ಸಾಮಾಜಿಕ ಜವಾಬ್ದಾರಿಯು ನಾಟಕಗಳ ಜೀವಾಳ: ರಂಗ ನಿರ್ದೇಶಕ ಎಚ್.ಜನಾರ್ದನ್

| Published : Mar 25 2025, 12:45 AM IST

ಸಾರಾಂಶ

ರಂಗಭೂಮಿಗೆ ತನ್ನದೆ ಆದ ವಿಶೇಷತೆ ಇದೆ. ಸಿನಿಮಾ, ದೂರದರ್ಶನಕ್ಕೆ ಹೋಲಿಸಿದರೆ ರಂಗಭೂಮಿ ಭಿನ್ನವಾಗಿಯೇ ನಿಲ್ಲುತ್ತದೆ. ಸಿನಿಮಾದಲ್ಲಿ ವೈಭವೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ, ನಾಟಕದಲ್ಲಿ ಆ ರೀತಿ ಇರುವುದಿಲ್ಲ. ಅದು ಮನುಷ್ಯನ ಬದುಕು ಹೇಗಿರುತ್ತದೆಯೋ ಹಾಗೆಯೇ ತೋರಿಸುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಾಮಾಜಿಕ ಜವಾಬ್ದಾರಿಯು ನಾಟಕಗಳ ಜೀವಾಳವಾಗಿರುತ್ತದೆ. ರಂಗಭೂಮಿ ಮನುಷ್ಯನ ಬದುಕಿಗೆ ಹತ್ತಿರ ಇರುವುದರಿಂದ ಜೀವನದ ನಿಜ ದರ್ಶನ ಮಾಡಿಸುತ್ತದೆ ಎಂದು ಹಿರಿಯ ರಂಗ ನಿರ್ದೇಶಕ ಎಚ್. ಜನಾರ್ದನ್ ತಿಳಿಸಿದರು.

ರಂಗಾಯಣದ ಬಿ.ವಿ. ಕಾರಂತರ ರಂಗಚಾವಡಿಯಲ್ಲಿ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯು ವಿಶ್ವ ರಂಗ ಸಂಭ್ರಮ-2025 ಅಂಗವಾಗಿ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸಿಜಿಕೆ ದೃಷ್ಟಿಯಲ್ಲಿ ಆಧುನಿಕ ಕನ್ನಡ ರಂಗಭೂಮಿಯಲ್ಲಿ ತಳ ಸಮುದಾಯಗಳ ನಿರೂಪಣೆ ಕುರಿತು ಅವರು ಮಾತನಾಡಿದರು.

ರಂಗಭೂಮಿಗೆ ತನ್ನದೆ ಆದ ವಿಶೇಷತೆ ಇದೆ. ಸಿನಿಮಾ, ದೂರದರ್ಶನಕ್ಕೆ ಹೋಲಿಸಿದರೆ ರಂಗಭೂಮಿ ಭಿನ್ನವಾಗಿಯೇ ನಿಲ್ಲುತ್ತದೆ. ಸಿನಿಮಾದಲ್ಲಿ ವೈಭವೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ, ನಾಟಕದಲ್ಲಿ ಆ ರೀತಿ ಇರುವುದಿಲ್ಲ. ಅದು ಮನುಷ್ಯನ ಬದುಕು ಹೇಗಿರುತ್ತದೆಯೋ ಹಾಗೆಯೇ ತೋರಿಸುತ್ತದೆ ಎಂದರು.

ನಮ್ಮ ಮುಂದಿನ ಹೆಜ್ಜೆ ಬಗ್ಗೆ ಸ್ಪಷ್ಟತೆ ಬೇಕಾದರೆ ಹಿಂದಿನ ಹೆಜ್ಜೆಯನ್ನು ಕಡೆಗಣಿಸಬಾರದು. ನಾವು ಎಂದಿಗೂ ನಡೆದು ಬಂದ ಹಾದಿಯನ್ನು ಮರೆಯಬಾರದು. ಈ ಚಿಂತನೆ ಎಲ್ಲಾ ಕ್ಷೇತ್ರದ, ಎಲ್ಲಾ ವ್ಯಕ್ತಿಗಳಿಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದರು.

ನಂತರ ಸಂಘಟನೆ, ಸಮುದಾಯ, ಸಾಮಾಜಿಕ ಚಳವಳಿಗಳಲ್ಲಿ ಸಿಜಿಕೆ ಪಾತ್ರ ಕುರಿತು ಗುಂಡಣ್ಣ ಚಿಕ್ಕಮಗಳೂರು, ಕತ್ತಲೆ ಬೆಳದಿಂಗಳೊಳಗೆ, ಕನ್ನಡ ರಂಗ ಭೂಮಿಯ ಆತ್ಮ ಚರಿತ್ರೆ ಕುರಿತು ಪ್ರೊ.ಎಸ್.ಆರ್. ರಮೇಶ್ ಮಾತನಾಡಿದರು. ಇದೇ ವೇಳೆ ಹಿರಿಯ ರಂಗಕರ್ಮಿ ಮತ್ತು ರಂಗ ನಿರ್ದೇಶಕ ಸಿ.ಜಿ. ಕೃಷ್ಣಮೂರ್ತಿ ಅವರ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಅಧ್ಯಕ್ಷ ರಾಜೇಶ್ ಎಚ್. ತಲಕಾಡು, ಹಿರಿಯ ರಂಗಕರ್ಮಿಗಳಾದ ಪಾಷಾ, ಗುರುಸ್ವಾಮಿ, ಪರಮೇಶ್ವರ ಮೊದಲಾದವರು ಇದ್ದರು.

ಶ್ರೀರಾಮಕೃಷ್ಣ ಆಶ್ರಮದಲ್ಲಿ ಉಪನ್ಯಾಸಮೈಸೂರು: ನಗರದ ಯಾದವಗಿರಿಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಮಾ. 27, 29 ಮತ್ತು 30 ರಂದು ಸ್ವಾಮಿ ಶಾಂಭವಾನಂದಜೀ ಸ್ಮಾರಕ ಸಭಾಂಗಣದಲ್ಲಿ ಪ್ರತಿದಿನ ಸಂಜೆ 6 ರಿಂದ 6.50ರವರೆಗೆ ಉಪನ್ಯಾಸ ನಡೆಯಲಿದೆ.

ಮಾ. 27ರಂದು ಸ್ವಾಮಿ ಜ್ಞಾನಯೋಗಾನಂದ ಅವರು ಶ್ರೀಮದ್ಭಗವದ್ಗೀತಾ ವಿಷಯ ಕುರಿತು, ಮಾ. 29ರಂದು ಸ್ವಾಮಿ ಇಷ್ಟನಾಥಾನಂದ ಅವರು ಆತ್ಮಬೋಧ ವಿಷಯ ಕುರಿತು ಇಂಗ್ಲಿಷ್ನಲ್ಲಿ ಮಾ. 30ರಂದು ಸ್ವಾಮಿ ಜ್ಞಾನಯೋಗಾನಂದ ಅವರು ಶ್ರೀರಾಮಕೃಷ್ಣ ವಚನವೇದ ವಿಷಯ ಕುರಿತು ಉಪನ್ಯಾಸ ನೀಡುವರು.