ಕನ್ನಡಪ್ರಭ ವಾರ್ತೆ, ಶೃಂಗೇರಿ

ನಮ್ಮ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರೀಕನನ್ನು ಸಮಾನವಾಗಿ ಕಾಣುತ್ತದೆ. ಸಂವಿಧಾನ ಪ್ರತಿ ನಾಗರೀಕನಿಗೂ ಮೂಲಭೂತ ಹಕ್ಕು ಹಾಗೂ ಕರ್ತವ್ಯ ನೀಡುವ ಜೊತೆಗೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ. ಸಾಮಾಜಿಕ ನ್ಯಾಯವೇ ನಮ್ಮ ಸಂವಿಧಾನದ ಮೂಲ ತತ್ವ ಎಂದು ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.

ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಬದುಕಬೇಕು. ವಚನಕಾರರು ಕರ್ನಾಟಕದಲ್ಲಿ ಸಾಮಾಜಿಕ ಸಮಾನತೆ ಮುಂದುವರೆಸಿದರು. ಕನಕದಾಸರು, ಪುರಂದರ ದಾಸರು ಸಮಾಜ ದಲ್ಲಿನ ಜಾತಿಯತೆ, ಸಮಾಜಿಕ ಅಸಮಾನತೆ ಹೋಗಲಾಡಿಸಲು ದುಡಿದರು. ಸ್ವಾತಂತ್ರ್ಯ ಬಂದ ನಂತರ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದವರು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಿ.ಎನ್.ಶಾಮರಾವ್ ಎಂದರು.

ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ, ಆರೋಗ್ಯ ಸಹಿತ ಎಲ್ಲಾ ರೀತಿ ಮೂಲ ಸೌಕರ್ಯವನ್ನ ಜಾತಿ, ಧರ್ಮ,ಲಿಂಗ ತಾರತಮ್ಯ ಭೇದ ಭಾವದಿಂದ ಕಾಣದೇ ನೀಡಬೇಕು. ದೇಶದ ಪ್ರತಿಯೊಬ್ಬರೂ ಸಂವಿಧಾನದ ಕರ್ತವ್ಯ ಪಾಲಿಸಬೇಕು. ಹಕ್ಕುಗಳನ್ನು ಅನುಭವಿಸುವ ಜೊತೆಗೆ ಕರ್ತವ್ಯ ಪಾಲಿಸಬೇಕು.

ಸಾಮಾಜಿಕ ಅಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆ ಪಾಲಿಸದೇ ಇರುವುದು ಒಂದು ಪಿಡುಗಾಗಿ ಈಗ ನಮ್ಮೆಲ್ಲರನ್ನು ಕಾಡುತ್ತಿದೆ.ಸಾಮಾಜಿಕ ನ್ಯಾಯ ಎಂದರೆ ಕೇವಲ ಕಾನೂನಿನ ಮುಂದೆ ಎಲ್ಲರು ಸಮಾನರಾಗಿರುವುದು ಎಂದು ಮಾತ್ರವಲ್ಲ. ಅದು ಸಮಾಜದಲ್ಲಿರುವ ಬಡತನ, ಸಾಮಾಜಿಕ ಅಸಮಾನತೆ, ಲಿಂಗತಾರತಮ್ಯ, ನಿರುದ್ಯೋಗ, ಅಸ್ಪೃಷ್ಯತೆ ಯಂತಹ ಅಡೆತಡೆ ನಿವಾರಿಸುವುದಾಗಿದೆ. ಜಾತಿ,ಧರ್ಮ,ಲಿಂಗ ಅಥವಾ ಆರ್ಥಿಕ ಸ್ಥಿತಿ ಆಧಾರದ ಮೇಲೆ ಸಮಾಜದ ಯಾವುದೇ ವ್ಯಕ್ತಿ ಅವಕಾಶಗಳಿಂದ ವಂಚಿತನಾಗಬಾರದು ಎಂಬುದೇ ಸಾಮಾಜಿಕ ನ್ಯಾಯ ದಿನಾಚರಣೆ ದಿನದ ಮುಖ್ಯ ಉದ್ದೇಶ. ರಾಷ್ಟ್ರ ನಿಜವಾಗಿ ಅಭಿವೃದ್ದಿ ಪಥದಲ್ಲಿ ಸಾಗಲು ಸಾಮಾಜಿಕ ನ್ಯಾಯ ಪಾಲಿಸಬೇಕಾಗುತ್ತದೆ.


ಕಾಲೇಜಿನ ಪ್ರಾಂಶುಪಾಲರಾದ ಭಾರತೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸಾಮಾನ್ಯ ಕಾನೂನಿನ ಜ್ಞಾನ ಪಡೆದ ಕಾನೂನುಗಳು ಇಂದು ದೈನಂದಿನ ಜೀವನದಲ್ಲಿ ಅತ್ಯಗತ್ಯ. ರಸ್ತೆ ಸಂಚಾರಿ ನಿಯಮಗಳು,ಸಾಮಾನ್ಯ ಕಾಯ್ದೆಗಳು ಇಂದು ಅತ್ಯಗತ್ಯ ಎಂದರು.ವಕೀಲರಾದ ಜಿ.ಎಂ ಸತೀಶ್ ಸಾಮಾಜಿಕ ನ್ಯಾಯ ಕುರಿತು ಉಪನ್ಯಾಸ ನೀಡಿದರು.ವಕೀಲರ ಸಂಘದ ಅಧ್ಯಕ್ಷ ಮಹೇಶ್,ಸರ್ಕಾರಿ ವಕೀಲೆ ಹರಿಣಾಕ್ಷಿ ಮತ್ತಿತರರು ಇದ್ದರು.

21 ಶ್ರೀ ಚಿತ್ರ 1-

ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಮಾಜಿಕ ನ್ಯಾಯ ದಿನಾಚಾರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ನ್ಯಾ.ಆರ್.ಎಸ್.ಜೀತು ಮಾತನಾಡಿದರು.