ಭಾರತೀಯ ಪರಂಪರೆಯಲ್ಲಿ ಸಾಮಾಜಿಕ ಅಸಮಾನತೆ

| Published : Mar 04 2025, 12:31 AM IST

ಸಾರಾಂಶ

ಶಿವಮೊಗ್ಗ: ರಾಷ್ಟ್ರ ನಿರ್ಮಾಣದ ಗುರುತರ ಕಾರ್ಯದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ನೈಸರ್ಗಿಕ ಸಂಪನ್ಮೂಲಗಳು, ಜ್ಞಾನ ಶಾಖೆಗಳ ಮುಕ್ತ ಅವಕಾಶ ಇರಬೇಕು ಎಂದು ದೆಹಲಿಯ ಪರಿಸರ ಶಿಕ್ಷಣ ಕೇಂದ್ರದ ನಿರ್ದೇಶಕ ಡಾ.ಅಶೋಕ್ ಖೋಸ್ಲಾ ಅಭಿಪ್ರಾಯಪಟ್ಟರು.

ಶಿವಮೊಗ್ಗ: ರಾಷ್ಟ್ರ ನಿರ್ಮಾಣದ ಗುರುತರ ಕಾರ್ಯದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ನೈಸರ್ಗಿಕ ಸಂಪನ್ಮೂಲಗಳು, ಜ್ಞಾನ ಶಾಖೆಗಳ ಮುಕ್ತ ಅವಕಾಶ ಇರಬೇಕು ಎಂದು ದೆಹಲಿಯ ಪರಿಸರ ಶಿಕ್ಷಣ ಕೇಂದ್ರದ ನಿರ್ದೇಶಕ ಡಾ.ಅಶೋಕ್ ಖೋಸ್ಲಾ ಅಭಿಪ್ರಾಯಪಟ್ಟರು.ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ಸೋಮವಾರ ಆರಂಭವಾದ ಐದು ದಿನಗಳ ಹವಾಮಾನ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಪರಂಪರೆಯಲ್ಲಿ ಸಾಮಾಜಿಕ ಅಸಮಾನತೆ, ಜಾತಿ ಆಧಾರಿತ ಹಿಂಸೆ, ಬಡವ ಶ್ರೀಮಂತರ ನಡುವಿನ ಅಂತರ ಹಾಸುಹೊಕ್ಕಾಗಿದೆ ಎಂದರು.ಒಂದೆಡೆ ಸುಮಾರು 50 ಕೋಟಿ ಶ್ರೀಮಂತ ಭಾರತೀಯರು ಅಮೆರಿಕ, ಯುರೋಪ್ ನಂತಹ ದೇಶಗಳ ಪ್ರಜೆಗಳಿಗೆ ಸರಿಸಮಾನರಾಗಿ ಜೀವನಶೈಲಿಯನ್ನು ನಡೆಸುತ್ತಿದ್ದರೆ, ಉಳಿದ 80 ಕೋಟಿ ಜನ ಬಡ ಭಾರತೀಯರು ನಿಕೃಷ್ಟವಾದ ಜೀವನ ನಡೆಸುತ್ತಿರುವುದು ದುರಂತ. ಈ ಶ್ರೀಮಂತ ಭಾರತ, ಬಡ ಭಾರತವನ್ನು ಕಂಡೂ ಕಾಣದಂತೆ ಬದುಕುತ್ತಿರುವುದು ಬಹುದೊಡ್ಡ ದುರಂತ ಎಂದು ಹೇಳಿದರು.ದೇಶದ ಸುಮಾರು 20 ಕೋಟಿ ಜನರಿಗೆ ಆರೋಗ್ಯಕರವಾದ ಕುಡಿಯುವ ನೀರು ಸಿಗುತ್ತಿಲ್ಲ. ಬಡತನ, ಪರಿಸರ ನಾಶವು, ಪರಿಸರ ನಿರಾಶ್ರಿತರನ್ನು ಸೃಷ್ಟಿಸುತ್ತಿದೆ. ಹವಾಮಾನ ವೈಪರೀತ್ಯದಿಂದ ಪ್ರತಿ ವರ್ಷ ದೇಶದಲ್ಲಿ 10000 ಚದರ ಕಿಲೋ ಮೀಟರ್ ನಷ್ಟು ಮರುಭೂಮಿ ಸೃಷ್ಟಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ನವ ಉದಾರೀಕರಣದ ಆರ್ಥಿಕ ನೀತಿ ಪರಿಸರ, ಜೀವವೈವಿಧ್ಯತೆಯನ್ನು ಕಡಗಣಿಸಿ ಕೇವಲ ಜಿಡಿಪಿಯಂತಹ ಶುಷ್ಕ ಮಾನದಂಡಗಳಿಗೆ ಮಾನ್ಯತೆ ನೀಡುತ್ತಿರುವುದರಿಂದ ಬಡವ ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಭವಿಷ್ಯತ್ತಿನ ಸುಸ್ಥಿರ ಆರ್ಥಿಕತೆ, ಆರೋಗ್ಯಕರ ಮತ್ತು ಸಮಗ್ರ ಅಭಿವೃದ್ಧಿ ನೀತಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ಕುಪಲತಿ ಪ್ರೊ.ಶರತ್ ಅನಂತಮೂರ್ತಿ ಮಾತನಾಡಿ, ಅಭಿವೃದ್ಧಿಯ ಪರಿಕಲ್ಪನೆ ಪರಿಸರ, ಅರಣ್ಯ, ಜೀವವೈವಿಧ್ಯತೆಯಂತಹ ಸುಸ್ಥಿರ ಅಂಶಗಳನ್ನು ಪರಿಗಣಿಸಬೇಕಿದೆ ಎಂದರು.

ಕುಲಸಚಿವ ಎ.ಎಲ್.ಮಂಜುನಾಥ್, ಅಜೀಂ ಪ್ರೇಮ್ ಜಿ ವಿವಿಯ ಎಸ್.ವಿ.ಮಂಜುನಾಥ್, ಪ್ರೊ.ಜೆ.ನಾರಾಯಣ, ಡಾ.ಯೋಗೇಂದ್ರ, ಪ್ರೊ.ಬಿ.ತಿಪ್ಪೇಸ್ವಾಮಿ, ಪ್ರೊ.ವಿಜಯಕುಮಾರ ಸೇರಿದಂತೆ ಸುಮಾರು 2000 ಶಾಲಾ ವಿದ್ಯಾರ್ಥಿಗಳು ಇದ್ದರು.

ಐದು ದಿವಸಗಳ ಕಾಲ ನಡೆಯುವ ಉತ್ಸವದಲ್ಲಿ ಭಾರತದ ವೈವಿಧ್ಯಮಯ ಪರ್ವತಶ್ರೇಣಿಯ ಕುರಿತ ವಸ್ತುಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪರಿಸರ ನಡಿಗೆ, ಸಾಕ್ಷ್ಯಚಿತ್ರ ಪ್ರದರ್ಶನ ಜರುಗಲಿವೆ.