ಕನ್ನಡಪ್ರಭ ವಾರ್ತೆ ಬೆಳಗಾವಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ನಿಮಿತ್ತ ನಗರದಲ್ಲಿ ಭಾನುವಾರ ಸಂಭ್ರಮದಿಂದ ಬೈಕ್ ರ್‍ಯಾಲಿ ನಡೆಯಿತು. ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಬಸವ ಜಯಂತಿ ನಿಮಿತ್ತ ನಗರದಲ್ಲಿ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿಗಳು ಚಾಲನೆ ನೀಡಿದರು.
ವಾಹನದಲ್ಲಿ ಬಸವಣ್ಣನವರ ಭಾವಚಿತ್ರ, ಪುತ್ಥಳಿ ಇರಿಸಿ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ರ‍್ಯಾಲಿಯಲ್ಲಿ ನೂರಾರು ಬೈಕ್ ಸವಾರರು ಹಾಗೂ ಬಸವಣ್ಣನವರ ಅನುಯಾಯಿಗಳು ಶ್ವೇತ ವರ್ಣದ ವಸ್ತ್ರ ಹಾಗೂ ಟೋಪಿಗಳನ್ನು ಧರಿಸಿ, ಬಸವೇಶ್ವರರ ಭಾವಚಿತ್ರವಿರುವ ಧ್ವಜಗಳನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿಕೊಂಡು ರ್‍ಯಾಲಿ ನಡೆಸಿದರು. ಮಹಿಳೆಯರು, ಯುವಕರು ಸೇರಿ ಎಲ್ಲ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಬೈಕ್ ರ್‍ಯಾಲಿಯು ಬಸವೇಶ್ವರ ಸರ್ಕಲ್‌ದಿಂದ ಆರಂಭವಾಗಿ ತಿಳಕವಾಡಿ, ಅನಗೋಳ, ವಡಗಾಂವ ಖಾಸಬಾಗ, ಕಪಿಲೇಶ್ವರ ರಸ್ತೆ, ಕರ್ನಾಟಕ ಚೌಕ್, ರವಿವಾರಪೇಟೆ, ಖಡೇ ಬಜಾರ್, ಮಾರುತಿ ಗಲ್ಲಿ , ರಾಮದೇವ ಗಲ್ಲಿ, ಕಾಲೇಜು ರಸ್ತೆ , ಚನ್ನಮ್ಮ ಸರ್ಕಲ್, ಸಿವಿಲ್ ಆಸ್ಪತ್ರೆ, ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜು ರಸ್ತೆ, ಲಿಂಗಾಯತ ಭವನ, ಶ್ರೀನಗರ ಗಾರ್ಡನ್, ರಾಣಿ ಚನ್ನಮ್ಮ ಸೊಸೈಟಿ, ಸಾಯಿ ಮಂದಿರ, ಬಾಲ ಭವನ, ಮಹಾಂತೇಶ ನಗರ ಬಸ್ ನಿಲ್ದಾಣ, ಸಿದ್ನಾಳ ಕ್ರಾಸ್ , ಕೆಎಂಎಫ್ ಡೈರಿ, ದತ್ತ ಮಂದಿರ ಮಾರ್ಗವಾಗಿ ಸಾಗಿ ಫ.ಗು.ಹಳಕಟ್ಟಿ ಭವನದ ಬಳಿ ಸಮಾರೋಪಗೊಂಡಿತು.ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಆಶೀರ್ವಚನ ನೀಡಿದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿಗಳು, ಬಸವಣ್ಣನವರ ಮಾನವೀಯತೆ ವಿಚಾರಗಳನ್ನು ಅಳವಡಿಸಿಕೊಳ್ಳುವ ಕೆಲಸ ಮೊದಲು ನಡೆಯಬೇಕಿದೆ. ನೈತಿಕ ಬದುಕು ನಮ್ಮದಾದರೆ ಸಮಾಜ ಸುಧಾರಣೆ ಸಾಧ್ಯ. ಹಾಗಾಗಿ ನಡೆನುಡಿ ಒಂದಾಗಿ ಜೀವನ ರೂಪಿಸಿಕೊಳ್ಳುವ ಮಹತ್ತರ ಕಾರ್ಯ ಎಲ್ಲರಿಂದಾಗಲಿ ಎಂದು ಆಶಿಸಿದರು.
ಸರ್ಕಾರಿ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ವಿಶ್ವಗುರು ಬಸವಣ್ಣನವರು ಸಮಾನತೆಯ ಹರಿಕಾರರು. ಅವರ ಸಂದೇಶ ಇಂದಿಗೂ ಲೋಕಮಾನ್ಯವೆನಿಸಿದೆ. ಪ್ರಸ್ತುತ ಯುದ್ಧ ಹಾಗೂ ಜಾತಿಗಳ ಸಂಘರ್ಷದಲ್ಲಿ ಬದುಕುತ್ತಿರುವ ನಮಗೆ ಬಸವಣ್ಣನವರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವೆನಿಸಿದೆ ಎಂದರು.ಇಂದು ನಾವೆಲ್ಲ ಒಳಪಂಗಡಗಳನ್ನು ಮಾಡಿಕೊಂಡು ಹೋರಾಡುತ್ತಿದ್ದೇವೆ. ಅದನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಸಮಾಜ ಕಟ್ಟಬೇಕಾಗಿದೆ. ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಪ್ರಗತಿಗಾಗಿ ಹೋರಾಡಿದರು. ಎಂಟುನೂರು ವರ್ಷಗಳಾದರೂ ಅವರ ವಿಚಾರಗಳು ಲೋಕ ಪೂಜ್ಯ ವೆನಿಸಿಕೊಂಡಿವೆ. ಹಾಗಾಗಿ ನಾವೆಲ್ಲರೂ ಅವರ ಸನ್ಮಾರ್ಗದಲ್ಲಿ ನಡಿಯೋಣ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಡಾ.ಎಚ್.ಬಿ.ರಾಜಶೇಖರ, ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿ ಅಧ್ಯಕ್ಷ ಬಾಲಚಂದ್ರ ಬಾಗಿ, ಬಸವ ಜಯಂತಿ ಉತ್ಸವ ಸಮಿತಿಯ ಸಂಚಾಲಕ ಬಸವರಾಜ ರೊಟ್ಟಿ, ವಿ.ಕೆ.ಪಾಟೀಲ, ಪ್ರಸಾದ ಹಿರೇಮಠ, ವಿದ್ಯಾ ಗೌಡರ, ಗುರುದೇವ ಪಾಟೀಲ ಸೇರಿದಂತೆ ಇತರರು ಇದ್ದರು.