ಸಮೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಗಣತಿದಾರರು ಅಗತ್ಯ ಸಲಕರಣೆಗಳೊಂದಿಗೆ ಸಮೀಕ್ಷೆ ಕಾರ್ಯ ಆರಂಭಿಸಿದರು. ಸಮೀಕ್ಷೆಯಲ್ಲಿ ಯಾವುದೇ ಗೊಂದಲವಾಗದಂತೆ

ನಿಗಾ ಇಡಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮೇಲ್ವಿಚಾರಕರನ್ನು, ಪ್ರತಿ 50 ಗಣತಿದಾರರಿಗೆ ಒಬ್ಬರು ಮಾಸ್ಟರ್ ಟ್ರೈನರ್‌ಗಳನ್ನು ನೇಮಿಸಲಾಸಲಾಗಿದೆ. ಸಮೀಕ್ಷೆಗೆ ಜಿಲ್ಲೆಯಲ್ಲಿ 3425 ಬ್ಲಾಕ್‌ಗಳನ್ನು ರಚಿಸಲಾಗಿದ್ದು, 3663 ಗಣತಿದಾರರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಐದು ತಾಲೂಕುಗಳ 100 ಗ್ರಾಪಂಗಳು, 8 ನಗರ ಸ್ಥಳೀಯ ಸಂಸ್ಥೆಳು, 296 ಗ್ರಾಮಗಳು ಹಾಗೂ 13 ಹೋಬಳಿಗಳಲ್ಲಿ ಗಣತಿ ಕಾರ್ಯ ನಡೆಯಲಿದೆ. ದಸರಾ ಹಬ್ಬದ ಸಡಗರ ನಡುವೆ ಗಣತಿ ಕೆಲಸಕ್ಕೆ ನೇಮಿಸಿರುವುದು ನೌಕರರಿಗೆ ನುಂಗದ ತುತ್ತಾಗಿದ್ದು, ಭಾರದ ಹೆಜ್ಜೆ ಹಾಕುತ್ತಾ ನೌಕರರು ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.