ಸೇವೆಯ ಮೂಲಕ ಸಾಮಾಜಿಕ ಪರಿವರ್ತನೆ: ವಸಂತ ಹೋಬಳಿದಾರ್

| Published : Jul 03 2025, 11:49 PM IST

ಸಾರಾಂಶ

ರೋಟರಿ ಉಡುಪಿಯ 2025-26ನೇ ಸಾಲಿನ ನೂತನ ಪದಾಧಿಕಾರಗಳ ಪದಪ್ರದಾನ ನಡೆಯಿತು. ನಾಮ ನಿರ್ದೇಶಿತ ರೋಟರಿ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್ ಕಾರ್ಯಕ್ರಮ ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಉಡುಪಿ

ನಿಜವಾದ ಸೇವೆಯ ಮೂಲಕ ಸಮಾಜದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆ ಸಾಧ್ಯ. ಅಂತಹ ಸೇವಾಕಾರ್ಯಗಳಿಗೆ ಅಂತಾರಾಷ್ಟ್ರೀಯ ರೋಟರಿ ಒಂದು ಉತ್ತಮ ವೇದಿಕೆಯಾಗಿದೆ ಎಂದು ನಾಮ ನಿರ್ದೇಶಿತ ರೋಟರಿ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್ ಹೇಳಿದರು.ಅವರು ರೋಟರಿ ಉಡುಪಿಯ 2025-26ನೇ ಸಾಲಿನ ನೂತನ ಪದಾಧಿಕಾರಗಳ ಪದಪ್ರದಾನ ನೆರವೇರಿಸಿ ಮಾತನಾಡಿದರು.

ಅನೇಕ ಸಂಘ ಸಂಸ್ಥೆಗಳು ಇಂದು ನಮ್ಮ ಮುಂದೆ ಇವೆ. ಆದರೆ ಪ್ರಬಲವಾದ ಸಿದ್ಧಾಂತವನ್ನು ಹೊಂದಿರುವ, ಸ್ವಹಿತ ಮೀರಿದ ಸೇವೆಯನ್ನೇ ಧ್ವನಿಯಾಗಿರಿಸಿಕೊಂಡಿರುವ ರೋಟರಿಯಂತಹ ಅಂತಾರಾಷ್ಟ್ರೀಯ ಸಂಘಟನೆ ಪ್ರಪಂಚಾದ್ಯಂತ ಮನುಕುಲದ ಸೇವೆಗೆ ತನ್ನನ್ನು ತೊಡಗಿಸಿಕೊಂಡಿದೆ. ಸೇವೆಗೆ ನಿರ್ದಿಷ್ಟವಾದ ಅರ್ಥವನ್ನು ತಂದುಕೊಟ್ಟಿದೆ. ಸಾರ್ವತ್ರಿಕ ವಿಶ್ವಾಸವನ್ನು ಗಳಿಸಿದೆ. ಹಣ ಅಂತಸ್ತಿಗಿಂತ ಮಿಗಿಲಾದ ಸೇವಾತೃಪ್ತಿ ರೋಟರಿಯ ಮೂಲಕ ಸಿಗುವುದು ಸಾಧ್ಯ ಎಂದವರು ಹೇಳಿದರು.ನೂತನ ಅಧ್ಯಕ್ಷರಾಗಿ ಸೂರಜ್ ಕುಮಾರ್ ಎರ್ಮಾಲ್ ಮತ್ತು ಕಾರ್ಯದರ್ಶಿಯಾಗಿ ಅಶೋಕ್ ಕೋಟ್ಯಾನ್ ಅಧಿಕಾರ ವಹಿಸಿಕೊಂಡರು.ನೂತನ ಅಧ್ಯಕ್ಷರು, ರೋಟರಿ ಉಡುಪಿಯ ಸಾಧನೆಗಳು ಮತ್ತು ಘನತೆ ಗೌರವಗಳಿಗೆ ಧಕ್ಕೆಯಾಗದಂತೆ ರೋಟರಿ ಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಹೋಗುವ ಭರವಸೆಯ ಮಾತುಗಳನ್ನಾಡಿ ಎಲ್ಲರ ಸಹಕಾರ ಕೋರಿ, ತನ್ನ ಪದಾಧಿಕಾರಿಗಳ ತಂಡವನ್ನು ಸಭೆಗೆ ಪರಿಚಯಿಸಿದರು.ನಿರ್ಗಮನ ಅಧ್ಯಕ್ಷ ಗುರುರಾಜ್ ಭಟ್ ಸ್ವಾಗತಿಸಿ, ಅಧ್ಯಕ್ಷನಾಗಿ ತನ್ನ ಧನ್ಯತೆಯನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ರಾಮಚಂದ್ರ ಉಪಾಧ್ಯ ಮತ್ತು ಶುಭಾ ಬಾಸ್ರಿ ಪರಿಚಯಿಸಿದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ದಿನೇಶ ಗಡಿಯಾರ್, ನಿವೃತ್ತ ಸಿಸ್ಟಂ ಎನಾಲಿಸ್ಟ್ ಕೆ. ರಮೇಶ ಆಚಾರ್, ಮೆರೈನ್ ಎಂಜಿನಿಯರ್ ರಾಘವೇಂದ್ರ ಆಚಾರ್ಯ, ಸುಮನ ಆಚಾರ್ಯ ಮತ್ತು ಪ್ರೇಮ - ಈ ಐದು ಮಂದಿ ಹೊಸಸದಸ್ಯರನ್ನು ರೋಟರಿ ಬಳಗಕ್ಕೆ ಸೇರ್ಪಡಿಸಲಾಯಿತು.ಅತಿಥಿಯಾಗಿ ಆಗಮಿಸಿದ್ದ ವಲಯದ ಅಸಿಸ್ಟೆಂಟ್ ಗವರ್ನರ್ ಅಮಿತ್ ಅರವಿಂದ, ಕ್ಲಬ್‌ನ ಗೃಹ ಪತ್ರಿಕೆ ‘ಕಾಂಚ್’ ಅನ್ನು ಅನಾವರಣಗೊಳಿಸಿದರು. ಬಳಿಕ ಕಡಿಯಾಳಿ ಶಾಲೆಯ 21 ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರದ ಚೆಕ್ಕನ್ನು ಶಾಲಾ ಶಿಕ್ಷಕರಿಗೆ ಹಸ್ತಾಂತರಿಸಿ ಮಾರ್ಗದರ್ಶನದ ಮಾತುಗಳನ್ನಾಡಿದರು.ವಲಯ ಸೇನಾನಿ ಜನಾರ್ದನ ಭಟ್ ಶುಭಾಶಂಸನೆಗೈದರು. ಆರಂಭದಲ್ಲಿ ನಿರ್ಗಮನ ಕಾರ್ಯದರ್ಶಿ ವೈಷ್ಣವಿ ಆಚಾರ್ಯ ವಾರ್ಷಿಕ ವರದಿ ವಾಚಿಸಿದರು. ಸುಬ್ರಹ್ಮಣ್ಯ ಬಾಸ್ರಿ, ಡಾ.ಸುದರ್ಶನ್ ಭಟ್, ಮಾಲತಿ ತಂತ್ರಿ, ಚಂದ್ರಶೇಖರ ಅಡಿಗ ಹಾಗೂ ದಾಮೋದರ ಹೆಬ್ಬಾರರು ಅತಿಥಿಗಣ್ಯರನ್ನು ಪರಿಚಯಿಸಿದರು. ಸೀತಾರಾಮ ತಂತ್ರಿ, ಆಗಮಿಸಿದ ಆಮಂತ್ರಿತ ಗಣ್ಯರನ್ನು ಗುರುತಿಸಿದರು. ಹರಿಪ್ರಸಾದ್ ನಿರ್ವಹಿಸಿದರು. ಅಶೋಕ್ ಕೋಟ್ಯಾನ್ ವಂದಿಸಿದರು.