ವೀರಶೈವ ಮಠಗಳ ಸಾಮಾಜಿಕ ಕಳಕಳಿ ಪ್ರಶಂಸನೀಯ: ದೇವರಗುಡ್ಡದ ಶ್ರೀ

| Published : Mar 19 2024, 12:49 AM IST

ವೀರಶೈವ ಮಠಗಳ ಸಾಮಾಜಿಕ ಕಳಕಳಿ ಪ್ರಶಂಸನೀಯ: ದೇವರಗುಡ್ಡದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ನಗರದ ಕಡ್ಲಪ್ಪನವರ ನಿಷ್ಠಿ ಮಠದಲ್ಲಿ ಶರಣರ ಚರಿತಾಮೃತದಲ್ಲಿ ದೇವರಗುಡ್ಡದ ಗಿರಿಮಲ್ಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಸುರಪುರ

ಸಮಾಜಮುಖಿ ಕಾರ್ಯಗಳಿಗೆ ಸದಾ ಸಿದ್ಧವಿದ್ದು, ಅನ್ನ ದಾಸೋಹ, ಬಡ ಮಕ್ಕಳಿಗೆ ಜ್ಞಾನ ದಾಸೋಹ ಮಾಡುತ್ತಾ ಸಮಾಜದಲ್ಲಿನ ಕೊರತೆ ನೀಗಿಸುತ್ತಿವೆ. ವೀರಶೈವ ಮಠಗಳ ಸಾಮಾಜಿಕ ಕಳಕಳಿ ಪ್ರಶಂಸನೀಯ ಎಂದು ದೇವದುರ್ಗ ತಾಲೂಕಿನ ದೇವರಗುಡ್ಡದ ಶ್ರೀ ಶರಣ ಅಮಾತೇಶ್ವರ ಮಠದ ಗಿರಿಮಲ್ಲೇಶ್ವರ ಸ್ವಾಮೀಜಿ ಹೇಳಿದರು.

ನಗರದ ಕಡ್ಲಪ್ಪನವರ ನಿಷ್ಠಿ ವಿರಕ್ತಮಠದಲ್ಲಿ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಯ 48ನೇ ವರ್ಷದ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿರುವ ಶರಣರ ಚರಿತಾಮೃತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ರಾಜ್ಯದಲ್ಲಿ ವೀರಶೈವ ಮಠಗಳು ಯಾವುದೇ ಜಾತಿ, ಮತ ಭೇದವಿಲ್ಲದೆ ಸಕಲ ಸಮುದಾಯದವರನ್ನು ಸಮಾನವಾಗಿ ಕಾಣುತ್ತಿವೆ ಎಂದರು.

ಜ್ಞಾನ ಮತ್ತು ಅನ್ನ ದಾಸೋಹ ಪರಂಪರೆ ಧ್ಯೇಯವಾಗಿಸಿಕೊಂಡಿರುವ ವೀರಶೈವ ಮಠಗಳು ಸಮಾಜದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. 1908ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಸಂಸ್ಥಾಪಕರಾದ ಹಾನಗಲ್ ಕುಮಾರಸ್ವಾಮಿಯವರು ಅಸಂಖ್ಯಾತರ ಬದುಕಿನಲ್ಲಿ ಜ್ಞಾನದ ದೀಪ ಬೆಳಗಿಸಿದ ಮಹಾನ್ ತಪಸ್ವಿಗಳು. ಸಹಸ್ರ ಸಂಖ್ಯೆಯ ಅಂಧ, ಅನಾಥ ಮಕ್ಕಳು ಬೆಳಗುವುದಕ್ಕೆ ಪ್ರೇರಣೆ ನೀಡಿದರು. ಅವರ ಸೇವೆ ಅವಿಸ್ಮರಣೀಯ. ಶಿರಸಂಗಿ ಲಿಂಗರಾಜ ದೇಸಾಯಿ ಕೂಡ ಕರ್ನಾಟಕ ಲಿಂಗಾಯತ ಏಜುಕೇಷನ್ ಸೊಸೈಟಿ ಸ್ಥಾಪಿಸಿ ಶಿಕ್ಷಣಕ್ಕೆ ಆದ್ಯತೆ ನೀಡಿದರು ಎಂದರು.

ಮಠಗಳು ಸಂಸ್ಕೃತಿ, ಸಂಸ್ಕಾರದ ಕೇಂದ್ರಗಳಾಗಿವೆ. ಮಠಗಳ ಬೆಳವಣಿಗೆಗೆ ದಾನ, ದೇಣಿಗೆ ಜೊತೆಯಲ್ಲಿ ಭಕ್ತರ ಕಂಕಣಬದ್ಧವಾದ ಸೇವೆ ಕೂಡ ಅವಶ್ಯಕವಾಗಿದೆ. ಇಂದು ದೂರದರ್ಶನ, ಮೊಬೈಲ್ ಹೆಚ್ಚು ಬಳಕೆ ಬೇಸರದ ಸಂಗತಿಯಾಗಿದೆ. ಮಠಗಳಲ್ಲಿ ಪುರಾಣ, ಪ್ರವಚನ, ಸಾಮಾಜಿಕ, ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಭಕ್ತರ ಪಾಲ್ಗೊಳ್ಳುವಿಕೆಯು ಕೂಡ ಅಷ್ಟೇ ಮಹತ್ವದಾಗಿದೆ ಎಂದು ನುಡಿದರು.

ಲಿಂ.ಮಲ್ಲಿಕಾರ್ಜುನ ಸ್ವಾಮೀಜಿ ಮಾಡಿದ ಕಾರ್ಯ ಶ್ಲಾಘನೀಯ. ಪೂಜ್ಯರ ಸೇವೆ ಸ್ಮರಿಸಲು ಪ್ರತಿ ವರ್ಷ ಪುಣ್ಯಸ್ಮರಣೆ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಮಠಾಧೀಶರನ್ನು ಆಹ್ವಾನಿಸಿ ಅವರಿಂದ ಸಂದೇಶ ಕೊಡಿಸಿ, ಕಲಾವಿದರು, ಸಂಗೀತಗಾರರನ್ನು, ಗಣ್ಯರನ್ನು, ಸಾಧಕರನ್ನು ಕರೆಯಿಸಿ ಸನ್ಮಾನಿಸಿ ಗೌರವಿಸುತ್ತಿರುವ ಪ್ರಭುಲಿಂಗ ಸ್ವಾಮೀಜಿ ಅವರು ತಮ್ಮ ಸರಳ, ಸಜ್ಜನಿಕೆ, ಆಚಾರ, ವಿಚಾರ ಮೂಲಕ ಮಠವನ್ನು ಎತ್ತರಕ್ಕೆ ಕೊಂಡ್ಯೊಯುತ್ತಿದ್ದಾರೆ ಎಂದು ತಿಳಿಸಿದರು.

ಇಂದು ಜೀವನ ಮತ್ತು ಆಹಾರ ಪದ್ಧತಿ ಬದಲಾಗಿ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ. ದೈಹಿಕ ಶ್ರಮ ಇಲ್ಲವಾಗಿದೆ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದ್ದು ಜೀವನಶೈಲಿ ಸರಿಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯಬೇಡ ಎಂದು ಪೂಜ್ಯರು ಸಲಹೆ ನೀಡಿದರು.

ಪ್ರಭುಲಿಂಗ ಸ್ವಾಮೀಜಿ ನೇತೃತ್ವ, ಗಜದಂಡ ಶಾಸ್ತ್ರಿ ಸಾನ್ನಿಧ್ಯ ವಹಿಸಿದ್ದರು. ರಘುನಂದ ಶಾಸ್ತ್ರಿ ಪ್ರವಚನ, ಶರಣಕುಮಾರ ಯಾಳಗಿ, ರಾಜಶೇಖರ ಗೆಜ್ಜಿ ಸಂಗೀತ ಸಾಥ್ ನೀಡಿದರು. ಹೆಚ್.ಠಾರೋಡ ನಿರೂಪಿಸಿ ವಂದಿಸಿದರು.