ಶಿಕ್ಷಣದಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ: ರಾಜೇಂದ್ರ ಪ್ರಸಾದ್

| Published : Aug 25 2024, 01:57 AM IST

ಸಾರಾಂಶ

೨೦೦೫ರಲ್ಲಿ ಪ್ರಾರಂಭವಾದ ನಮ್ಮ ಸಂಸ್ಥೆಯಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ತರಬೇತಿ ಶಿಬಿರಗಳು ಮತ್ತು ಆರೋಗ್ಯ ಸಂಬಂಧಿತ ಎಚ್ಚರಿಕೆ ಜಾಗೃತಿ ಅರಿವು ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಂಡಿದ್ದು, ಪ್ರಸ್ತುತ ಹಿಲ್ಟಿ ಇಂಡಿಯಾ ಕಂಪನಿಯ ಸಹಯೋಗದಲ್ಲಿ ಸರ್ಕಾರಿ ಶಾಲೆಗಳ ಬಲವರ್ದನೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಸೂಲಿಬೆಲೆ

ಸಮಾಜ ಬದಲಾವಣೆಯಾಗಲು ಎಲ್ಲರಿಗೂ ಕಡ್ಡಾಯ ಶಿಕ್ಷಣ ನೀಡಬೇಕು. ದೇಶದ ಅಭಿವೃದ್ಧಿ ಮತ್ತು ಪ್ರಗತಿಯು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಸಾಯಿ ಗೋಕುಲ ಸೇವಾ ಸಂಸ್ಥೆಯ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಹೇಳಿದರು.

ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಯಿಗೋಕುಲ ಸೇವಾ ಸಂಸ್ಥೆ, ಹಿಲ್ಟಿ ಇಂಡಿಯಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸ್ಕೂಲ್ ಚಲೇ ಹಮ್’ ಕಾರ್ಯಕ್ರಮದಲ್ಲಿ ಮಾತನಾಡಿದರು.

೨೦೦೫ರಲ್ಲಿ ಪ್ರಾರಂಭವಾದ ನಮ್ಮ ಸಂಸ್ಥೆಯಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ತರಬೇತಿ ಶಿಬಿರಗಳು ಮತ್ತು ಆರೋಗ್ಯ ಸಂಬಂಧಿತ ಎಚ್ಚರಿಕೆ ಜಾಗೃತಿ ಅರಿವು ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಂಡಿದ್ದು, ಪ್ರಸ್ತುತ ಹಿಲ್ಟಿ ಇಂಡಿಯಾ ಕಂಪನಿಯ ಸಹಯೋಗದಲ್ಲಿ ಸರ್ಕಾರಿ ಶಾಲೆಗಳ ಬಲವರ್ದನೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು.

ಬೆಂಡಿಗಾನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶೀಲಾದೇವಿ ಮಾತನಾಡಿ. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಪೂರಕ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯಬೇಕು, ಇಂದಿನ ತಾಂತ್ರಿಕ ಶಿಕ್ಷಣ ಯುಗದಲ್ಲಿ ಪರೀಕ್ಷೆ ಮುಖ್ಯವಲ್ಲಾ. ಕೌಶಲ್ಯ ಹಾಗೂ ಸೃಜನಶೀಲ ಶಿಕ್ಷಣಕ್ಕೆ ಅಧ್ಯತೆ ನೀಡಬೇಕು ಎಂದರು.

ಬೆಂಡಿಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಅಧ್ಯಕ್ಷ ಬಿ.ವಿ.ಸತೀಶಗೌಡರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಕರಿದ್ದು ಸರ್ಕಾರವು ಶಿಕ್ಷಣಕ್ಕೆ ಪೂರಕ ಸವಲತ್ತುಗಳನ್ನು ನೀಡುತ್ತಿದೆ, ಇದರ ಸದುಪಯೋಗವಾಗಬೇಕು ಎಂದು ಹೇಳಿದರು.

ಹಿಲ್ಟಿ ಕಂಪನಿಯ ರಾಜಶೇಖರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ೧೦ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಮುಂದಿನ ೨ ವರ್ಷಗಳ ಕಾಲೇಜು ಶಿಕ್ಷಣಕ್ಕೆ ಕಂಪನಿ ವಿದ್ಯಾರ್ಥಿ ವೇತನ ನೀಡುತ್ತದೆ ಎಂದು ಹೇಳಿದರು.

ಹಿಲ್ಟಿ ಕಂಪನಿಯಿಂದ ಶಾಲೆಗೆ ಪ್ರೊಜೆಕ್ಟರ್ ಕೊಡುಗೆ ನೀಡಲಾಯಿತು, ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತ ೧೦ ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್ ಬುಕ್, ಲೇಖನ ಸಾಮಗ್ರಿ, ಜಾಮಿಟ್ರಿ ಬಾಕ್ಸ್ ನೀಡಲಾಯಿತು, ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಲೇಖನ ಸಾಮಗ್ರಿ ವಿತರಿಸಲಾಯಿತು.

ವರುಣ್ ಚಿಕ್ಕದ, ಹೇಮಾ, ಸಂಚಾಲಕಿ ರಮ್ಯಾ, ಸಹ ಶಿಕ್ಷಕರಾದ ಆನಂದಕುಮಾರ್, ಜಯರಾಮ್ ಇತರರು ಇದ್ದರು.