ಬ್ಯಾಡಗಿ: ಸಾಮಾಜಿಕ ನ್ಯಾಯ ಇದೊಂದು ತಾತ್ವಿಕ ಸಿದ್ಧಾಂತ, ಸಮಾಜದಲ್ಲಿನ ಸಂಪತ್ತು ಮತ್ತು ಸೌಲಭ್ಯ ಏಕ ವ್ಯಕ್ತಿಯ ಹಿಡಿತದಲ್ಲಿರಬಾರದು ಎಂಬುದು ಸಂವಿಧಾನದ ಆಶಯ. ಹೀಗಾಗಿ ವಂಚಿತ ಪ್ರತಿಯೊಬ್ಬ ವ್ಯಕ್ತಿಯೂ ಕಾನೂನು ಹೋರಾಟದ ಮೂಲಕ ಸಾಮಾಜಿಕ, ಆರ್ಥಿಕ ಸಂಪನ್ಮೂಲ ಪಡೆದುಕೊಳ್ಳಬಹುದಾಗಿದೆ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ವರಿ ಪುರಾಣಿಕ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸಾಮಾಜಿಕ ನ್ಯಾಯ ದಿನಾಚರಣೆ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಭಿನ್ನ ಜನರಿಗೆ ವಿಭಿನ್ನ ಅಗತ್ಯತೆ ಆದ್ಯತೆಗಳಿವೆ. ಇದರಲ್ಲಿ ನಿರ್ದಿಷ್ಟ ಸಂದರ್ಭಗಳಿಗೆ ಅನುಗುಣವಾಗಿ ಸಂಪನ್ಮೂಲ ಒದಗಿಸುವುದು ಸರ್ಕಾರದ ಕರ್ತವ್ಯ ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಉದ್ಯೋಗದಂತಹ ಅಗತ್ಯ ಸೇವೆಗಳಿಂದ ಪ್ರಯೋಜನ ಪಡೆಯಲು ಎಲ್ಲಾ ವ್ಯಕ್ತಿಗಳಿಗೆ ಸಮಾನ ಅವಕಾಶವಿದೆ ಎಂದರು.ಮಾನವ ಹಕ್ಕುಗಳು: ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಸ್ವಾತಂತ್ರ್ಯ ರಕ್ಷಿಸಬೇಕಾಗುತ್ತದೆ, ಇದರಿಂದ ಅವರ ಜೀವನದ ಮೇಲೆ ಪರಿಣಾಮ ಬೀರಲಿದ್ದು ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನ ಯಾರಿಂದಲೂ ನಡೆಯಬಾರದು ಇದು ಕಾನೂನಿಗೆ ವಿರುದ್ಧವಾಗಿದೆ, ವೈವಿಧ್ಯತೆಯಲ್ಲಿ ಏಕತೆ ದೇಶದ ಮೂಲ ಮಂತ್ರ ಹೀಗಾಗಿ ಜನಾಂಗ, ಲಿಂಗ, ಸಂಸ್ಕೃತಿ ಮತ್ತು ಸಾಮರ್ಥ್ಯದಲ್ಲಿನ ವ್ಯತ್ಯಾಸ ತಿಳಿಸುವ ಬದಲಿಗೆ ಅವುಗಳನ್ನು ಶಕ್ತಿಗಳಾಗಿ ಮೌಲ್ಯಮಾಪನ ಮಾಡುವ ಮೂಲಕ ಗೌರವಿಸಬೇಕಾಗಿದೆ ಎಂದರು.
ಫೆ.20 ವಿಶ್ವ ಸಾಮಾಜಿಕ ನ್ಯಾಯ ದಿವಸ: ಕಿರಿಯ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ತತ್ವಜ್ಞಾನಿಗಳಾದ ಪ್ಲೇಟೋ ಹಾಗೂ ಅರಿಸ್ಟಾಟಲ್ ಕೂಡ ಸಾಮಾಜಿಕ ನ್ಯಾಯ ಎಂಬ ಪದಗಳನ್ನು ಬಳಕೆ ಮಾಡಿದ್ದಾರೆ. ಆದರೆ 1840ರ ದಶಕದಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ವೇಳೆ ಸಂಪತ್ತಿನ ಅಸಮಾನತೆ ದೃಷ್ಟಿಕೋನದಿಂದ ಜನಪ್ರಿಯಗೊಂಡ ಸದರಿ ಪದವನ್ನು ವಿಶ್ವಸಂಸ್ಥೆಯು ಜಾಗತಿಕ ಶಾಂತಿಗೆ ಪರಿಗಣಿಸಿತು, ಹೀಗಾಗಿ ಪ್ರತಿವರ್ಷ ಫೆ. 20ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಜಿ.ಬಿ.ಯಲಗಚ್ಚ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಅಪರ ಸರ್ಕಾರಿ ವಕೀಲರಾದ ಪ್ರಭು ಶೀಗಿಹಳ್ಳಿ, ಸಹಾಯಕ ಸರ್ಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ, ಕೆ.ಆರ್. ಲಮಾಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೆಹಬೂಬಸಾಬ್ ನದಾಫ್, ವಕೀಲರ ಸಂಘದ ಕಾರ್ಯದರ್ಶಿ ಎಚ್.ಜಿ. ಮುಳುಗುಂದ, ಪ್ಯಾನಲ್ ವಕೀಲರಾದ ಭಾರತಿ ಕುಲಕರ್ಣಿ, ವಕೀಲರಾದ ಎಮ್.ಜೆ.ಮುಲ್ಲಾ, ಎಸ್.ಎಸ್.ಮೂಡೂರ, ಎಸ್.ಕೆ.ನಾಯಕ, ಎಸ್.ಎಸ್.ಕೊಣ್ಣೂರ, ಜಿ.ಬಿ.ಬಳಿಗಾರ, ಅರುಣ ಹಿತ್ತಲಮನಿ, ನಾಗರಾಜ್ ಬಣಕಾರ ಸೇರಿದಂತೆ ತಾಲೂಕು ಕಾನೂನು ಸೇವೆಗಳ ಸಮಿತಿ ಸಿಬ್ಬಂದಿ ಉಪಸ್ಥಿತರಿದ್ದರು.