ಹರಪನಹಳ್ಳಿ: ಇಂದಿನ ಆಧುನಿಕ ಭರಾಟೆಯಲ್ಲಿ ಸಾಮಾಜಿಕ ನಾಟಕಗಳು ಕಣ್ಮರೆಯಾಗುತ್ತಿವೆ ಎಂದು ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ರಂಗಮಂದಿರದಲ್ಲಿ ಕೋಲಶಾಂತೇಶ್ವರ ರಥೋತ್ಸವದ ಪ್ರಯುಕ್ತ ಗುರುವಾರ ರಾತ್ರಿ ನಡೆದ ಸಂಗ್ಯಾ-ಬಾಳ್ಯಾ ಅರ್ಥಾತ್ ಮಿತ್ರ ದ್ರೋಹಿ ಎಂಬ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಯುವಕರು ಟಿವಿ, ಮೊಬೈಲ್ ಗೆ ಮಾರು ಹೋಗಿದ್ದಾರೆ, ಗ್ರಾಮೀಣ ಭಾಗದ ಕಲೆಗಳನ್ನು ನಾವೆಲ್ಲರೂ ಉಳಿಸಿ, ಬೆಳೆಸಿ, ಪ್ರೋತ್ಸಾಹಿಸಬೇಕು ಎಂದರು.
ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ರಮೇಶ್ ಅಂಚಿನ ಮನೆ ಮಾತನಾಡಿ ಪ್ರತಿಯೊಂದು ಜಾತ್ರೆ, ಹಬ್ಬ, ರಥೋತ್ಸವ ಹಾಗೂ ಸುಗ್ಗಿ ಕಾಲದಲ್ಲಿ ಹಿರಿಯರು ನಾಟಕಗಳನ್ನು ನಡೆಸಿಕೊಂಡು ಬರುತ್ತಿದ್ದರು ಹಾಗೆಯೇ ಅರಸೀಕೆರೆಯಲ್ಲಿ ಶ್ರೀ ಮಠದಿಂದ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.ಜಿಲ್ಲೆಯ ಆರು ತಾಲೂಕುಗಳಲ್ಲಿ ಹಿರಿಯ ಕಲಾವಿದರನ್ನು ಗುರುತಿಸಿ ಹಂಪಿ ವಿಶ್ವವಿದ್ಯಾಲಯದಲ್ಲಿ ಸನ್ಮಾನಿಸಿ ಪ್ರಶಸ್ತಿ ವಿತರಿಸಲಾಗುವುದು. ಇದೇ 27ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಹಿರಿಯ ಕಲಾವಿದರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುವುದು, ಎಲ್ಲಾ ಹಿರಿಯ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಲಾವಿದರ ಒಕ್ಕೂಟದ ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷ ಡಾ.ಉಮಾಶಂಕರ್, ಹರಪನಹಳ್ಳಿ ತಾಲೂಕು ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ಕೆ.ಬಿ.ಷಣ್ಮುಖಪ್ಪ, ಎಚ್.ಪರಶುರಾಮಪ್ಪ, ಕೆರೆಗುಡಿಹಳ್ಳಿ ಹಾಲೇಶ್, ನೂರುಲ್ಲ ಸಾಹೇಬ್, ಕೆಂಚಪ್ಪ, ನಾಗಮ್ಮ ಮಾಲವಿ, ಚಂದ್ರಪ್ಪ, ಮಂಜಪ್ಪ, ಎ.ಬಿ.ಚಿದಾನಂದಗೌಡ, ಡಿ.ರಂಗಪ್ಪ, ಹೆಗ್ಗಪ್ಪ, ಹನುಮಂತಪ್ಪ ಸೇರಿದಂತೆ ಕಲಾವಿದರು, ಗ್ರಾಮಸ್ಥರು ಇದ್ದರು.