ಕನ್ನಡಪ್ರಭ ವಾರ್ತೆ ತುರುವೇಕೆರೆ
ಮಠ ಮಂದಿರಗಳು, ಹಣವಂತರು, ಅಧಿಕಾರ ಉಳ್ಳವರು ಸಮಾಜದಲ್ಲಿ ಸರಳತೆ, ಸಮಾನತೆ ಸಾರಿದರೆ ನಾಡಿನ ಜನರು ಸೌಖ್ಯವಾಗಿ ಬಾಳುವಂತಾಗುತ್ತದೆ. ಬಸವಣ್ಣನವರು ಕಂಡ ಸಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಬೆಟ್ಟದಹಳ್ಳಿ ಗವಿಮಠದ ಸುಕ್ಷೇತ್ರಾಧ್ಯಕ್ಷ ಚಂದ್ರಶೇಖರ ಸ್ವಾಮಿಗಳು ಹೇಳಿದರು.ತಾಲೂಕಿನ ಕಲ್ಕೆರೆಯ ಸುಕ್ಷೇತ್ರ ಶ್ರೀ ಅಲ್ಲಮ ಪ್ರಭು ಮಹಾಸಂಸ್ಥಾನ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಲ್ಲಮಶ್ರೀ, ಶರಣಶ್ರೀ, ಮಡಿವಾಳ ಮಾಚಿದೇವಶ್ರೀ ಮತ್ತು ಚೌಡಯ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಲ್ಲಮಶ್ರೀ ಪ್ರಶಸ್ತಿ ಸ್ವೀಕರಿಸಿ ಆಶೀರ್ವಾಚನ ನೀಡಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ವಚನ ಸಾಹಿತ್ಯ ಪರಂಪರೆಯಿಂದ ಜ್ಞಾನ ಜ್ಯೋತಿಯನ್ನು ಜಗತ್ತಿಗೆ ಸಾರಿದವರು ವಿಶ್ವಗುರು ಬಸವಣ್ಣನವರು. ಇಂದಿಗೂ ಬಸವೇಶ್ವರರನ್ನು ಸಮಾಜದ ಎಲ್ಲ ವರ್ಗದವರು ಒಪ್ಪುತ್ತಾರೆ, ಪ್ರೀತಿಸುತ್ತಾರೆ, ಪೂಜಿಸುತ್ತಾರೆ ಎಂದರೆ 12 ನೇ ಶತಮಾನದಲ್ಲಿಯೇ ಬಸವೇಶ್ವರು ಎಲ್ಲಾ ಸಮಾಜದ ಜನರನ್ನು ಮೇಲು ಕೀಳು ಗಂಡು, ಹೆಣ್ಣು ಎಂಬ ಬೇಧ ಭಾವ ಮಾಡದೆ ಎನ್ನದೆಗೆ ಅಪ್ಪಿಕೊಂಡು ಸ್ವಾಥ್ಯ ಸಮಾಜ ನಿರ್ಮಾಣದ ಕನಸು ಹೊಂದಿದ್ದರು ಎಂಬುದು ತಿಳಿಯುತ್ತದೆ. 21 ನೇ ಶತಮಾನದಿಂದ ಇಂದಿಗೂ ಶರಣ ಪರಂಪರೆ ಉಳಿದಿದೆ. ಬಸವಣ್ಣನವರು ಹಾಕಿಕೊಟ್ಟ ಆದರ್ಶಗಳನ್ನು ಎಲ್ಲರೂ ಪಾಲಿಸಿದರೆ ಬಸವೇಶ್ವರರು ಕಂಡ ಕಲ್ಯಾಣ ಕ್ರಾಂತಿಯನ್ನು ಕಾಣಬಹುದಾಗಿದೆ ಎಂದರು.
ಕೌಶಲ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ ಪುಟ್ಟ ಗ್ರಾಮದ ಸಣ್ಣ ಮಠವಾಗಿದ್ದರೂ ಉತ್ತಮವಾದ ಕಾರ್ಯಕ್ರಮ ಮಾಡಿದೆ. ಇಂತಹ ಕಾರ್ಯಕ್ರಮಗಳನ್ನು ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಮಾಡಬೇಕು. ಜೊತೆಗೆ ಸರ್ಕಾರಿ ಶಾಲೆಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಬೇಕು. ಆ ಎಲ್ಲಾ ಕಾಋಯಕ್ರಮಗಳಿಗೆ ನಾನು ಹೆಚ್ಚಿನ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.ಹೆಳವರ ಮಠದ ಬಸವ ಭೃಂಗೀಶ್ವರ ಸ್ವಾಮೀಜಿ ಮಾತನಾಡಿ, ಮಠಗಳಿಗೆ ಕೊಟ್ಟ ದಾನ ಎಂದಿಗೂ ತಪ್ಪಾಗದು. ಮಠಗಳಲ್ಲಿ ಮಾತನಾಡುವ ಸ್ವಾಮೀಜಿಗಳ ಭೇಟಿ ಮಾಡಲು ಜನರು ಹಿಂದೇಟು ಹಾಕುತ್ತಾರೆ. ಆದರೆ ಮಾತನಾಡದ ಮಂದಿರಗಳಿಗೆ ಜನರು ನಾಮುಂದು ತಾಮುಂದು ಎಂದು ಹೋಗುತ್ತಾರೆ. ಏಕೆಂದರೆ ತಾ ಮಾಡಿದ ತಪ್ಪನ್ನು ಮಂದಿರದಲ್ಲಿರುವ ದೇವರು ಪ್ರಶ್ನಿಸುವುದಿಲ್ಲ. ಆದರೆ ಮಠದಲ್ಲಿರುವ ಮಾತನಾಡುವ ದೇವರು ಪ್ರಶ್ನಿಸುತ್ತಾರೆ. ಹಾಗಾಗಿ ಮಠಗಳಿಗೆ ಜನರು ಬರಲು ಹಿಂದೇಟು ಹಾಕುತ್ತಾರೆ ಎಂದರು. ಮಠ ಕಟ್ಟುವಾಗ ಸಾಕಷ್ಟು ಸಂಕಟ ಇರುತ್ತದೆ. ಸಣ್ಣ ಮಠಗಳಲ್ಲಿ ಬಸವ ತತ್ವ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅಂತಹ ಸಣ್ಣ ಮಠಗಳಿಗೆ ನೆರವು ನೀಡಿ. ಮಠಾಧೀಶರು ಮರಣ ಹೊಂದಿದ ನಂತರ ಅವರನ್ನು ಹೊಗಳಿ ಅಟ್ಟಕ್ಕೆ ಏರಿಸುವ ಬದಲು ಇದ್ದಾಗಲೇ ಅವರಿಗೆ ಮಠ ಕಟ್ಟಲು ನೆರವಾಗಿ ಎಂದರು. ಈ ಸಂದರ್ಭದಲ್ಲಿ ಶರಣಶ್ರೀ ಪ್ರಶಸ್ತಿಯನ್ನು ಸಮಾಜ ಸೇವಕ ಹಾಗೂ ಉದ್ಯಮಿ ಡಿ.ವಿ.ಶಿವಾನಂದ್, ಮಡಿವಾಳ ಮಾಚಿದೇವ ಶ್ರೀ ಪ್ರಶಸ್ತಿಯನ್ನು ಕೊರಟಗೆರೆಯ ಕೋಡಗದಾಗ ಗ್ರಾಮದ ಮಹಾಮುನೇಶ್ವರ ಸ್ವಾಮಿ ಪ್ರಧಾನ ಅರ್ಚಕ ಲಕ್ಷ್ಮೀಕಾಂತ, ಬಹುರೂಪಿ ಚೌಡಯ್ಯ ಪ್ರಶಸ್ತಿಯನ್ನು ದಾಂಡೇಲಿ ಯ ಶರಣ ದೇವೇಂದ್ರ ಎಂ ಗುಳೂರು ಇವರಿಗೆ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಕಲಬುರ್ಗಿಯ ಮಠದ ಪ್ರಭುಶ್ರೀ ಮಾತಾಜಿ, ಅಲ್ಲಮಪ್ರಭು ಮಹಾಸಂಸ್ಥಾನ ಮಠದ ಮಠಾಧೀಶರಾದ ತಿಪ್ಪೇರುದ್ರ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಹೊಳಲ್ಕೆರೆ ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಂಜುನಾಥ್, ಅಲ್ಲಮಪ್ರಭು ದೇವರ ಬಗ್ಗೆ ಉಪನ್ಯಾಸ ನೀಡಿದರು. ಕೆ.ಒ.ಶಿವಣ್ಣ ಮತ್ತು ಸಂಗಡಿಗರಿಂದ ತತ್ವಪದ ವಚನ ಸಂಗೀತ, ಪಿ.ಮೀನಾಕ್ಷಿ ತಂಡದವರಿಂದ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಿತು. ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕ ರಂಗಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.