ಸಾರಾಂಶ
ಸುರಪುರ ತಾಲೂಕಿನ ದೇವರಗೋನಾಲ ಗ್ರಾಪಂ ಕಚೇರಿಯಲ್ಲಿ ನಡೆದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ನಿಮಿತ್ತ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ತಾಲೂಕು ಸಿವಿಲ್ ನ್ಯಾಯಾಧೀಶರಾದ ಕೆ. ಮಾರುತಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸುರಪುರ
ಯಾವುದೇ ವಿಚಾರದಲ್ಲಿ ತಾರತಮ್ಯ ಮತ್ತು ಅಸಮಾನತೆ ಇಲ್ಲದೆ ವ್ಯಕ್ತಿಗೆ ಸಮಾನ ಹಕ್ಕು ನೀಡುವುದೇ ಸಾಮಾಜಿಕ ನ್ಯಾಯ ಎಂದು ತಾಲೂಕು ಸಿವಿಲ್ ನ್ಯಾಯಾಧೀಶರಾದ ಮಾರುತಿ ಕೆ. ಹೇಳಿದರು.ತಾಲೂಕಿನ ದೇವರಗೋನಾಲ ಗ್ರಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ನಿಮಿತ್ತ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವ ಸಂಸ್ಥೆಯು ಫೆ.20ರಂದು ವಿಶ್ವ ಸಾಮಾಜಿಕ ದಿನವಾಗಿ ಘೋಷಿಸಿತು. ಸಮಾಜದಲ್ಲಿ ಎಲ್ಲರೂ ಒಂದೇ, ಯಾರಲ್ಲೂ ತಾರತಮ್ಯ ಇರಬಾರದು ಎಂಬುದಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು, ಬಡತನ, ಲಿಂಗ, ದೈಹಿಕ ತಾರತಮ್ಯ, ಅನಕ್ಷರತೆ, ಧಾರ್ಮಿಕ ತಾರತಮ್ಯ ನಿರ್ಮೂಲನೆ ಮಾಡಲು ಸಮುದಾಯ ಒಗ್ಗೂಡಿಸುವುದು ಅಗತ್ಯವಾಗಿದೆ. ಜಾತಿ, ವಯಸ್ಸು, ಜನಾಂಗೀಯತೆ, ಧರ್ಮ, ಸಂಸ್ಕೃತಿ ಅಥವಾ ಅಂಗವೈಕಲ್ಯ ಆಧರಿಸಿದ ಅಡೆತಡೆ ನಿವಾರಿಸಲು ಯುವಕರನ್ನು ಜಾಗೃತಿಗೊಳಿಸಬೇಕಿದೆ. ಸಾಮಾಜಿಕ ನ್ಯಾಯದ ವಿಶ್ವ ದಿನವು ಎಲ್ಲರಿಗೂ ಉತ್ತಮವಾದ ನ್ಯಾಯಯುತ ಪ್ರಪಂಚ ರಚಿಸುವ ಅಗತ್ಯವಿದೆ ಎಂದು ತಿಳಿಸಿದರು.
ಹೆಚ್ಚುವರಿ ನ್ಯಾಯಾಧೀಶ ಬಸವರಾಜ, ಗ್ರಾಪಂ ಅಧ್ಯಕ್ಷೆ ಗಂಗಮ್ಮ ಲಕ್ಷ್ಮಣ, ವಕೀಲ ಸಂಘದ ಅಧ್ಯಕ್ಷ ರಮಾನಂದ ಕವಲಿ, ವಕೀಲರ ಸಂಘದ ಪ್ರ.ಕಾರ್ಯದರ್ಶಿ ನಂದಕುಮಾರ ಬಾಂಬೆಕರ, ಎಂ.ಟಿ. ಮಂಗಿಹಾಳ, ಪಿಎಸ್‌ಐ ಶರಣಪ್ಪ, ವಕೀಲ ಹಣಮಂತ ಗೋನಾಲ, ರವಿಶಂಕರ ಕಟ್ಟಿಮನಿ, ಮಲ್ಲಿಕಾರ್ಜುನಯ್ಯ ಹಿರೇಮಠ, ಸವಿತಾ ಮಾಲಿ ಪಾಟೀಲ್, ಪಿಡಿಒ ಸತೀಶ ಆಳೂರ ಸೇರಿ ಇತರರಿದ್ದರು. ಉಪನ್ಯಾಸಕ ಭೀಮಪ್ಪ ದೊಡ್ಡಮನಿ ನಿರೂಪಿಸಿ, ವಂದಿಸಿದರು.