ಕನ್ನಡಪ್ರಭ ವಾರ್ತೆ ಮದ್ದೂರು

ಪಂಚಾಯುತ್ ರಾಜ್ ಸದಸ್ಯರ ಒಕ್ಕೂಟ ಸ್ಥಾಪಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯುತ್ ರಾಜ್ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಸಂಘಟಿತ ಪ್ರಯತ್ನಕ್ಕೆ ಪ್ರಪ್ರಥಮ ಬಾರಿಗೆ ಚಾಲನೆ ನೀಡಿದ ಉಳ್ಳ ನಾಗಣ್ಣ ಬಾಣಸವಾಡಿ ಅವರ 61 ನೇ ಜನ್ಮದಿನಾಚರಣೆ ಅಂಗವಾಗಿ ಜೂನ್ 1ರಂದು ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀ ಕಾಲಭೈರವ ಕ್ರೀಯಾಶೀಲ ಒಕ್ಕಲಿಗ ಕಾರ್ಯಪಡೆ ತಾಲೂಕು ಅಧ್ಯಕ್ಷ ಎಂ.ಪಿ‌.ಲಿಂಗೇಗೌಡ ತಿಳಿಸಿದರು.ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನೇರು ಬಳಗ ಹಾಗು ಕ್ರೀಯಾಶೀಲ ಒಕ್ಕಲಿಗ ಕಾರ್ಯಪಡೆ ಸಂಯುಕ್ತ ಅ‌ಶ್ರಯದಲ್ಲಿ ಜೂನ್ 1ರ ಸಂಜೆ 3 ಗಂಟೆಗೆ ನಗರದ ಕುವೆಂಪು ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಗಣ್ಣ ಬಾಣಸವಾಡಿ ಅವರ ಹೆಸರಿನಲ್ಲಿ ಕೊಡಮಾಡುವ ಸಮಾಜ ಸೇವಾ ಪ್ರಶಸ್ತಿಯನ್ನು ವಿಶ್ರಾಂತ ಎಎಸ್ಪಿ ಬಲರಾಮೇಗೌಡರಿಗೆ ನೀಡಲಾಗುವುದು ಎಂದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ರಾಣಿ ಐಶ್ವರ್ಯ ಸತೀಶ್ ಅತಿಥಿಗಳಾಗಿ ಭಾಗವಹಿಸುವರು. ನಾಗಣ್ಣ ಬಾಣಸವಾಡಿ ಕುರಿತು ಕೆ.ರವಿಕುಮಾರ್ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದರು.

ನಾಗಣ್ಣ ಬಾಣಸವಾಡಿ ಅವರು ಅಧಿಕಾರ ವಿಕೇಂದ್ರೀಕರಣಕ್ಕಾಗಿ ಕೆಲಸ ಮಾಡುತ್ತಾ ರಾಜ್ಯದಲ್ಲೆ ಮೊಟ್ಟ ಮೊದಲಿಗೆ ಗ್ರಾಮ ಪಂಚಾಯುತ್ ಸದಸ್ಯರ ಸಂಘಟಿಸಿ ರಾಜ್ಯ ಮಟ್ಟದಲ್ಲಿ ಪಂಚಾಯುತ್ ರಾಜ್ ಸದಸ್ಯರ ಒಕ್ಕೂಟ ಸ್ಥಾಪಿಸಿ ಮಹಾತ್ಮ ಗಾಂಧಿಜಿಯವರ ಗ್ರಾಮ ಸ್ವರಾಜ್ಯದ ಆಶಯಕ್ಕೆ ಶ್ರಮಿಸಿದ್ದರು ಸ್ಮರಿಸಿದರು.

ಸಮುದಾಯದ ಹಿತ ಕಾಯುವಲ್ಲಿ ಸದಾ ಜಾಗೃತರಾಗಿರುತ್ತಿದ್ದ ನಾಗಣ್ಣಬಾಣಸವಾಡಿ ಅವರು ಕಡು ಕಷ್ಟದಲ್ಲಿ ಇದ್ದ ಉತ್ತರ ಕರ್ನಾಟಕದ ಕುಡು ಒಕ್ಕಲಿಗರ ಸಂಘಟನೆ ಮಾಡಿ ಕುಡು ಒಕ್ಕಲಿಗರ ಸಮ್ಮೇಳನ ನಡೆಸಿ ಅವರಿಗೆ ಮೀಸಲು ಸೌಲಭ್ಯ ಸಿಗಬೇಕೆಂದು ಆಗ್ರಹಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ಜನಾಂಗದ ಅಭ್ಯುದಯಕ್ಕಾಗಿ ಶ್ರಮಿಸಿದ್ದರು ಎಂದರು.


ಕಾರ್ಯಪಡೆ ಗೌರವಾಧ್ಯಕ್ಷ ವಳಗೆರೆಹಳ್ಳಿ ದಯಾನಂದ್ ಮಾತನಾಡಿ, ಸಮಾಜದ ಏಳಿಗೆಗಾಗಿ ದುಡಿದವರನ್ನು ಸಮಾಜ ಮರೆಯದೆ ಸ್ಮರಿಸುತ್ತದೆ ಎಂಬ ಸಂದೇಶ ಸಮಾಜಕ್ಕೆ ನೀಡಿ ಸಮಾಜ ಪರತೆ ಕುರಿತು ಪ್ರೇರೆಪಿಸಲು ನಾಗಣ್ಣ ಬಾಣಸವಾಡಿ ಅವರ ಜನ್ಮದಿನ ಆಚರಣೆ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿರುವ ಸಾಧಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಪಡೆಯ ಸಂಘಟನಾ ಕಾರ್ಯದರ್ಶಿ ತಗ್ಗಹಳ್ಳಿ ಗೊಪಾಲ್, ಉಪಾಧ್ಯಕ್ಷ ಗುಡಿಗೆರೆ ಮಂಜುನಾಥ್, ನೀರ್ದೆಶಕರಾದ ಮಾದರಹಳ್ಳಿ ಎಂ.ಇ.ಕೃಷ್ಣ, ಕಾಫಿ ಡೇ ರಾಮಲಿಂಗೇಗೌಡ, ದೊಡ್ಡರಸಿನಕೆರೆ ಚನ್ನೇಗೌಡ, ಟಿ.ಎಸ್.ಪ್ರಸನ್ನಕುಮಾರ್, ನ.ಲಿ.ಕೃಷ್ಣ ಇದ್ದರು.