ಮಹಿಳಾ ದಿನಾಚರಣೆ ಎಂದರೆ ಕೇವಲ ಹೂವು ನೀಡಿ ಶುಭಾಶಯ ಹೇಳುವ ದಿನವಲ್ಲ; ಮಹಿಳೆಯರ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟ ಸ್ಮರಿಸುವ ದಿನವಾಗಿದೆ

ಕುಕನೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕೇವಲ ಹಬ್ಬದಂತೆ ಆಚರಿಸುವುದಕ್ಕಿಂತ ಸಮಾಜದಲ್ಲಿ ಹೆಣ್ಣು–ಗಂಡಿನ ನಡುವೆ ಇರುವ ಲಿಂಗ ತಾರತಮ್ಯದ ಗೋಡೆ ಕೆಡವಲು ಸಂಕಲ್ಪ ಮಾಡುವ ದಿನವಾಗಿರಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದೇಶ್ ಮಾಳೆಕೊಪ್ಪ ಹೇಳಿದರು.

ತಾಲೂಕಿನ ಬಳಗೇರಿ ಗ್ರಾಮದಲ್ಲಿ ಗ್ರಾಪಂ ಹಾಗೂ ವಿಸ್ತಾರ್ ಸಂಸ್ಥೆಯ ಕನಸು ಕಿಶೋರಿ ಸಂಘಟನೆ ಸಹಯೋಗದಲ್ಲಿ ಭಾನುವಾರ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ನೀಡುವ ಶಿಕ್ಷಣದಲ್ಲಿಯೇ ‘ಇದು ಹುಡುಗರಿಗೆ, ಇದು ಹುಡುಗಿಯರಿಗೆ’ ಎಂಬ ವಿಭಜನೆ ಮಾಡುವ ಮನೋಭಾವ ಸಮಾಜದಲ್ಲಿ ಇನ್ನೂ ಕಾಣಿಸುತ್ತಿದೆ. ಹೆಣ್ಣುಮಕ್ಕಳು ಕೇವಲ ಅಡುಗೆಮನೆಗೆ ಸೀಮಿತ ಎಂಬ ಹಳೆಯ ಕಾಲದ ಚಿಂತನೆ ಇನ್ನೂ ಕೆಲವು ಕಡೆ ಜೀವಂತವಾಗಿರುವುದು ದುಃಖಕರ ಸಂಗತಿ. ಇಂತಹ ಮನೋಭಾವದಿಂದ ಹೊರಬಂದು ಸಮಾನತೆಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಮಹಿಳಾ ಹೋರಾಟಗಾರ್ತಿ ಹಾಗೂ ಸಮಾಜ ಚಿಂತಕಿ ಸರೋಜಾ ಬಾಕಳೆ ಮಾತನಾಡಿ, ಮಹಿಳಾ ದಿನಾಚರಣೆ ಎಂದರೆ ಕೇವಲ ಹೂವು ನೀಡಿ ಶುಭಾಶಯ ಹೇಳುವ ದಿನವಲ್ಲ; ಮಹಿಳೆಯರ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟ ಸ್ಮರಿಸುವ ದಿನವಾಗಿದೆ ಎಂದು ಹೇಳಿದರು.

ಪ್ರಗತಿಪರ ರೈತ ಮಹಿಳೆಯರಾದ ಸಂಪವ್ವ ಯಲ್ಲಪ್ಪ ಹಿರೇಮನಿ, ಈರಮ್ಮ ಹೊಂಬಳ ಮತ್ತು ಸಾವಿತ್ರಿ ಸೇರಿದಂತೆ ಹಲವು ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು.

ವಿಸ್ತಾರ್ ಸಂಸ್ಥೆಯ ಹಣಕಾಸು ಮತ್ತು ಆಡಳಿತಾಧಿಕಾರಿ ಯೇಸುಫ್ ಡಿಜೆ, ಸಂಸ್ಥೆಯ ಸಂಯೋಜಕಿಯರಾದ ಜಯಶ್ರೀ ಮತ್ತು ಕುಸುಮಾ, ಕ್ಯಾಂಪೈನ್ ಫೆಸಿಲಿಟೇಟರ್‌ಗಳಾದ ಆಲಿಸಬ್, ಕವಿತಾ, ಅನ್ವರ್ ಪಾಷಾ, ಲಕ್ಷ್ಮಿ ಬಳಗೇರಿ, ಶರಣಪ್ಪ ಬುದಗುಂಪಿ, ಪೋಸ್ಟ್ ಮಾಸ್ಟರ್ ರಾಧಿಕಾ, ಚೈತ್ರಾ ಕಟ್ಟಿಮನಿ ಇದ್ದರು.