ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸಮೀಪದ ದುಂಡಳ್ಳಿ ಗ್ರಾ.ಪಂ.ಯ 2023- 24ನೇ ಸಾಲಿನ ಉದ್ಯೋಗ ಖಾತ್ರಿ ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನಾ ಸಭೆಯು ಸೋಮವಾರ ಗ್ರಾ. ಪಂ. ಆವರಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸತ್ಯವತಿ ದೇವರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸೋಮವಾರಪೇಟೆ ತಾಲೂಕು ಲೆಕ್ಕಪರಿಶೋಧನಾಧಿಕಾರಿ ಅಬ್ದುಲ್ ಸಲಾಂ 2023-24ನೇ ಸಾಲಿನಲ್ಲಿ ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಮತ್ತು 15ನೇ ಹಣಕಾಸು ಯೋಜನೆಯಿಂದ ಆಗಿರುವ ಕಾಮಗಾರಿಗಳು ಮತ್ತು ಕಾಮಗಾರಿಗಳಿಗೆ ಖರ್ಚಾಗಿರುವ ಮೊತ್ತವನ್ನು ವರದಿ ಮೂಲಕ ಗ್ರಾಮಸ್ಥರ ಮುಂದಿಟ್ಟರು. ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಹಣಕಾಸು ಯೋಜನೆಯಲ್ಲಿ ಒಟ್ಟು 34 ಕಾಮಗಾರಿಗಳನ್ನು ನಡೆಸಲಾಗಿದ್ದು ಇದಕ್ಕಾಗಿ 30,69,081 ಲಕ್ಷ ರು. ವೆಚ್ಚ ಮಾಡಲಾಗಿದ್ದು ಉದ್ಯೋಗ ಖಾತ್ರಿ ಯೋಜನೆಯ ವಿವಿಧ ಕಾಮಗಾರಿಗಳಿಗೆ 48, 31, 103 ಲಕ್ಷ ರು. ವಿನಿಯೋಗಿಸಲಾಗಿದೆ ಎಂದು ಅಬ್ದುಲ್ ಸಲಾಂ ವರದಿಯಲ್ಲಿ ಮಂಡಿಸಿದರು.
ಸಭೆಯ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾ.ಪಂ.ಯೋಜನಾಧಿಕಾರಿ ಎ.ಬಿ.ನವೀನ್ ಮಾತನಾಡಿ-ಪ್ರತಿಯೊಂದು ಗ್ರಾ.ಪಂ.ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಮತ್ತು 15ನೇ ಹಣಕಾಸು ಯೋಜನೆಗಳ ವತಿಯಿಂದ ಆಗಿರುವ ನಾನಾ ಕಾಮಗಾರಿಗಳು ಹಾಗೂ ಕಾಮಗಾರಿಗಳಿಗೆ ವೆಚ್ಚವಾಗಿರುವುದನ್ನು ಗ್ರಾಮಸ್ಥರ ಮುಂದಿಡುವ ಉದ್ದೇಶದಿಂದ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯನ್ನು ನಡೆಸಲಾಗುತ್ತದೆ. ಈ ಸಭೆಯಲ್ಲಿ ಸಾರ್ವಜನಿಕರಿಗೆ ತಮ್ಮ ವ್ಯಾಪ್ತಿಯಲ್ಲಿ ಕಾಮಗಾರಿಗಳಲ್ಲಿ ಅನುಮಾನಗಳಿದ್ದರೆ ನೇರವಾಗಿ ದೂರು ನೀಡಬಹುದು ಹಾಗೂ ಈ ಸಭೆಯಲ್ಲಿ 15ನೇ ಹಣಕಾಸು ಯೋಜನೆಗೆ ಮತ್ತು ನರೇಗಾ ಯೋಜನೆಗೆ ಸಂಬಂಧ ಪಟ್ಟಂತೆ ಆರೋಗ್ಯಕರ ಚರ್ಚೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಅಭಿಯಂತರ ಕಾರ್ತಿಕ್, ಪಿಡಿಒ ಎಂ.ಕೆ.ಆಯಿಷ, ಗ್ರಾ.ಪಂ.ಉಪಾಧ್ಯಕ್ಷೆ ಗೋಪಿಕಾ, ಸದಸ್ಯೆ ಪೂರ್ಣಿಮಾ ಕಿರಣ್ ಸದಸ್ಯರಾದ ನಿತಿನ್, ಸಿ.ಜೆ.ಗಿರೀಶ್, ನಂದಿನಿ ಗ್ರಾ.ಪಂ.ಸಿಬ್ಬಂದಿ ಗ್ರಾಮಸ್ಥರು ಭಾಗವಹಿಸಿದ್ದರು.