ಕಾಂಗ್ರೆಸ್ಸಿನಿಂದ ಸಾಮಾಜಿಕ ನ್ಯಾಯ ಅಸಾಧ್ಯ- ಮಾಜಿ ಡಿಸಿಎಂ ಗೋವಿಂದ ಕಾರಜೋಳ

| Published : Dec 24 2023, 01:45 AM IST

ಕಾಂಗ್ರೆಸ್ಸಿನಿಂದ ಸಾಮಾಜಿಕ ನ್ಯಾಯ ಅಸಾಧ್ಯ- ಮಾಜಿ ಡಿಸಿಎಂ ಗೋವಿಂದ ಕಾರಜೋಳ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ 1950ರಲ್ಲಿ ಮೊದಲಿಗೆ ಮೀಸಲಾತಿ ಹೋರಾಟ ನಡೆಯಿತು. ಆಗ ಎಸ್ಸಿ ಪಟ್ಟಿಯಲ್ಲಿ ಆರು ಜಾತಿಗಳಿದ್ದವು. ಈಗ 101 ಜಾತಿಗಳಾಗಿವೆ. ಇದರಲ್ಲೂ ಅವರಿಗೆ ನ್ಯಾಯ ನೀಡುವ ಬದಲು ವೋಟ್ ಬ್ಯಾಂಕ್‍ ರಾಜಕಾರಣ ಮಾಡಲಾಗುತ್ತಿದೆ.

ಕೊಪ್ಪಳ: ದೇಶದಲ್ಲಿ 60 ವರ್ಷಗಳ ಕಾಲ ಆಳ್ವಿಕೆ ನಡೆಸಿರುವ ಕಾಂಗ್ರೆಸ್ ಸರ್ಕಾರ ದಲಿತರನ್ನು ಉದ್ಧಾರ ಮಾಡಲು ಆಗಿಲ್ಲ. ಕಾಂಗ್ರೆಸ್ ಪಕ್ಷದಿಂದ ಸಾಮಾಜಿಕ ನ್ಯಾಯ ಅಸಾಧ್ಯ. ಬಿಜೆಪಿ ಸದಾ ಸಾಮಾಜಿಕ ನ್ಯಾಯದ ಪರವಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.ನಗರದ ಶಿವಶಾಂತ ಮಂಗಲ ಭವನದಲ್ಲಿ ಮಾದಿಗ ಮುನ್ನಡೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಸಮಾನತೆಗಾಗಿ ಹಿಂದೆ ದೊಡ್ಡ ಹೋರಾಟ ನಡೆದಿವೆ. ಜಾತಿ, ಧರ್ಮ, ದೇವರ ಹೆಸರಿನಲ್ಲಿ ಶೋಷಣೆ ನಡೆದಿವೆ. ಶೋಷಿತರ ಮೇಲೆತ್ತಲು ವಿಶ್ವಗುರು ಬಸವಣ್ಣ ಸಾಮಾಜಿಕ ಕ್ರಾಂತಿ ನಡೆಸಿದರು. ಭೂಮಿ ಮೇಲೆ ಜನಿಸಿದವರು ಯಾರೂ ಮೇಲಲ್ಲ, ಕೀಳಲ್ಲ ಎಂದು ಸಾರಿದವರು. ಈ ಸಮಾಜದಲ್ಲಿ ಗಂಡು, ಹೆಣ್ಣು ಎರಡೇ ಜಾತಿ ಎಂದು ಹೇಳಿದವರು. ಆದರೆ 900 ವರ್ಷ ಕಳೆದರೂ ಇನ್ನೂ ಶೋಷಣೆ ನಡೆಯುತ್ತಲೇ ಇದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರ ಪರ ಅಂಬೇಡ್ಕರ್‌ ಹೋರಾಡಿದರು ಎಂದರು.ದೇಶದಲ್ಲಿ 1950ರಲ್ಲಿ ಮೊದಲಿಗೆ ಮೀಸಲಾತಿ ಹೋರಾಟ ನಡೆಯಿತು. ಆಗ ಎಸ್ಸಿ ಪಟ್ಟಿಯಲ್ಲಿ ಆರು ಜಾತಿಗಳಿದ್ದವು. ಈಗ 101 ಜಾತಿಗಳಾಗಿವೆ. ಇದರಲ್ಲೂ ಅವರಿಗೆ ನ್ಯಾಯ ನೀಡುವ ಬದಲು ವೋಟ್ ಬ್ಯಾಂಕ್‍ ರಾಜಕಾರಣ ಮಾಡಲಾಗುತ್ತಿದೆ. ಮಾದಿಗರ ಮೀಸಲಾತಿಗೆ ರಾಜ್ಯದಲ್ಲಿ ನಿರಂತರ ಹೋರಾಟ ನಡೆದಾಗ ಅಂದಿನ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ಒಳ ಮೀಸಲಾತಿಗಾಗಿ ನ್ಯಾ.ಸದಾಶಿವ ಆಯೋಗ ರಚಿಸಿ ಆಯೋಗಕ್ಕೆ ಸಿಬ್ಬಂದಿ, ಹಣವನ್ನೂ ಕೊಟ್ಟಿರಲಿಲ್ಲ. ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಾಗ ಆಯೋಗಕ್ಕೆ ₹11 ಕೋಟಿ ನೀಡಿತಲ್ಲದೇ 2012ರಲ್ಲಿ ಆಯೋಗವು ಅಂದಿನ ಸಿಎಂ ಸದಾನಂದ ಗೌಡರಿಗೆ ವರದಿ ಒಪ್ಪಿಸಿತು. ಆಗಲೇ ನಾವು ಕೇಂದ್ರಕ್ಕೆ ಪತ್ರ ಬರೆದು 341 ಕಲಂನಡಿ ಒಳ ಮೀಸಲಾತಿಗೆ ಅಭಿಪ್ರಾಯ ಕೇಳಿದ್ದೆವು. ಆಗ ಸಂಸದ ಮುನಿಯಪ್ಪ ಮಾತೇ ಆಡಲಿಲ್ಲ. ಆಂಜನೇಯ, ತಿಮ್ಮಾಪುರ ಅವರಿಗೂ ಮನವಿ ಮಾಡಿದಾಗ ಮೀಸಲಾತಿ ಬಗ್ಗೆ ಮಾತನಾಡಿಲ್ಲ. ಅವರಿಗೆ ಅಧಿಕಾರ ಇಲ್ಲದಿದ್ದಾಗ ಒಳ ಮೀಸಲು ಕಾಳಜಿ ಇರುತ್ತೆ. ಅಧಿಕಾರ ಇದ್ದಾಗ ಕಾಳಜಿ ಇರಲ್ಲ ಎಂದು ಲೇವಡಿ ಮಾಡಿದರು.ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ನಮ್ಮ ಸರ್ಕಾರ ಒಳ ಮೀಸಲಾತಿಗೆ ಉಪ ಸಮಿತಿ ರಚನೆ ಮಾಡಿತ್ತು. ಆದರೆ ನಮ್ಮ ಸರ್ಕಾರ ಈ ಬಾರಿ ಅಧಿಕಾರ ಕಳೆದುಕಂಡಿತು. ಜನರಿಗೆ ಕಾಂಗ್ರೆಸ್ ಮೋಸ ಮಾಡುತ್ತಲೇ ಬಂದಿದೆ. ಅಧಿಕಾರಕ್ಕೆ ಬಂದ ದಿನವೇ ಒಳ ಮೀಸಲಾತಿ ಕೊಡುದಾಗಿ ಹೇಳಿತ್ತು. ಆದರೆ ಈ ವರೆಗೂ ಕೊಟ್ಟಿಲ್ಲ. ಹೈದ್ರಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾದಿಗ ಸಮಾಜದ ಹೋರಾಟ ನೋಡಿ ದುಃಖಿತರಾದರು ಎಂದರು.ಈಗ ಮಾದಿಗ ಸಮಾಜ ಸ್ವಾಭಿಮಾನದ ಸಮಾವೇಶ ನಡೆಸುತ್ತಿದೆ. ಸುಪ್ರೀಂ ಕೋರ್ಟಿನಲ್ಲಿ ಒಳ ಮೀಸಲಾತಿ ಕುರಿತು ಜ.17ಕ್ಕೆ ಚರ್ಚೆಗೆ ಬರುತ್ತಿದೆ. ನಾವೆಲ್ಲ ಪ್ರಧಾನಿ ಮೋದಿಯ ಕೈ ಬಲಪಡಿಸೋಣ ಎಂದು ಕರೆ ನೀಡಿದರು.ಮುಖಂಡ ಗಣೇಶ ಹೊರತಟ್ನಾಳ ಪ್ರಾಸ್ತಾವಿಕ ಮಾತನಾಡಿದರು.ಸಮಾವೇಶದಲ್ಲಿ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ್, ಎಂಎಲ್ಸಿ ಹೇಮಲತಾ ನಾಯಕ್, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಶಾಸಕ ಬಸವರಾಜ ದಢೇಸ್ಗೂರು, ಮಾದಿಗ ದಂಡೋರದ ಅಧ್ಯಕ್ಷ ಎಚ್.ನರಸಪ್ಪ, ವೆಂಕಟೇಶ ದೊಡ್ಡೇರಿ, ಚಂದ್ರಶೇಖರ ಪಾಟೀಲ್ ಹಲಗೇರಿ, ರಾಮಣ್ಣ ಬ್ಯಾನರ್ಜಿ, ಚಂದ್ರು ಕವಲೂರು, ಅಪ್ಪಣ್ಣ ಪದಕಿ, ಆರ್.ಲೋಕೇಶ ಉಪಸ್ಥಿತರಿದ್ದರು.