ಚುನಾವಣೆ ಅಕ್ರಮ ತಡೆಗಟ್ಟಲು 6 ಕಡೆ ಚೆಕ್‌ಪೋಸ್ಟ್

| Published : Mar 19 2024, 12:49 AM IST

ಸಾರಾಂಶ

ಕಾಗವಾಡ: ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದ ಚುನಾವಣೆಯ ನಿಮಿತ್ತ ಕಾಗವಾಡ ವಿಧಾನಸಭೆ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನಕ್ಕೆ ಆದ್ಯತೆ ನೀಡಲಾಗುತ್ತದೆ. ಚುನಾವಣೆಗೆ ಸಂಬಂಧಿಸಿದ ಅಕ್ರಮಗಳನ್ನು ತಡೆಗಟ್ಟಲು ಕ್ಷೇತ್ರದ ಒಟ್ಟು 6 ಕಡೆ ಚೆಕ್ ಪೋಸ್ಟ್ ಮಾಡಲಾಗುತ್ತದೆ ಎಂದು ಕಾಗವಾಡ ವಿಧಾನ ಸಭೆಯ ಸಹಾಯಕ ಚುನಾವಣಾಧಿಕಾರಿ ಬಸಪ್ಪ ಪೂಜಾರಿ ತಿಳಿಸಿದರು

ಕನ್ನಡಪ್ರಭ ವಾರ್ತೆ ಕಾಗವಾಡಚಿಕ್ಕೋಡಿ ಲೋಕಸಭೆ ಮತಕ್ಷೇತ್ರದ ಚುನಾವಣೆಯ ನಿಮಿತ್ತ ಕಾಗವಾಡ ವಿಧಾನಸಭೆ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನಕ್ಕೆ ಆದ್ಯತೆ ನೀಡಲಾಗುತ್ತದೆ. ಚುನಾವಣೆಗೆ ಸಂಬಂಧಿಸಿದ ಅಕ್ರಮಗಳನ್ನು ತಡೆಗಟ್ಟಲು ಕ್ಷೇತ್ರದ ಒಟ್ಟು 6 ಕಡೆ ಚೆಕ್ ಪೋಸ್ಟ್ ಮಾಡಲಾಗುತ್ತದೆ ಎಂದು ಕಾಗವಾಡ ವಿಧಾನ ಸಭೆಯ ಸಹಾಯಕ ಚುನಾವಣಾಧಿಕಾರಿ ಬಸಪ್ಪ ಪೂಜಾರಿ ತಿಳಿಸಿದರು.

ಚಿಕ್ಕೋಡಿ ಲೋಕಸಭೆ ಚುನಾವಣೆ ಪೂರ್ವ ತಯಾರಿಯ ಕುರಿತು ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕಾಗವಾಡ ಮತಕ್ಷೇತ್ರವು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿದ್ದರಿಂದ ಹೆಚ್ಚು ಜಾಗ್ರತೆ ವಹಿಸುವ ಅವಶ್ಯಕತೆ ಇದ್ದು, ಇದಕ್ಕಾಗಿ ಕ್ಷೇತ್ರದ ಕಾಗವಾಡ-ಮಿರಜ್, ಕಾಗವಾಡ-ಗಣೇಶವಾಡಿ, ಮಂಗಸೂಳಿ-ಅರಗ, ಕೆಂಪವಾಡ-ಶಿಂಧೆವಾಡಿ, ಮದಭಾವಿ-ಖಟಾವ, ಬಾಳಿಗೇರಿ-ಜತ್ ರಸ್ತೆಗಳಲ್ಲಿ ಒಟ್ಟು 6 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ ಎಂದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 2,02,212 ಮತದಾರರಿದ್ದು, ಅದರಲ್ಲಿ ಗಂಡು-1,02,369, ಹೆಣ್ಣು-99,836 ಇತರೆ-7 ಜನ ಮತದಾರರಿದ್ದಾರೆ. ಕ್ಷೇತ್ರದಲ್ಲಿ 07 ಸೂಕ್ಷ್ಮ ಮತಗಟ್ಟೆ ಮತ್ತು 9 ಅತೀ ಸೂಕ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚುನಾವಣೆ ಕರ್ತವ್ಯಕ್ಕೆ 19 ಸೆಕ್ಟರ್ ಆಫೀಸರ್‌ಗಳು, 06 ಜನ ಎಫ್‌ಎಸ್‌ಟಿ, 18 ಜನ ಎಸ್‌ಎಸ್‌ಟಿ, 4 ಜನ ವ್ಹಿಎಸ್‌ಟಿ, ಓರ್ವ ವ್ಹಿವ್ಹಿಟಿ, ಎಂಸಿಸಿ ಮತ್ತು ನಿರೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

85 ಕ್ಕಿಂತ ಹೆಚ್ಚಿನ ವಯಸ್ಸಿನ ವಯೋವೃದ್ದರಿಗೆ ಮನೆಯಲ್ಲಿ ಮತದಾನ ಮಾಡುವ ಅವಕಾಶ ನೀಡಲಾಗಿದೆ. ಆದರೆ, ವಯೋವೃದ್ಧರು ಆರೋಗ್ಯವಂತರಾಗಿದ್ದಾರೆ. ಅವರು ಸ್ವ-ಖುಷಿಯಿಂದ ಮತಗಟ್ಟೆಗೆ ಬಂದು ಮತದಾನ ಮಾಡುವವರಿಗೆ ಅವರಿಗೂ ಮತಗಟ್ಟೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿಕಲಚೇತನರಿಗೆ ವಿಲ್ ಕುರ್ಚಿ ವ್ಯವಸ್ಥೆ ಇರುತ್ತದೆ. ಇದರೊಂದಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುವುದು. ಅಕ್ರಮವಾಗಿ ಸರಾಯಿ, ಹಣ, ಇನ್ನಿತರ ವಸ್ತುಗಳನ್ನು ಸಾಗಿಸುವುದನ್ನು ತಡೆಗಟ್ಟಲು ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಕಣ್ಗಾವಲು ಇರುತ್ತದೆ. ಅಲ್ಲದೇ ಅಬಕಾರಿ, ಪೊಲೀಸ್ ಸಿಬ್ಬಂದಿ ಹಾಗೂ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಹಾಗೂ ಮದುವೆ ಸಭೆ ಸಮಾರಂಭಗಳು ಏರ್ಪಡಿಸುವ ಪೂರ್ವದಲ್ಲಿ ಅನುಮತಿ ಪಡೆಯುವದು ಕಡ್ಡಾಯವಾಗಿದೆ. ಶಾಲೆ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಯಾರಾದರೂ ನಿಯಮ ಮೀರಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.ಈ ವೇಳೆ ತಹಸೀಲ್ದಾರ್‌ ಎಸ್.ಬಿ. ಇಂಗಳೆ, ಪಿಎಸೈ ಎಂ.ಬಿ.ಬಿರಾದಾರ, ಚುನಾವಣಾ ವಿಷಯ ನಿರ್ವಾಹಕ ಮಹಾಂತೇಶ ಬಾದವಾಡಗಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.