ಸಾರಾಂಶ
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅನ್ನದಾನೀಶ್ವರ ಶಾಖಾಮಠದ ಶ್ರೀ
ಕನ್ನಡಪ್ರಭ ವಾರ್ತೆ ಕುಕನೂರುಸಾಮೂಹಿಕ ವಿವಾಹ ಕಾರ್ಯ ಸಮಾಜಮುಖಿಯಾದದ್ದು, ಸಮಾಜಮುಖಿ ಕಾರ್ಯಗಳು ಗ್ರಾಮದ ಹಿರಿಮೆ ಸಂಕೇತವಾಗಿವೆ ಎಂದು ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ದೇವರು ಹೇಳಿದರು.
ತಾಲೂಕಿನ ತಳಬಾಳು ಗ್ರಾಮದ ಶ್ರೀ ಭೀಮಲಿಂಗೇಶ್ವರ ಜಾತ್ರೆ, ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಳ ಹಾಗೂ 8 ಜೋಡಿಗಳ ಸಾಮೂಹಿಕ ವಿವಾಹಗಳ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದರು.ಹಿರಿಯರಿಗೆ ಗೌರವ ನೀಡುವ ಸಂಸ್ಕಾರವನ್ನು ನೂತನ ದಂಪತಿಗಳು ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಮನೆಯಲ್ಲಿ ಸಂಸ್ಕಾರ ಮತ್ತು ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ. ಸಾಮೂಹಿಕ ವಿವಾಹಗಳು ಬಡವರ್ಗಕ್ಕೆ ವರದಾನವಾಗಿದೆ. ಇಂತಹ ಧರ್ಮಕಾರ್ಯಗಳು ನಡೆಯಬೇಕಾದರೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆಯಂತೆ, ಗ್ರಾಮದ ಎಲ್ಲರೂ ಒಗ್ಗಟ್ಟಿನಿಂದ ಕೈ ಜೋಡಿಸಿದರೆ ಮಾತ್ರ ಸಾದ್ಯವಾಗುತ್ತದೆ. ಅಂತಹ ಒಗ್ಗಟ್ಟನ್ನು ಈ ಗ್ರಾಮದಲ್ಲಿ ಕಾಣಬಹುದು ಎಂದರು.ಬದುಕಿನಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲು ಹೋಗಬಾರದು . ಹೊಗಳಿದರೆ ಹಿಗ್ಗಬಾರದು, ಬೈಯ್ದರೆ ಕುಗ್ಗಬಾರದರು. ಸಮಾಧಾನದಿಂದ ಜೀವನ ನಡೆಸಿದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಶಿವರಾಜ ರಾಯರೆಡ್ಡಿ ಮಾತನಾಡಿ, ತಳಬಾಳು ಸಣ್ಣ ಗ್ರಾಮವಾದರೂ ಸಹ ಸಂಪ್ರದಾಯ ಒಳಗೊಂಡ ಗ್ರಾಮ. ಒಂದು ಮನೆಯಲ್ಲಿ ಒಂದು ಕುಟುಂಬ ಹೊಂದಾಣಿಕೆಯಾಗಬೇಕಾದರೆ ತುಂಬಾ ಕಷ್ಟವಾಗುತ್ತದೆ. ಅಂತದ್ದರಲ್ಲಿ ಇಂತಹ ಧರ್ಮ ಕಾರ್ಯಗಳು ನೆರವೇರಬೇಕಾದರೆ ಗ್ರಾಮದ ಎಲ್ಲರ ಹೊಂದಾಣಿಕೆಯಿಂದ ಮಾತ್ರ ಸಾಧ್ಯ. ಗ್ರಾಮದವರು ಹಾಲಿನಂತಹ ಮನಸ್ಸಿನವರು. ಗ್ರಾಮ ಚಿಕ್ಕದಾದರೂ ಚೊಕ್ಕದಾಗಿದೆ ಎಂದರು.ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ದುಬಾರಿ ಕಾಲದಲ್ಲಿ ಮನೆ ಕಟ್ಟುವುದು, ಮದುವೆ ಮಾಡುವುದು ಬಹಳ ಕಷ್ಟ. ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮದುವೆಯ ಸಾಲದ ಬಾಧೆಯಿಂದ ಎಷ್ಟೋ ಕುಟುಂಬಗಳು ವಿಘಟಿತವಾಗುತ್ತಿವೆ. ಇದನ್ನು ಮನಗಂಡು ದೇವಸ್ಥಾನ ಸಮಿತಿಯವರು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿರುವುದು ಶ್ಲಾಘನೀಯವಾಗಿದೆ. ತಳಬಾಳು ಗ್ರಾಮದ ಗುರು ಹಿರಿಯರು ಇಂತಹ ಧರ್ಮ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮ ಸಂಗತಿ. ಈ ಗ್ರಾಮವು ಇನ್ನೂ ಬೆಳೆಯಲಿ ಎಂದರು.
ನಿವೃತ್ತ ಶಿಕ್ಷಕ ಮಲಕಸಾಬ್ ನೂರಬಾಷಾ ಮಾತನಾಡಿ, ನವದಂಪತಿಗಳು ಸಂಸಾರದಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಜೀವನದಲ್ಲಿ ದುಡುಕು, ಕೋಪ ನಿಮ್ಮ ಬದುಕನ್ನು ಹಾಳುಮಾಡುತ್ತದೆ. ಇದರಿಂದ ಎಚ್ಚರವಿರಬೇಕು. ಅತ್ತೆ ಮಾವಂದಿರನ್ನು ಗೌರವದಿಂದ ಕಾಣಬೇಕು. ಸೊಸೆಯಂದಿರನ್ನು ನಿಮ್ಮ ಮಗಳೆಂದು ಭಾವಿಸಿ ಪಾಲಕರು ಪರಸ್ಪರರು ಅನ್ಯೋನ್ಯತೆಯಿಂದ ಬದುಕನ್ನು ಸುಂದರ ಮಾಡಿಕೊಳ್ಳಬೇಕು ಎಂದರು.ಸಂಜೆ ಭೀಮಲಿಂಗೇಶ್ವರನ ಲಘು ರಥೋತ್ಸವ ಜರುಗಿತು. ಮಂಗಳೂರಿನ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಪ್ರಮುಖರಾದ ಶಶಿಧರಯ್ಯ ಅರಳೆಲೆಮಠ, ವಿಜಯಲಕ್ಷ್ಮಿ ಮೆಣಸಿನಕಾಯಿ, ಶರಣಯ್ಯ ಸಸಿ, ಸುಭಾಷ್ ಗೌಡ ಪೋ ಪಾಟೀಲ್, ಮಲ್ಲಯ್ಯ ಭೂಸನೂರಮಠ, ಮಲ್ಲಣ್ಣ ಸಾದರ್, ವೀರಭದ್ರಯ್ಯ ಮನ್ನಾಪುರ, ದೇವೇಂದ್ರಪ್ಪ ಕಮ್ಮಾರ್, ಮಲ್ಲಪ್ಪ ಬಾಣದ, ತಳಬಾಳ ಗ್ರಾಮಸ್ಥರು, ಭೀಮಲಿಂಗೇಶ್ವರ ಭಜನಾ ಮಂಡಳಿಯವರು, ಶರಣಬಸವೇಶ್ವರ ಸೇವಾ ಟ್ರಸ್ಟ್ ಕಮಿಟಿಯವರು ಇತರರಿದ್ದರು.