ನಿಗಮ, ಮಂಡಳಿ ನೇಮಕ ವೇಳೆ ಸಾಮಾಜಿಕ ನ್ಯಾಯ ಪಾಲಿಸಲಿ

| Published : Sep 21 2024, 01:59 AM IST

ನಿಗಮ, ಮಂಡಳಿ ನೇಮಕ ವೇಳೆ ಸಾಮಾಜಿಕ ನ್ಯಾಯ ಪಾಲಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಾಮಾಜಿಕ ಸಮುಚ್ಚಯವನ್ನು ಸ್ಥಾಪಿಸಬೇಕು.

ಬಳ್ಳಾರಿ: ರಾಜ್ಯ ಸರ್ಕಾರ ರಾಜ್ಯವಾರು, ಕ್ಷೇತ್ರವಾರು, ಜಿಲ್ಲಾವಾರು ನಿಗಮ, ಮಂಡಳಿಗಳು ಹಾಗೂ ವಿವಿಧ ಸಮಿತಿಗಳಿಗೆ ಸದಸ್ಯರನ್ನು ನೇಮಕಾತಿ ಮಾಡುವ ವೇಳೆ ಸಾಮಾಜಿಕ ನ್ಯಾಯ ಪಾಲಿಸಬೇಕು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಮಕಾತಿ ವೇಳೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ, ಸಾಮಾನ್ಯ ವರ್ಗ, ಓರ್ವ ಮಹಿಳೆ, ಒಬ್ಬ ವಕೀಲ, ಓರ್ವ ಪದವೀಧರ ಹೀಗೆ ಬೇರೆ ಬೇರೆ ವಿಭಾಗದವರನ್ನು ನೇಮಕ ಮಾಡಿ ಸೇವೆಗೆ ಅವಕಾಶ ನೀಡಬೇಕು. ಈಗಿನ ಮೂರು ಹಂತಗಳಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿರುವ ಬಳ್ಳಾರಿ ಜಿಲ್ಲೆಯಲ್ಲಿಯೇ 2405 ಜನ ಕಾಂಗ್ರೆಸ್ಸಿಗರಿಗೆ ನೇಮಕಾತಿ ಮಾಡುವ ಅವಕಾಶವಿದೆ. ಆಶ್ರಯ ಸಮಿತಿ, ಆರಾಧನಾ ಸಮಿತಿ, ಅಕ್ರಮ ಸಕ್ರಮ, ಭೂನ್ಯಾಯ ಮಂಡಳಿ, ಸಿಐಟಿಬಿ, ನಗರಾಭಿವೃದ್ಧಿ ಸಮಿತಿಗಳು ಮತ್ತು ರಾಜ್ಯಸಮಿತಿಗಳ ಸಂಖ್ಯೆ ಸೇರಿ ರಾಜ್ಯದಲ್ಲಿ ಒಟ್ಟು ಒಂದು ಲಕ್ಷ ಜನರಿಗೆ ಅಧಿಕಾರ ಲಭಿಸುವ ಅವಕಾಶವಿದೆ. ಸಮಿತಿಗಳಿಗೆ ಸದಸ್ಯರ ನೇಮಕದಿಂದ ಪಕ್ಷಕ್ಕಾಗಿ ಶ್ರಮಿಸಿದವರನ್ನು ಪರಿಗಣಿಸಿದಂತಾಗುತ್ತದೆ. ಸಮಿತಿಗಳ ನೇಮಕದಿಂದ ಸರ್ಕಾರದಿಂದ ಯಾವುದೇ ರೀತಿಯ ಹಣಕಾಸಿನ ತೊಂದರೆಯಾಗುವುದಿಲ್ಲ. ಆದರೆ, ಬರೀ ಹಾಳೆಯ ಮೇಲೆ ನೇಮಕಾತಿ ಘೋಷಿಸದೇ ನಾಡಿನಾದ್ಯಂತ ಏಕರೂಪದ ಕಾರ್ಡ್‌ಗಳನ್ನು (ಗುರುತಿನ ಚೀಟಿ) ನೀಡಬೇಕು. ಇದಕ್ಕೆ ಖರ್ಚಾಗುವ ₹250 ಪಕ್ಷ ಅಥವಾ ಸರ್ಕಾರದ ಮೇಲೆ ಹಾಕದೇ ನೇಮಕಾತಿ ಸದಸ್ಯರೇ ಭರಿಸುವಂತೆ ಮಾಡುವುದರಿಂದ ಪಕ್ಷ ಅಥವಾ ಸರ್ಕಾರಕ್ಕೂ ಯಾವುದೇ ಹಣಕಾಸಿನ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದರು.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಾಮಾಜಿಕ ಸಮುಚ್ಚಯವನ್ನು ಸ್ಥಾಪಿಸಬೇಕು. ಇದಕ್ಕಾಗಿ ಪ್ರತಿ ಜಿಲ್ಲೆಗೆ ಎರಡರಿಂದ ಎರಡುವರೆ ಎಕರೆ ಜಮೀನು ಗುರುತಿಸಿ, ಆ ಜಾಗದಲ್ಲಿ ಸಮುಚ್ಚಯ ನಿರ್ಮಿಸಬೇಕು. ಇಲ್ಲಿ ಮಡಿವಾಳ ಸಮುದಾಯ, ಕ್ಷೌರಿಕ, ವಿಶ್ವಕರ್ಮ, ಉಪ್ಪಾರ ಸೇರಿದಂತೆ ಅಹಿಂದ ಸಮುದಾಯಗಳಿಗೆ ಪ್ರತ್ಯೇಕ ಸಭಾಂಗಣ ಹಾಗೂ ಸಾಮೂಹಿಕವಾಗಿ ಕಾರ್ಯಕ್ರಮ ವೇದಿಕೆ ನಿರ್ಮಿಸಬೇಕು. ಇದರಿಂದ ಅಹಿಂದ ಸಮುದಾಯಗಳು ಮದುವೆ, ಸಭೆ, ಸಮಾರಂಭ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ನಿಗಮ ಮಂಡಳಿಗಳು ಹಾಗೂ ವಿವಿಧ ಸಮಿತಿಗಳಿಗೆ ಸದಸ್ಯರನ್ನು ನೇಮಕಾತಿ ಹಾಗೂ ಸಾಮಾಜಿಕ ಸಮುಚ್ಚಯ ನಿರ್ಮಾಣ ಕುರಿತಂತೆ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರಿಗೆ ಮನವಿ ಕಳುಹಿಸಿಕೊಡಲಾಗಿದೆ ಎಂದರು.

ಕಾಂಗ್ರೆಸ್‌ ಮುಖಂಡರಾದ ಶಮೀಮ್ ಜಕ್ಲಿ, ಡಿ.ವೆಂಕಟರಮಣ ಸುದ್ದಿಗೋಷ್ಠಿಯಲ್ಲಿದ್ದರು.