ಸಾರಾಂಶ
ಬಳ್ಳಾರಿ: ಮಾನಸಿಕ ಒತ್ತಡ ನಿವಾರಿಸಿಕೊಳ್ಳಲು ಸಾಮಾಜಿಕ ಸಂವಹನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಹಾಗೂ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಸಹಭಾಗಿತ್ವದಲ್ಲಿ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಡುವಿನ ವೇಳೆಯಲ್ಲಿ ಮಾನಸಿಕ ಆರೋಗ್ಯ ಕಾಪಾಡಲು ಯೋಗ, ಧ್ಯಾನ, ಪ್ರಾಣಾಯಾಮದಂತಹ ಮುಂತಾದ ಚಟುವಟಿಕೆ ಅಳವಡಿಸಿಕೊಳ್ಳಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಅಧಿಕ ಕೆಲಸದೊತ್ತಡದಿಂದ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಆದರೆ, ಮಾನಸಿಕ ಒತ್ತಡ ಎಂಬುವುದು ದೌರ್ಬಲ್ಯ ಅಲ್ಲ. ಊಹೆ, ಅಲೋಚನೆ ಮಾಡುವುದನ್ನು ಬಿಡಬೇಕು. ಇತರರೊಂದಿಗೆ ಮಾತುಕತೆ, ಸಂವಹನದ ವಿಚಾರಗಳ ಮೂಲಕ ಮಾನಸಿಕ ಒತ್ತಡಗಳನ್ನು ತಡೆಗಟ್ಟಬಹುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಮಾತನಾಡಿ, ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಪ್ರತಿನಿತ್ಯ ಸಮಸ್ಯೆಗಳನ್ನು ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಮುಕ್ತವಾಗಿ ಚರ್ಚಿಸುವ ಮೂಲಕ ಒತ್ತಡಗಳಿಂದ ಹೊರ ಬರಬಹುದು ಎಂದು ಹೇಳಿದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್ ಬಸರೆಡ್ಡಿ, ಮಾನಸಿಕವಾಗಿ ಒತ್ತಡಕ್ಕೆ ಒಳಗಾದವರು ದೈಹಿಕ, ಮಾನಸಿಕ, ಆರ್ಥಿಕ, ಸಾಮಾಜಿಕ, ಆತ್ಮಹತ್ಯೆ ಆಲೋಚನೆಗಳಿಂದ ಮನಸ್ಸನ್ನು ನಿಯಂತ್ರಣದಲ್ಲಿ ಇಡಬೇಕು. ಮಾನಸಿಕ ಆರೋಗ್ಯವು ಕುಟುಂಬದ ಅನುವಂಶಿಕತೆಯಿಂದ ಸಹ ಬರುತ್ತದೆ. ಮಾನಸಿಕ ಆರೋಗ್ಯವನ್ನು ಜವಾಬ್ದಾರಿಯಿಂದ ಚಿಕಿತ್ಸೆ ನೀಡಿದರೆ ಅವರು ಗುಣಮುಖರಾಗುತ್ತಾರೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಜಿಲ್ಲಾ ಮಾನಸಿಕ ಮನೋರೋಗ ತಜ್ಞ ಡಾ.ನಂದ ಕಿಶೋರ್, ಮಾನವನು ದೈಹಿಕ ಆರೋಗ್ಯಕ್ಕೆ ನೀಡಿದಷ್ಟು ಪ್ರಾತಿನಿಧ್ಯತೆ ಮಾನಸಿಕ ಆರೋಗ್ಯಕ್ಕೆ ನೀಡಬೇಕು. ಪಂಚೇಂದ್ರಿಯಗಳಿಂದ ಮೆದುಳು ಮತ್ತು ಮನಸ್ಸುನ್ನು ನಿಯಂತ್ರಣದಲ್ಲಿ ಇರಿಸಬೇಕು.ಉದ್ವೇಗ, ಆಲೋಚನೆ ಮಾನಸಿಕ ಸ್ವಸ್ತತೆಗೆ ಕಾರಣವಾಗುತ್ತವೆ. ವ್ಯಕ್ತಿತ್ವ ಬದಲಾವಣೆ ಮತ್ತು ಬೆಳವಣಿಗೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಕೆಲಸದ ಸ್ಥಳ ಮತ್ತು ಕೌಟುಂಬಿಕ ಒಡನಾಟದಲ್ಲಿ ಸ್ಮಾಟ್ಫೋðನ್‌ಗಳು ಸದ್ದಿಲ್ಲದೆ ಮನುಷ್ಯರ ಮೇಲೆ ಒತ್ತಡ ಹೆಚ್ಚಿಸುತ್ತಿವೆ. ವಾರಕ್ಕೊಂದು ದಿನ ಮೊಬೈಲ್ ಬಳಕೆ ನಿಲ್ಲಿಸಿದಲ್ಲಿ ಮಾನಸಿಕ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ತಿಳಿಸಿದರು.
ಮಾನಸಿಕ ಆರೋಗ್ಯ ಹಿಡಿತದಿಂದ ಒತ್ತಡಗಳನ್ನು ನಿವಾರಣೆ ಮಾಡಬೇಕು. ಮಕ್ಕಳಿಗೆ ಮಾನಸಿಕ ಆರೋಗ್ಯದ ಮತ್ತು ಅವುಗಳ ಕುರಿತ ಉದ್ಯೋಗಾವಕಾಶಗಳಿಗೆ ದಾರಿ ಮಾಡಿಕೊಡುವ ಉದ್ದೇಶವಿದೆ ಎಂದು ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ದೂಪಂ ಸತೀಶ್ ತಿಳಿಸಿದರು.ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ವೀರೇಂದ್ರ ಕುಮಾರ್ ಮಾತನಾಡಿದರು.
ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ, ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ವಿದ್ಯಾಲಯದ ಸಂಯೋಜಕ ಡಾ.ಸೈಯದಾ.ಕೆ.ತನ್ವೇರ್ ಫಾತಿಮ ಸೇರಿದಂತೆ ವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.