ಸಾಮಾಜಿಕ ಚಿಂತಕರಿಂದ ಸಮಾಜದ ಪ್ರಗತಿ

| Published : Nov 12 2025, 02:15 AM IST

ಸಾರಾಂಶ

ರಾಮಾಯಣ ಒಂದು ತ್ಯಾಗದ ಪ್ರತೀಕವಾಗಿದೆ. ಮಹರ್ಷಿ ವಾಲ್ಮೀಕಿ ದೂರದೃಷ್ಟಿಯ ಮೂಲಕ ಸಾಂಸ್ಕೃತಿಕ ಸಂಬಂಧಗಳನ್ನು ತಮ್ಮ ಕಾವ್ಯದ ಮೂಲಕ ಹೇಳಿದ್ದಾರೆ. ಅಂಬೇಡ್ಕರ್, ಬಸವಣ್ಣ ಮತ್ತು ವಾಲ್ಮೀಕಿ ಅವರನ್ನು ಜಾತಿಗೆ ಸೀಮಿತಗೊಳಿಸುತ್ತಿರುವದು ದುರದೃಷ್ಟಕರ ಸಂಗತಿ.

ಧಾರವಾಡ:

ಭಾರತದಂತಹ ದೇಶದಲ್ಲಿ ಸೌಹಾರ್ದತೆ, ಭ್ರಾತೃತ್ವ ಉಳಿಯಲು ರಾಮಾಯಣ ಮತ್ತು ಮಹಾ ಭಾರತದ ಸಂವಿಧಾನ ಕಾರಣವಾಗಿವೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.ಕರ್ನಾಟಕ ವಿಶ್ವವಿದ್ಯಾಲಯದ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠವು ಮಂಗಳವಾರ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿದ ಅವರು, ಸಾಮಾಜಿಕ ಚಿಂತಕರಿಂದ ಸಮಾಜದ ಪ್ರಗತಿ ಸಾಧ್ಯ. ಸಮಕಾಲೀನ ಸಂದರ್ಭದಲ್ಲಿ ರಾಮಾಯಣ ಪ್ರಸ್ತುತ ಪಡೆದಿದೆ. ಚರಿತ್ರೆಯಲ್ಲಿ ಪ್ರತಿಭೆ ಜಾತಿ ಸೂಚಕವಾಗಿತ್ತು, ವಾಲ್ಮೀಕಿ ಕುರಿತು ಅನೇಕ ಕಾಲ್ಪನಿಕ ಕಥೆಗಳು ಇದ್ದು, ಅದಕ್ಕೆ ಪೂರಕವಾದ ಯಾವುದೇ ಸಾಕ್ಷಿ ಇಲ್ಲ‌ ಎಂದರು.

ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ಮತ್ತು ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಎಲ್ಲರೂ ಅನುಸರಿಸುವ ಅಗತ್ಯವಿದೆ. ಅನೇಕ‌ ದಾರ್ಶನಿಕರು ತಮ್ಮ ಚಿಂತನೆ ಮೂಲಕ ಕಟ್ಟಿದ ಗ್ರಂಥ, ಚರಿತ್ರೆ ಮತ್ತು ಕಾವ್ಯಗಳನ್ನು ಕಡೆಗಣಿಸಲಾಗುತ್ತಿದೆ ಎಂದ ಅವರು, ಇಂದು ಸುಳ್ಳಿನ ಮೂಲಕ‌ ಅನೇಕ ಐತಿಹ್ಯಗಳನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಅಪಾಯವೇ ಹೆಚ್ಚು. ರಾಮಾಯಣವನ್ನು ಕೇವಲ ಚರಿತ್ರೆಯಂತೆ ಓದಲಾಗುತ್ತದೆ. ಹಾಗಾಗಿ ಮಹಾನ್ ಗ್ರಂಥ ಕಾವ್ಯಗಳನ್ನು ಓದುವಾಗ ಭಿನ್ನವಾದ ದೃಷ್ಟಿಕೋನದಿಂದ ನೋಡಬೇಕು ಎಂದು ಹೇಳಿದರು.

ಚರಿತ್ರೆಯಲ್ಲಿ ತಳಸಮಯದಾಯಗಳ ಯಶಸ್ಸನ್ನು ಅನೇಕ ಪ್ರಭುತ್ವಗಳು ಸಹಿಸಲಿಲ್ಲ. ಭಾರತದ ನಿಜವಾದ ಶಕ್ತಿ ಬಹುತ್ವ ಆಗಿದೆ. ಇಂದು ಒಂದು ಧರ್ಮ, ಸಂಸ್ಕೃತಿ ಮತ್ತು ಭಾಷೆ ಏಕತೆಯ ಸಂಸ್ಕೃತಿಯನ್ನು ಹೇರಲಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದ ಅವರು, ರಾಮಾಯಣದ ‌ಮೂಲಕ ಈ ನೆಲದ ಭ್ರಾತೃತ್ವ ಕಟ್ಟಬೇಕಾಗಿದೆ. ಇಂದು ರಾಮಾಯಣವನ್ನು ಕೋಮು ಸಂಘರ್ಷಕ್ಕೆ ಬಳಕೆ ಮಾಡಿಕೊಡುತ್ತಿರುವುದು ನೋವಿನ ಸಂಗತಿ ಎಂದರು.ಸಾನ್ನಿಧ್ಯ ವಹಿಸಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಡಾ. ಪ್ರಸನ್ನಾನಂದ ಸ್ವಾಮೀಜಿ, ಇಂದಿಗೂ ಶ್ರೇಣೀಕೃತ ಸಮಾಜವು ಜಾತಿ ವ್ಯವಸ್ಥೆ ಹೊಂದಿದೆ. ನಮ್ಮ ಹುಟ್ಟು ಜಾತಿಯಿಂದ ಶ್ರೇಷ್ಠ ಆಗಬಾರದು. ಕಾಯಕದಿಂದ ಶ್ರೇಷ್ಠತೆ ಹೊಂದಬೇಕು. ವ್ಯಕ್ತಿಯು ಜಾತಿಯಿಂದ ಕೀಳಿರಿಮೆ ಹೊಂದಿರಬಾರದು ಎಂದು ಹೇಳಿದರು.

ರಾಮಾಯಣ ಒಂದು ತ್ಯಾಗದ ಪ್ರತೀಕವಾಗಿದೆ. ಮಹರ್ಷಿ ವಾಲ್ಮೀಕಿ ದೂರದೃಷ್ಟಿಯ ಮೂಲಕ ಸಾಂಸ್ಕೃತಿಕ ಸಂಬಂಧಗಳನ್ನು ತಮ್ಮ ಕಾವ್ಯದ ಮೂಲಕ ಹೇಳಿದ್ದಾರೆ. ಅಂಬೇಡ್ಕರ್, ಬಸವಣ್ಣ ಮತ್ತು ವಾಲ್ಮೀಕಿ ಅವರನ್ನು ಜಾತಿಗೆ ಸೀಮಿತಗೊಳಿಸುತ್ತಿರುವದು ದುರದೃಷ್ಟಕರ ಸಂಗತಿ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಮೆರವಣಿಗೆ ಮೂಲಕ ಕವಿವಿ ಆಡಳಿತ ಭವನದಿಂದ ಸುವರ್ಣ ಮಹೋತ್ಸವದ ಸಭಾಂಗಣದ ವರೆಗೆ ಮೆರವಣಿಗೆ ಮಾಡಲಾಯಿತು. ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ. ಶಂಕರ ವಣಿಕ್ಯಾಳ, ಮೌಲ್ಯಮಾಪನ ‌ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ವಾಲ್ಮೀಕಿ ಅಧ್ಯಯನ ಪೀಠದ ಸಂಯೋಜಕರಾದ ಡಾ. ಅಶೋಕ ಹುಲಿಬಂಡಿ, ಡಾ. ರಾಮಾಂಜಲು, ಡಾ. ಶಿವಕುಮಾರ, ಡಾ. ಪ್ರಶಾಂತ, ಡಾ. ಮನೋಜ ಡೊಳ್ಳಿ ಇದ್ದರು.