ಸಾರಾಂಶ
ಉಡುಪಿ ರಂಗಭೂಮಿಯ 60ನೇ ವಾರ್ಷಿಕ ಮಹಾಸಭೆ ನಡೆಯಿತು. ರಂಗಭೂಮಿ ಉಡುಪಿ ಸಂಸ್ಥೆಯ ಗೌರವಾಧ್ಯಕ್ಷ, ಮಾಹೆ ವಿವಿ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಉಡುಪಿ
1965ರಲ್ಲಿ ಆರಂಭಗೊಂಡ ಮೇಲೆ ನಿರಂತರ ಸಮಾಜಮುಖಿ ರಂಗ ಚಟುವಟಿಕೆಗಳೇ ಉಡುಪಿ ರಂಗಭೂಮಿಯನ್ನು ಆರು ದಶಕಗಳ ಕಾಲ ಉಳಿಸಿ ಬೆಳೆಸಿ ಮುನ್ನಡೆಸಿದೆ ಎಂದು ರಂಗಭೂಮಿ ಉಡುಪಿ ಸಂಸ್ಥೆಯ ಗೌರವಾಧ್ಯಕ್ಷ, ಮಾಹೆ ವಿವಿ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.ಅವರು ಉಡುಪಿ ರಂಗಭೂಮಿಯ 60ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ,ದ ಡಾ. ಟಿ. ಮಾಧವ ಎ. ಪೈ ಅವರ ಕಾಲದಿಂದಲೂ ರಂಗಭೂಮಿ ಸಂಸ್ಥೆಗೆ ಮಣಿಪಾಲ ಸಂಸ್ಥೆಗಳು ಪ್ರೋತ್ಸಾಹಿಸುತ್ತಾ ಬಂದಿವೆ. ಇದೀಗ ‘ರಂಗಭೂಮಿ ರಂಗ ಶಿಕ್ಷಣ’ವು ಉಡುಪಿಯ ಮಕ್ಕಳಲ್ಲಿ ರಂಗಾಸಕ್ತಿ ಹಾಗೂ ವ್ಯಕ್ತಿತ್ವದ ಬಹುಮುಖ ವಿಕಸನಕ್ಕೆ ಸಹಕಾರಿಯಾಗಿದೆ. ಈ ವರ್ಷ 25 ಪ್ರೌಢಶಾಲೆಗಳಲ್ಲಿ ರಂಗ ಶಿಕ್ಷಣವನ್ನು ನೀಡುತ್ತಿರುವುದು ಬಹಳ ಸಂತೋಷದ ವಿಚಾರ ಎಂದರು.ಕಳೆದ 16 ವರ್ಷಗಳಿಂದ ರಂಗಭೂಮಿಯನ್ನು ಮುನ್ನಡೆಸುತ್ತಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಸಮರ್ಥ ನಾಯಕತ್ವ, ಕ್ರಿಯಾಶೀಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಹಾಗೂ ಅವರ ತಂಡ ಅಭಿನಂದನಾರ್ಹ ಎಂದು ಡಾ. ಬಲ್ಲಾಳರು ಹೇಳಿದರು.ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಭೋಜ ಯು. ಪರಿಶೋಧಿತ ಲೆಕ್ಕ ಪತ್ರಗಳನ್ನು ಮಂಡಿಸಿದರು.ಸಂಸ್ಥೆಯ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು ಹಾಗೂ ಎನ್. ರಾಜಗೋಪಾಲ ಬಲ್ಲಾಳರು ಉಪಸ್ಥಿತರಿದ್ದರು. ಸಾಧನೆಗಳ ಮೂಲಕ ಸಮಾಜದ ವಿವಿಧ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ರಂಗಭೂಮಿಯ ಸದಸ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.