ಮನೆಗಳ ಗೃಹಪೂಜೆ ಮತ್ತು ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಫಲಾನುಭವಿಗೆ ನೂತನ ಮನೆಯ ಕೀ ಹಸ್ತಾಂತರಿಸಿ
ಕನ್ನಡಪ್ರಭ ವಾರ್ತೆ ಕುಂದಾಪುರ
ಧನ್ಯವಾದವಿರದ ಕೆಲಸ ಯಾವುದೆಂದರೆ ಅದು ಸಮಾಜದ ಕೆಲಸ. ಸಮಾಜ ಸೇವಾ ಕಾರ್ಯ ಮಾಡುವಾಗ ಟೀಕೆ, ಟಿಪ್ಪಣಿಗಳು ಬರುವುದು ಸಹಜ. ಈ ರೀತಿಯ ಸೇವೆ ಮಾಡುವಾಗ ಗಟ್ಟಿ ಗುಂಡಿಗೆ ಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜಿ ಅಭಿಪ್ರಾಯಪಟ್ಟಿದ್ದಾರೆ.ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ಇಲ್ಲಿನ ಉಳ್ಳೂರು ಕೊರಗ ಕಾಲನಿಯಲ್ಲಿ 2.5 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ 14 ಮನೆಗಳ ಗೃಹಪೂಜೆ ಮತ್ತು ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಫಲಾನುಭವಿಗೆ ನೂತನ ಮನೆಯ ಕೀ ಹಸ್ತಾಂತರಿಸಿ ಅವರು ಮಾತನಾಡಿದರು.
ನಮ್ಮನ್ನಾಳುವ ಸರ್ಕಾರಗಳು, ಸಂಘಟನೆಗಳು ಮಾಡಬೇಕಾದ ಕೆಲಸವನ್ನು ಎಚ್.ಎಸ್. ಶೆಟ್ಟರು ಮಾಡಿದ್ದಾರೆ. ಪರರ ನೋವಿಗೆ ಸ್ಪಂದಿಸುವುದಕ್ಕೆ ತಾಯಿಯ ಹೆಂಗರುಳು ಬೇಕು, 14 ಕುಟುಂಬಗಳ 84 ಮಂದಿ ಕೊರಗರಿಗೆ ಶಾಶ್ವತವಾಗಿ ನೆಲೆ ಕಲ್ಪಿಸಿಕೊಟ್ಟ ಶೆಟ್ಟರದ್ದು ಅಂತಹ ಹೆಂಗರುಳು. ನಮ್ಮ ಸ್ವಂತ ಮನೆಯ ಪ್ರವೇಶ ಹೇಗೆ ಆನಂದದಿಂದ, ವಿಜೃಂಭಣೆಯಿಂದ ನಡೆಸುತ್ತದೆಯೋ ಅದೇ ರೀತಿ ಈ ಊರಿಗೆ ಊರೇ ಸೇರಿ ಸಂಭ್ರಮಿಸುತ್ತಿರುವುದು ಈ ಸೇವೆಯ ಸಾರ್ಥಕತೆ ಸಾರುತ್ತಿದೆ ಎಂದರು.ಗೃಹಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯಾಗಿ ಇಂದಿಗೆ ಎರಡು ವರ್ಷಗಳು ಕಳೆದಿವೆ. ಇದೇ ದಿನ ಎಚ್. ಎಸ್. ಶೆಟ್ಟಿ ತಮ್ಮ ಟ್ರಸ್ಟ್ ಮೂಲಕ ಕೊರಗ ಕುಟುಂಬಗಳಿಗೆ ಈಗಾಗಲೇ 28 ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ರಾಮರಾಜ್ಯದ ಕಲ್ಪನೆ ಸಾಕಾರ ಮಾಡುತಿದ್ದಾರೆ ಎಂದು ಕೊಂಡಾಡಿದರು.
ಗೃಹ ಲೋಕಾರ್ಪಣೆ ನೆರವೇರಿಸಿದ ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಅತ್ಯಂತ ಶೋಷಿತ ಸಮುದಾಯದ ಕೊರಗ ಕುಟುಂಬಗಳಿಗೆ ಸೂರು ಕಲ್ಪಿಸಿಕೊಡುವ ಮೂಲಕ ಬಸವಣ್ಣನವರ ಪರಿಕಲ್ಪನೆಯನ್ನು ಎಚ್.ಎಸ್.ಶೆಟ್ಟಿ ಅವರು ಎತ್ತಿ ಹಿಡಿದಿದ್ದಾರೆ. ನಿರಾಶ್ರಿತರಿಗೆ ಆಶ್ರಯದಾತರಾಗಿ ಬಸವಾದಿಶರಣರ ವ್ಯಕ್ತಿತ್ವವೇ ಅವರಲ್ಲಿ ಕಾಣುತ್ತಿದ್ದೇವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ ರಾಘವೇಂದ್ರ, ತುಳಸಿಕಟ್ಟೆಗಳು ಶಿಲುಬೆಕಟ್ಟೆಗಳಾಗಿ ಮತಾಂತರಗೊಳ್ಳುತ್ತಿರುವ ಹೊತ್ತಲ್ಲಿ ನಮ್ಮ ಸಮಾಜದವರೇ ಆದ ಕೊರಗರಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ಬಡವರ ಮುಖದಲ್ಲಿ ನಗು ತರಿಸುತ್ತಿದ್ದಾರೆ, ಇದು ನಿಜವಾದ ಸಮಾಜಸೇವೆ ಎಂದರು.
ಹೆಗ್ಗುಂಜೆ ಚಾರಿಟೇಬಲ್ ಟ್ರಸ್ಟ್ ನ ಎಚ್.ಎಸ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ದುಡಿಮೆಯ ಒಂದು ಭಾಗ ಸಮಾಜಸೇವೆಗೆ ವಿನಿಯೋಗಿಸುತ್ತಿದ್ದೇನೆ. ಇದರಲ್ಲಿ ಯಾವುದೇ ರಹಸ್ಯ ಕಾರ್ಯತಂತ್ರ ಇಲ್ಲ. ರಾಜಕೀಯ ಪ್ರವೇಶದ ಅಪೇಕ್ಷೆಯೂ ನನಗಿಲ್ಲ. ಯಾವ ಪಕ್ಷಕ್ಕೂ ಸೇರಿದವನಲ್ಲ. ಈ ಸಮಾಜಕ್ಕೆ ಸೇರಿದವನು. ಜನರ ಸೇವೆ ಮಾಡಲು ಬಯಸಿದ್ದೇನೆ ಎಂದರು.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸಮಾಜಸೇವಕ ಮುರುಳಿ ಕಡೇಕಾರ್, ಕೊರಗ ಸಂಘಟನೆಯ ನಾಯಕಿ ಸುಶೀಲ ನಾಡ ಮಾತನಾಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಭರತ್ ಶೆಟ್ಟಿ, ಯಶ್ಪಾಲ್ ಸುವರ್ಣ, ಉಳ್ಳೂರು ಗ್ರಾ.ಪಂ ಅಧ್ಯಕ್ಷೆ ಕುಸುಮಾ ಶೆಟ್ಟಿ, ಬನಶಂಕರಿ ದೇವಳದ ಮೊಕ್ತೇಸರ ಸಂಪಿಗೇಡಿ ಸಂಜೀವ ಶೆಟ್ಟಿ, ಟ್ರಸ್ಟಿಗಳಾದ ಹಾಲಾಡಿ ನಾಗರಾಜ್ ಶೆಟ್ಟಿ, ಸುಮನಾ ಶ್ರೀನಿವಾಸ ಶೆಟ್ಟಿ ಉಪಸ್ಥಿತರಿದ್ದರು. ನ್ಯಾಯವಾದಿ ನಾಗರಾಜ್ ನಾಯಕ್ ಪ್ರಾಸ್ತಾವಿಕ ಮಾತನಾಡಿದರು. ಅರ್ಪಿತಾ ಹೆಗ್ಡೆ ನಿರೂಪಿಸಿದರು.ಕೊರಗ ಜನಾಂಗದ ಬಗ್ಗೆ ಅಧ್ಯಯನ ಆಗಬೇಕು:ಕೊರಗ ಸಮುದಾಯದವರು ಕುಡಿತದ ಚಟ ಇರುವವರು, ಆದ್ದರಿಂದಲೇ ಅವರು ನಾಶವಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಇದು ತಪ್ಪು ಕಲ್ಪನೆ. ಕೊರಗ ಜನಾಂಗ ಕ್ಷೀಣಿಸುತ್ತಿರುವುದಕ್ಕೆ ಕುಡಿತ ಕಾರಣವಲ್ಲ. ಕೊರಗ ಜನಾಂಗ ಕ್ಷೀಣಿಸುತ್ತಿರುವುದಕ್ಕೆ ಬೇರೆ ಜೈವಿಕ ಕಾರಣಗಳಿರುವ ಬಗ್ಗೆ ಅಧ್ಯಯನ - ಸಮೀಕ್ಷೆ ಅಗತ್ಯವಿದೆ, ಈ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ ಡಾ. ಎಚ್.ಎಸ್ ಶೆಟ್ಟಿ, ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಈ ಮಣ್ಣಿನ ಮಕ್ಕಳಾದ ಕೊರಗ ಜನಾಂಗವನ್ನು ದುರ್ಬೀನು ಹುಡುಕಿ ನೋಡುವ ಕಾಲ ಸನ್ನಿಹಿತವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
