ಕನ್ನಡಪ್ರಭ ವಾರ್ತೆ ಕೆಜಿಎಫ್
ದೇಶದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯ. ದೇಶದೊಳಗೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಸಾಮಾಜಿಕ ನ್ಯಾಯ ಆಧಾರವಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ ತಿಳಿಸಿದರು.ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಹಯೋಗದಲ್ಲಿ ಕಮ್ಮಸಂದ್ರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶ್ವದಾದ್ಯಂತ ಲಿಂಗ, ವಯಸ್ಸು, ಜನಾಂಗೀಯ, ಧರ್ಮ, ಸಂಸ್ಕೃತಿ, ಬಡತನ, ನಿರುದ್ಯೋಗ, ಶಿಕ್ಷಣ, ವಲಸೆ, ಆರ್ಥಿಕ ಮುಂತಾದ ಸಾಮಾಜಿಕ ಸಮಸ್ಯೆಗಳು ಗಂಭೀರವಾಗಿವೆ. ಈ ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅವುಗಳನ್ನು ಸಂಪೂರ್ಣ ಕಿತ್ತುಹಾಕಲು ಪ್ರತಿ ವರ್ಷ ಫೆಬ್ರವರಿ ೨೦ರಂದು ವಿಶ್ವ ಸಾಮಾಜಿಕ ನ್ಯಾಯ ದಿನ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ೨೦೦೭ರ ಫೆಬ್ರವರಿ ೨೦ರಂದು ಈ ದಿನ ಅಂಗೀಕರಿಸಲಾಯಿತು. ೨೦೦೯ರಲ್ಲಿ ಈ ದಿನವನ್ನು ಆಚರಿಸಲು ಅನುಮೋದನೆ ನೀಡಿ ಸಮಾಜದ ಐಕ್ಯತೆ, ಸಾಮರಸ್ಯ, ಸೌಹಾರ್ದತೆ, ಮೂಲಭೂತ ಹಕ್ಕುಗಳ ನ್ಯಾಯವಿದ್ದರೆ ಸಮಾಜದ ಅಭಿವೃದ್ಧಿಯಾಗುತ್ತದೆ. ಇದರಿಂದ ದೇಶ ಅಭಿವೃದ್ಧಿಯಾಗುತ್ತದೆ. ದೇಶ ಅಭಿವೃದ್ಧಿಯಾದರೆ ವಿಶ್ವವೇ ಅಭಿವೃದ್ಧಿಯಾಗುತ್ತದೆ ಎಂಬುದು ವಿಶ್ವ ಸಂಸ್ಥೆಯ ಅಭಿಪ್ರಾಯವಾಗಿದೆ ಎಂದರು.
ವಕೀಲರ ಸಂಘದ ಪ್ರಧಾನ ಕಾರ‍್ಯದರ್ಶಿ ಜ್ಯೋತಿ ಬಸು ಮಾತನಾಡಿ, ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಪೂರ್ಣ ಉದ್ಯೋಗ , ಯೋಗ್ಯ ಕೆಲಸದ ಪ್ರಚಾರ, ಸಾರ್ವತ್ರಿಕ ಸಾಮಾಜಿಕ ರಕ್ಷಣೆ, ಲಿಂಗ ಸಮಾನತೆ, ಸಾಮಾಜಿಕ ಯೋಗಕ್ಷೇಮ ಹಾಗೂ ಎಲ್ಲರಿಗೂ ನ್ಯಾಯ ದೊರಕುವ ಪರಿಹಾರಗಳನ್ನು ಹುಡುಕುವ, ಅಂತಾರಾಷ್ಟ್ರೀಯ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ಈ ದಿನವೂ ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಜನರಲ್ಲಿ ಜಾಗೃತಿ ಮೂಡಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.ಕಾನೂನು ಸೇವೆಗಳ ಪ್ಯಾನಲ್ ವಕೀಲರಾದ ತಿಪ್ಪಾರೆಡ್ಡಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಸಾರ್ವಜನಿಕರ ತೆರಿಗೆ ಸೋರಿಕೆಯಾಗದಂತೆ ಕಟ್ಟನಿಟ್ಟಿನ ಕ್ರಮ ಕೈಗೊಂಡು ಅಭಿವೃದ್ಧಿ ಕಾರ‍್ಯಗಳಿಗೆ ಬಳಸುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಎಲ್ಲ ವಿವರಗಳನ್ನು ನಾಮಫಲಕದಲ್ಲಿ ಬಹಿರಂಗಪಡಿಸಬೇಕು. ಅಭಿವೃದ್ಧಿಯಲ್ಲಿ ನ್ಯೂನತೆಗಳು ಕಂಡು ಬಂದಾಗ ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಮಾತ್ರ ಸಾರ್ವಜನಿಕರು ಕಟ್ಟುವ ತೆರಿಗೆಗೆ ಸಮಾಜಿಕ ನ್ಯಾಯ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಸಿಡಿಪಿಒ ರಾಜೇಶ್ ಮಾತನಾಡಿ, ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ಬಗ್ಗೆ ಉಲ್ಲೇಖವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಇದಕ್ಕೆ ಮಾನ್ಯತೆ ನೀಡಿದಾಗ ಮಾತ್ರ ಸಮಾನತೆ ಬರಲು ಕಾರಣ ವಾಗುತ್ತದೆ ಎಂದರು.
ಸಭೆಯಲ್ಲಿ ಮಹಿಳಾ ಸ್ವಾಂತನ ಕೇಂದ್ರದ ಗೋಪಾಲ್, ಪಿಡಿಒ ವಸಂತ್‌ಕುಮಾರ್ ವಕೀಲರಾದ ಕೇಶವ ಮಘೇಂದ್ರನ್ ಉಪಸ್ಥಿತರಿದ್ದರು.