ಸಮಾಜ ತಿದ್ದುವ ಕೆಲಸ ಶಿಕ್ಷಣದಿಂದ ಸಾಧ್ಯ

| Published : Nov 13 2023, 01:15 AM IST / Updated: Nov 13 2023, 01:16 AM IST

ಸಮಾಜ ತಿದ್ದುವ ಕೆಲಸ ಶಿಕ್ಷಣದಿಂದ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಡವರು ಶಿಕ್ಷಣದಿಂದ ವಂಚಿತರಾಗದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಸಾಕಾರಗೊಳಿಸಿ ಶೈಕ್ಷಣಿಕ ಉನ್ನತಿಗೆ ಮುಂದಾಗಿರುವಾಗ ಇದರ ಸದುಪಯೋಗ ಪ್ರಾಮಾಣಿಕವಾಗಿರಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಬಡವರು ಶಿಕ್ಷಣದಿಂದ ವಂಚಿತರಾಗದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಸಾಕಾರಗೊಳಿಸಿ ಶೈಕ್ಷಣಿಕ ಉನ್ನತಿಗೆ ಮುಂದಾಗಿರುವಾಗ ಇದರ ಸದುಪಯೋಗ ಪ್ರಾಮಾಣಿಕವಾಗಿರಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ತಾಲೂಕಿನ ಅಕ್ಕಿಆಲೂರಿನಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸರ್ಕಾರಿ ಮೆಟ್ರಿಕ್ ನಂತರದ ₹೫.೮೧ ಕೋಟಿ ವೆಚ್ಚದ ಬಾಲಕರ ವಸತಿ ನಿಲಯದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಸೌಲಭ್ಯ ಕೊಟ್ಟರೆ ಸಾಲದು ಸದುಪಯೋಗ ಮಾಡಿಕೊಳ್ಳಬೇಕು. ಅದೇ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಅಧ್ಯಯನದ ಮೂಲಕ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ನೀಡಿ ಉನ್ನತ ಹುದ್ದೆಗಳಿಗೆ ನೇಮಕಗೊಳ್ಳಬೇಕು. ಅದು ನಿಜವಾದ ಯಶಸ್ಸು. ಈಗ ಶೈಕ್ಷಣಿಕ ಜಾಗೃತಿ ಮೂಡಿದೆ. ಸಮಾಜ ತಿದ್ದುವ ಕೆಲಸ ಶಿಕ್ಷಣದಿಂದ ಸಾಧ್ಯ. ಮಹಾತ್ಮರ ಚಿಂತನೆಗಳ ಅರಿವು ಕೂಡ ಶಿಕ್ಷಣದ ಮೂಲಕ ಲಭ್ಯವಾಗಬೇಕು. ಈಗ ಸಮಾಜ ತಿದ್ದುವ ಹೊಣೆ ಸುಶಿಕ್ಷಿತರ ಮೇಲಿದೆ. ನಾವು ಪ್ರಕೃತಿ ಹಾಳು ಮಾಡಿ ಮಳೆ ಕೇಳುತ್ತಿದ್ದೇವೆ. ಒಳ್ಳೆಯದನ್ನು ಉಳಿಸಿ ಬೆಳೆಸಿಕೊಂಡು, ನಾಡಿಗೆ ಮಾರಕವಾದುದನ್ನು ದೂರವಿಟ್ಟು ದೇಶದ ಉಜ್ವಲ ಭವಿಷ್ಯಕ್ಕೆ ನಮ್ಮ ಕೊಡುಗೆ ಕೊಡೋಣ ಎಂದರು.

ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ ಮಾತನಾಡಿ, ಅಕ್ಕಿಆಲೂರು ಪ್ರಮುಖ ಶಿಕ್ಷಣ ಕೇಂದ್ರವಾಗಿದ್ದು, ಇಲ್ಲಿನ ವಸತಿ ನಿಲಯಗಳಿಗೆ ಹಲವು ಸೌಲಭ್ಯಗಳ ಅಗತ್ಯವಿದೆ. ಬರುವ ದಿನಗಳಲ್ಲಿ ಇಂತಹ ವಸತಿ ನಿಲಯಗಳು ಹಾಗೂ ಶಿಕ್ಷಣ ಕೇಂದ್ರಗಳಿಗೆ ಸರ್ಕಾರದ ಸೌಲಭ್ಯ ಒದಗಿಸಿದಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಉಪಕರಿಸಿದಂತಾಗುತ್ತದೆ ಎಂದರು.

ಭೂನ್ಯಾಯ ಮಂಡಳಿ ಸದಸ್ಯ ಯಾಸಿರ ಅರಾಫತ್ ಮಕಾನದಾರ ಮುಖ್ಯ ಅತಿಥಿಯಾಗಿ ಮಾತನಾಡಿ, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಈಗ ಆದ್ಯತೆ ಸಿಗುತ್ತಿದೆ. ಮೂಲಭೂತ ಸೌಕರ್ಯಗಳೂ ಬಹುಪಾಲು ಸಿಗುತ್ತಿದೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಬೇಕಾಗಿದೆ. ಈ ದೇಶದಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ಬೇಕು. ಶಾಲೆಗಳು ಸ್ಪರ್ಧಾತ್ಮಕ ಶಕ್ತಿ ಕೇಂದ್ರಗಳಾಗಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಂಗಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮಖಬೂಲಹ್ಮದ ರುಸ್ತುಂಖಾನನವರ, ಉಪಾಧ್ಯಕ್ಷೆ ಶೇಖವ್ವ ತಗಳವಾರ, ವಿವಿಧ ಮುಖಂಡರಾದ ಮಂಜುನಾಥ ಗೂರನವರ, ಭರಮಣ್ಣ ಶಿವೂರ, ಈರಣ್ಣ ಬೈಲವಾಳ, ಶಿವು ತಳವಾರ, ಗೀತಾ ಪೂಜಾರ, ತಾಪಂ ಮಾಜಿ ಸದಸ್ಯ ಮೆಹಬೂಬಲಿ ಬ್ಯಾಡಗಿ, ಸತ್ತರಸಾಬ ಅರಳೇಶ್ವರ, ಬಸವರಾಜ ಹಾಲಭಾವಿ ಮೊದಲಾದವರು ಅತಿಥಿಗಳಾಗಿದ್ದರು.