ಸಮಾಜವಾದಿ ಚಿಂತಕ ಪ್ರೊ.ನಂಜುಂಡ ಸ್ವಾಮಿ

| Published : Feb 21 2024, 02:09 AM IST

ಸಾರಾಂಶ

ನಾಡು ಕಂಡಂತಹ ಜಾಗತಿಕ ಮಟ್ಟದ ಅಪ್ರತಿಮ ಹೋರಾಟಗಾರ ರೈತ ಚಳುವಳಿಯ ಕ್ರಾಂತಿಕಾರಿ ನಾಯಕ ಪ್ರೊ.ನಂಜುಂಡ ಸ್ವಾಮಿಯ ಜನಪರ ಚಿಂತನೆಗಳು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಬೇಕು.

ಮೊಳಕಾಲ್ಮುರು: ನಾಡು ಕಂಡಂತಹ ಜಾಗತಿಕ ಮಟ್ಟದ ಅಪ್ರತಿಮ ಹೋರಾಟಗಾರ ರೈತ ಚಳುವಳಿಯ ಕ್ರಾಂತಿಕಾರಿ ನಾಯಕ ಪ್ರೊ.ನಂಜುಂಡ ಸ್ವಾಮಿಯ ಜನಪರ ಚಿಂತನೆಗಳು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಬೇಕೆಂದು ಪತ್ರಕರ್ತ ದೊಣ್ಣಿಹಳ್ಳಿ ಗುರುಮೂರ್ತಿ ಹೇಳಿದರು.

ಪಟ್ಟಣದ ನುಂಕಿಮಲೆ ಸಿದ್ದೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ರಾಜ್ಯ ರೈತ ಸಂಘದಿಂದ ನಡೆದ ಪ್ರೊ.ಎಂ.ಡಿ.ನಂಜುಂಡ ಸ್ವಾಮಿಯವರ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರೊ.ನಂಜುಂಡ ಸ್ವಾಮಿಯವರಲ್ಲಿದ್ದ ತಾತ್ವಿಕ ಚಿಂತನೆ, ಕ್ರಿಯಾಶೀಲತೆ ಹಾಗೂ ರೈತಪರ ಬದ್ಧತೆಯಿಂದಾಗಿ ರೈತ ಚಳುವಳಿ ರಾಜ್ಯದಲ್ಲಿ ಅತ್ಯಂತ ಪ್ರಭಾವಿಯಾಗಿ ಬೆಳೆಯಲು ಕಾರಣವಾಯಿತು. ಜಾತಿ ವ್ಯವಸ್ಥೆಯ ಕಾಲ ಘಟ್ಟದಲ್ಲಿ ಎಲ್ಲಾ ವರ್ಗದ ರೈತರನ್ನು ಸಂಘಟಿಸಿ ಸಮಾಜವಾದಿ ಚಿಂತನೆಗಳ ಮೂಲಕ ಚಳುವಳಿ ಗಟ್ಟಿಗೊಳಿಸಿದರು.

ಇವರ ತಾತ್ವಿಕ ಚಿಂತನೆಗಳು ದಲಿತ, ಬಂಡಾಯ ಸೇರಿದಂತೆ ರಾಜ್ಯದ ಪ್ರಗತಿ ಪರ ಸಂಘಟನೆಗಳ ಮೇಲೆ ಪ್ರಭಾವ ಬೀರಿತು. ವಿಶ್ವ ವಾಣಿಜ್ಯ ಒಪ್ಪಂದವನ್ನು ಬಲವಾಗಿ ವಿರೋಧಿಸಿದ್ದ ಅವರು ರೈತರ ಪರವಾಗಿ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದರು ಎಂದರು.

ಪ್ರಗತಿಪರ ಚಿಂತಕ ಯಾದವ ರೆಡ್ಡಿ ಮಾತನಾಡಿ, ರೈತ ನಾಯಕ ಪ್ರೊ.ನಂಜುಂಡ ಸ್ವಾಮಿ ಅವರು ರೈತರ ಸ್ವಾಭಿಮಾನದ ಬದುಕಿಗಾಗಿ ಹೋರಾಟ ಮಾಡಿದ್ದರು. ರೈತ ಹೋರಾಟಕ್ಕೆ ಧ್ವನಿಯಾಗಿದ್ದರು. ಅನೇಕ ಸಮಸ್ಯೆಗಳ ನಡುವೆ ಬಳಲುತ್ತಿದ್ದ ರೈತರನ್ನು ಸಂಘಟಿಸಿ ಜಾಗತಿಕ ಮಟ್ಟದಲ್ಲಿ ಕ್ರಾಂತಿಕಾರಿಯಾಗಿ ಸರ್ಕಾರದ ನೀತಿಗಳನ್ನು ಬಲವಾಗಿ ಖಂಡಿಸುತ್ತಿದ್ದರು ಎಂದರು.

ಇದೇ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಎಲ್ಲಾ ಸಮುದಾಯಗಳನ್ನು ಕೂಡಿಕೊಂಡಿದ್ದ ರೈತ ಸಂಘಟನೆಗೆ ಸಮಾಜವಾದ ಚಿಂತನೆಯ ರೂಪ ಕೊಟ್ಟ ಪ್ರೊ.ನಂಜುಂಡಸ್ವಾಮಿ ಅವರು ರೈತರಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ರೈತ ಸಂಘಟನೆಯ ಮುಖಂಡರಿಗೆ ಪ್ರೊ.ನಂಜುಂಡ ಸ್ವಾಮಿಯವರು ದಾರಿದೀಪವಾಗಬೇಕೆಂದು ಹೇಳಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಾಲೂಕು ಅಧ್ಯಕ್ಷ ಕೋನಸಾಗರ ಮಂಜುನಾಥ, ದಲಿತ ಸಂಘರ್ಷ ಸಮಿತಿಯ ಬಿ.ಟಿ.ನಾಗಭೂಷಣ, ಜಿಲ್ಲಾ ಸಂಚಾಲಕ ಕೊಂಡಾಪುರ ಪರಮೇಶ, ದಾನಸೂರ ನಾಯಕ, ಎಸ್.ಪರಮೇಶ, ನಾಗರಾಜ, ಡಿ.ಬಿ.ಕೃಷ್ಣಮೂರ್ತಿ, ಎಸ್.ಟಿ.ಚಂದ್ರಣ್ಣ, ಕನಕ ಶಿವಮೂರ್ತಿ, ಕುರಾಕಲಹಟ್ಟಿ ನಾಗರಾಜ್, ರಮೇಶ ರೆಡ್ಡಿ, ಮಂಜುನಾಥ ಇದ್ದರು.