ಇಂದು ಜಗತ್ತಿನಲ್ಲಿ ದೇಶ ದೇಶಗಳ ಮಧ್ಯ ಯುದ್ಧ ನಡೆಯುತ್ತದೆ. ಆದರೆ, ನಮ್ಮ ದೇಶದಲ್ಲಿ ಎಲ್ಲರೂ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆಂದರೇ ಅದು ಭಾರತದಲ್ಲಿರುವ ಸಾಮಾಜಿಕ ಸಾಮರಸ್ಯವೇ ಕಾರಣ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಇಂದು ಜಗತ್ತಿನಲ್ಲಿ ದೇಶ ದೇಶಗಳ ಮಧ್ಯ ಯುದ್ಧ ನಡೆಯುತ್ತದೆ. ಆದರೆ, ನಮ್ಮ ದೇಶದಲ್ಲಿ ಎಲ್ಲರೂ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆಂದರೇ ಅದು ಭಾರತದಲ್ಲಿರುವ ಸಾಮಾಜಿಕ ಸಾಮರಸ್ಯವೇ ಕಾರಣ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣ ಪಂಚಾಯತಿಯಲ್ಲಿ ಹಿಂದೂ ಮುಸ್ಲಿಂ ಸಮಾಜದ ವತಿಯಿಂದ ಜರುಗಿದ ರಂಜಾನ್ ಹಬ್ಬದ ಪರಸ್ಪರ ಶುಭಾಶಯ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮನುಷ್ಯ ಬೇರೆ ಬೇರೆ ಧರ್ಮ, ಜಾತಿಗಳಲ್ಲಿ ಜನಸಿರಬಹುದು. ಆದರೆ, ಎಲ್ಲರೂ ಮಾನವೀಯ ಮೌಲ್ಯಗಳನ್ನು ಮೆರೆದು ಸಾಮಾಜಿಕ ಸಾಮರಸ್ಯದಿಂದ ಬದುಕಬೇಕು ಎಂದರು.ಯಾವುದೇ ಕಾರಣಕ್ಕೂ ಮನುಷ್ಯನಲ್ಲಿ ಭೇದ-ಭಾವ ಬರಬಾರದು. ಜಾತಿ, ಭಾಷೆಯ ಹೆಸರಿನಲ್ಲಿ ದ್ವೇಷ ಒಳ್ಳೆಯದಲ್ಲ. ಮುಸ್ಲಿಂ ಸಮಾಜದವರು ರಂಜಾನ್ ತಿಂಗಳು ಉಪವಾಸ ಮಾಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು, ದುಡಿದು ಸಂಪಾದನೆ ಮಾಡಿದ ಹಣವನ್ನು ಜನರಿಗೆ ಹಂಚಿದರೇ, ಹಿಂದೂಗಳು ದೀಪಾವಳಿಗೆ ಸಿಹಿ ಹಂಚುತ್ತಾರೆ. ಯುಗಾದಿಗೆ ಬೇವು-ಬೆಲ್ಲ ಹಂಚುತಾರೆ. ಇದು ನಮ್ಮ ಸಂಪ್ರದಾಯ ಎಂದರು.ಮುಖಂಡ ಎಸ್.ಬಿ.ಪತಂಗಿ ಮಾತನಾಡಿ, ಪಟ್ಟಣದಲ್ಲಿ ಬೇರೆ ಬೇರೆ ಧರ್ಮ, ಪಕ್ಷ , ಭಾಷೆ, ಸಂಪ್ರದಾಯವಿದ್ದರೂ ನಾವೆಲ್ಲ ವಾಸಿಸುವುದು ಒಂದೇ ಭೂಮಿ, ಉಸಿರಾಡಿಸುವುದು ಒಂದೇ ಗಾಳಿ, ಕುಡಿಯುವುದು ಒಂದೇ ನೀರು. ಹೀಗಾಗಿ ನಾವೆಲ್ಲರೂ ಭಾರತ ಮಾತೆಯ ಮಕ್ಕಳಾಗಿರಬೇಕು. ಗ್ರಾಮ,ನಾಡು ಹಾಗೂ ದೇಶದ ಅಭಿವೃದ್ಧಿಗೆ ನಾವೆಲ್ಲ ಒಂದಾಗಿರಬೇಕು. ಪಟ್ಟಣದ ಅಭಿವೃದ್ಧಿಗೆ ನಾವೆಲ್ಲ ಒಂದಾಗಿ ಬಾಳಿ ಬಲಿಷ್ಠವಾದ ಭಾರತ ಕಟ್ಟೋಣ ಎಂದು ಕೋರಿದರು.

ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಆಕಾಶದಿಂದ ಭೂಮಿಗೆ ಬೀಳುವ ಒಂದು ಹನಿ ನೀರು ಮನುಷ್ಯರಿಗೆ, ಪ್ರಾಣಿ ಪಕ್ಷಿಗಳಿಗೆ ಹಾಗೂ ಭೂಮಿಗೆ ಬಿದ್ದು ನನ್ನಿಂದ ಜೀವಕಳೆ ಬರಬೇಕು ಎಂದು ಹೇಗೆ ಅಪೇಕ್ಷ ಪಡುತ್ತದೆಯೋ ಹಾಗೇಯೇ ಜಗತ್ತಿನಲ್ಲಿ ಎಲ್ಲ ಧರ್ಮಗಳು ಶಾಂತಿಯನ್ನು ಬಯಸುತ್ತವೆ ಎಂದರು.ಈ ವೇಳೆ ಸಚಿವ ಶಿವಾನಂದ ಪಾಟೀಲರನ್ನು ಪಟ್ಟಣ ಪಂಚಾಯತಿ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ಹಾಗೂ ಕಲ್ಲಿನಾಥ ಶ್ರೀಗಳು ಸನ್ಮಾನಿಸಿದರು. ಈ ವೇಳೆ ಮುಖಂಡರಾದ ಆರ್.ಬಿ.ಪಕಾಲಿ, ಬಿ.ಯು.ಗಿಡ್ಡಪ್ಪಗೋಳ, ಉಸ್ಮಾನ್ ಪಟೇಲ, ಸಿ.ಎಂ.ಗಣಕುಮಾರ, ಟಿ.ಟಿ.ಹಗೇದಾಳ, ಹನಿಫ್ ಮಕಾನದಾರ, ಶ್ರೀಶೈಲ ಮುಳವಡ, ಮಹಾಂತೇಶ ಗಿಡ್ಡಪ್ಪಗೋಳ, ಯಮನೂರಿ ಮಾಕಾಳೆ, ತೌಸಿಪ್ ಗಿರಗಾಂವಿ, ಎಂ.ಆರ್.ಕಲಾದಗಿ ಸೇರಿದಂತೆ ಹಿಂದೂ ಮುಸ್ಲಿಂ ಸಮಾಜದ ಮುಖಂಡರು ಇದ್ದರು.ಪ್ರಾರ್ಥನೆ ಸಲ್ಲಿಸಿದ ಸಚಿವ ಶಿವಾನಂದ

ಕೊಲ್ಹಾರ ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದ ವತಿಯಿಂದ ರಂಜಾನ್ ಪ್ರಯುಕ್ತ ಹಮ್ಮಿಕೊಂಡ ಪ್ರಾರ್ಥನೆಯಲ್ಲಿ ಸಚಿವ ಶಿವಾನಂದ ಪಾಟೀಲ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿ ಪಟ್ಟಣದ ಮುಸ್ಲಿಂ ಸಮಾಜದವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು. ನಂತರ ಆರ್.ಬಿ.ಪಕಾಲಿ, ಎಂ.ಆರ್.ಕಲಾದಗಿಯವರ ನಿವಾಸಕ್ಕೆ ಭೇಟಿ ನೀಡಿ ಸುರಕುಂಬಾ ಸೇವಿಸಿದರು.ಹಿಂದೂಗಳಿಗೆ ಶ್ರಾವಣ ಮಾಸ, ಕ್ರೈಸ್ತರಿಗೆ ಕ್ರಿಸ್ ಮಸ್ ಹಬ್ಬ ಎಷ್ಟು ಪವಿತ್ರವೋ ಅಷ್ಟೇ ಮುಸಲ್ಮಾನ್ ಸಮಾಜದವರಿಗೆ ರಂಜಾನ್ ಹಬ್ಬ ಪವಿತ್ರವಾಗಿದೆ. ರಂಜಾನ್ ತಿಂಗಳಲ್ಲಿ ಮುಸ್ಲಲ್ಮಾನ ಸಮಾಜದವರು ಮಾನವೀಯ ಮೌಲ್ಯಗಳನ್ನು ಮೆರೆಯುತ್ತಾರೆ.

-ಶಿವಾನಂದ ಪಾಟೀಲ, ಸಚಿವರು.