೧೯೩೯ರಲ್ಲಿ ಮೊದಲ ರಕ್ತ ಬ್ಯಾಂಕ್ ಸ್ಥಾಪಿಸಲಾಯಿತು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ರಕ್ತದ ಕೊರತೆ ಎದುರಾಗಲಿದೆ. ಕಾಲೇಜುಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಏರ್ಪಡಿಸುವ ಅಗತ್ಯತೆ ಇದೆ ಎಂದರು. ಯುವಕರು ವರ್ಷಕ್ಕೆ ನಾಲ್ಕು ಬಾರಿ ಮತ್ತು ಯುವತಿಯರು ಮೂರು ಬಾರಿ ರಕ್ತದಾನ ಮಾಡಬಹುದು. ರಕ್ತದಾನ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಪೂರಕ. ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದಲ್ಲದೆ ಪೋಷಕರು ಹಾಗೂ ಸ್ನೇಹಿತರಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಳೆಯ ವಿದ್ಯಾರ್ಥಿಗಳು ತಾವು ಓದಿದ ಕಾಲೇಜಿನಲ್ಲಿ ರಕ್ತದಾನ ಶಿಬಿರದಂತಹ ಸಮಾಜಮುಖಿ ಕೆಲಸಗಳನ್ನು ಮಾಡುವುದು ಶ್ಲಾಘನೀಯ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಹಿರಿಯ ವಿದ್ಯಾರ್ಥಿಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಮಾಜಿ ಶಾಸಕ ಹಾಗೂ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ. ಆರ್. ಗುರುದೇವ್ ತಿಳಿಸಿದರು.ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಯುವ ರೆಡ್‌ಕ್ರಾಸ್ ಘಟಕ ಹಾಗೂ ೨೦೦೧ನೇ ಬ್ಯಾಚ್‌ನ ಹಳೆವಿದ್ಯಾರ್ಥಿಗಳು, ರಕ್ತದಾನ ಮಾಡಲು ಸದಾ ಮುಂದಿರುತ್ತಿದ್ದ ತಮ್ಮ ಸಹಪಾಠಿ ಅರುಣ್ ಕಮಲ್ ಸ್ಮರಣಾರ್ಥ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ರಕ್ತದಾನ ಎಂಬುದು ಪುಣ್ಯದ ಕಾರ್ಯ. ತುರ್ತು ವೇಳೆ ಸಹಕಾರಿಯಾಗಲಿದೆ ಎಂದರು. ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್ ಪಿ ಮೋಹನ್ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆದಿರುವ ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯೊಂದಿಗಿನ ಒಡನಾಟವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿ. ಭಾರತದಲ್ಲಿ ೪೦೦೦ ರಕ್ತ ಬ್ಯಾಂಕ್‌ಗಳಿವೆ. ೧೯೩೯ರಲ್ಲಿ ಮೊದಲ ರಕ್ತ ಬ್ಯಾಂಕ್ ಸ್ಥಾಪಿಸಲಾಯಿತು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ರಕ್ತದ ಕೊರತೆ ಎದುರಾಗಲಿದೆ. ಕಾಲೇಜುಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಏರ್ಪಡಿಸುವ ಅಗತ್ಯತೆ ಇದೆ ಎಂದರು. ಯುವಕರು ವರ್ಷಕ್ಕೆ ನಾಲ್ಕು ಬಾರಿ ಮತ್ತು ಯುವತಿಯರು ಮೂರು ಬಾರಿ ರಕ್ತದಾನ ಮಾಡಬಹುದು. ರಕ್ತದಾನ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಪೂರಕ. ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದಲ್ಲದೆ ಪೋಷಕರು ಹಾಗೂ ಸ್ನೇಹಿತರಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಜೀವ್ ಹಂಸಲ ಮಾತನಾಡಿ, ೧೯೯೮ರಲ್ಲಿ ಒಮ್ಮೆ ಸ್ನೇಹಿತ ಅರುಣ್ ಕಮಲ್ ಬೆಳಗಿನ ಜಾವ ಬಂದು ಹಾಸ್ಟೆಲ್ ಕೊಠಡಿ ಬಾಗಿಲು ಬಡಿದು ರಕ್ತದ ಅಗತ್ಯವಿದೆ ಬೇಗ ಬಾ ಎಂದು ಕರೆದಿದ್ದ. ಇಷ್ಟು ಬೇಗ ಕರೆದರೆ ಬರಲು ಆಗಲ್ಲ ಅಂದರೂ ಬಲವಂತ ಮಾಡಿ ಭಾರತಿ ನರ್ಸಿಂಗ್ ಹೋಮ್‌ಗೆ ರಕ್ತದಾನ ಮಾಡಲು ಕರೆದೊಯ್ದಿದ್ದ. ಗರ್ಭಿಣಿಯೊಬ್ಬರಿಗೆ ರಕ್ತದ ತುರ್ತು ಅಗತ್ಯವಿತ್ತು. ಅಂದು ಅವರಿಗೆ ರಕ್ತದಾನ ಮಾಡಿದ ಸಂದರ್ಭದಲ್ಲಿ ರಕ್ತದಾನದ ಮಹತ್ವ ಅರಿವಾಯಿತು ಎಂದು ಸ್ನೇಹಿತ ಅರುಣ್ ಕಮಲ್ ಅವರ ಸೇವಾ ಮನೋಭಾವವನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ೨೦೦೧ನೇ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳು ಕಾಲೇಜಿನ ಸ್ವಚ್ಛತಾ ಹಾಗೂ ಭದ್ರತಾ ಸಿಬ್ಬಂದಿಯ ಸೇವೆ ಶ್ಲಾಘಿಸಿ ಗೌರವಿಸಿದರು. ಡಿಸೆಂಬರ್‌ ೧೨ರಂದು ನಡೆಯುವ ಎಂಸಿಇ ಸ್ನೇಹದ ಮಿಲನ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಎಸ್.ಪ್ರದೀಪ್, ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಡಾ.ನಾಗಲಕ್ಷ್ಮಿ, ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಉದಯ್ ಕುಮಾರ್, ನಿರ್ದೇಶಕ ಅಮ್ಜದ್ ಖಾನ್, ಹಳೆ ವಿದ್ಯಾರ್ಥಿಗಳಾದ ಆದರ್ಶ್ ಶೆಟ್ಟಿ, ವಿಂಗ್ ಕಮಾಂಡರ್‌ ಜಯಂತ್ ಕುಮಾರ್, ತೇಜೇಶ್, ಹನುಮಂತ ಗೌಡ ಪಾಟೀಲ್, ಚಂದ್ರಶೇಖರ್, ರಕ್ತದಾನ ಶಿಬಿರದ ಸಂಯೋಜಕರಾದ ಡಾ.ವೆಂಕಟೇಶ್ವರ ರಾವ್ ಕೊಲ್ಲಿ ಮತ್ತು ಸುಷ್ಮಾ ಎನ್ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಹಳೆ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.