ಮಠಗಳು ಸಮಾಜದ ಜನರಲ್ಲಿ ಸಂಸ್ಕಾರ, ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿವೆ.
ಹಗರಿಬೊಮ್ಮನಹಳ್ಳಿ: ಅಕ್ಷರ ಹಾಗೂ ಅನ್ನ ದಾಸೋಹ ಮಠಮಾನ್ಯಗಳ ಸಮಾಜಮುಖಿ ಕಾರ್ಯಗಳ ಬೀಜ ಮಂತ್ರವಾಗಿವೆ. ಸರ್ಕಾರ ಕಷ್ಟ ಸಾಧ್ಯ ಎಂದು ಕೈಚೆಲ್ಲಿದ ಕಾರ್ಯಗಳನ್ನು ಮಠಗಳು ಕೈಗೆತ್ತಿಕೊಂಡು ಕಾರ್ಯೋನ್ಮುಖವಾಗಿವೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಪ್ರಶಂಸಿದರು.
ತಾಲೂಕಿನ ಕಡ್ಲಬಾಳು ಗ್ರಾಮದಲ್ಲಿ ಶಿವಶಾಂತವೀರ ಮಹಾಸ್ವಾಮಿಗಳ ೧೦೪ನೆಯ ಪುಣ್ಯಾರಾಧನೆ ನಿಮಿತ್ತ ಕೊಪ್ಪಳದ ಶಾಖಾ ಗವಿಮಠ ಸೋಮವಾರ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.ಮಠಗಳು ಸಮಾಜದ ಜನರಲ್ಲಿ ಸಂಸ್ಕಾರ, ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿವೆ. ಹಸೆಮಣೆ ಏರಿರುವ ದಂಪತಿಗಳು ಪರಸ್ಪರ ಗೌರವ, ಕುಟುಂಬದಲ್ಲಿ ಸಹಬಾಳ್ವೆಗೆ ಒತ್ತು ನೀಡುವ ಜತೆಗೆ ಧಾರ್ಮಿಕ ಮೌಲ್ಯಗಳ ಮೂಲಕ ಬದುಕಿನಲ್ಲಿ ಸಾರ್ಥಕತೆ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿದಿರುವ ವೈಭವೀಕರಣ ಸ್ವಾಗತಿಸಿದ ಶಾಸಕರು ೨೦೨೭ರ ಡಿಸೆಂಬರ್ ಒಳಗೆ ಹದಗೆಟ್ಟಿರುವ ಬಹುತೇಕ ರಸ್ತೆಗಳ ದುರಸ್ತಿಗೊಳಿಸಿ ಅವರಿಗೆ ಉತ್ತರ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ₹೧೧೦ಕೋಟಿ ಅನುದಾನ ಶೀಘ್ರ ಬಿಡುಗಡೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.ಈಗಾಗಲೇ ಚಿಲವಾರ ಬಂಡಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ಅಚ್ಚುಕಟ್ಟು ಪ್ರದೇಶದ ಜಮೀನುಗಳು ಹಸಿರಿನಿಂದ ನಳನಳಿಸುತ್ತಿವೆ. ಬರಗಾಲದಲ್ಲೂ ರೈತರ ಮೊಗದಲ್ಲಿ ಸಂತಸಗಳು ಗರಿಗೆದರಿವೆ. ಕೇತ್ರದ ನೀರಾವರಿ ಪ್ರದೇಶ ಬಲಪಡಿಸುವ ನಿಟ್ಟಿನಲ್ಲಿ ಅಗತ್ಯ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದು, ಕಡಲಬಾಳು ಗ್ರಾಮದಲ್ಲಿ ಚೆಕ್ ಡ್ಯಾಂ ಮತ್ತು ಕಲ್ಯಾಣ ಮಂಟಪ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ೨೫ ಜೋಡಿ ನೂತನ ವಧುವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಕ್ಕೂ ಮುನ್ನ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಕೊಪ್ಪಳ ಶಾಖಾ ಗವಿಮಠದ ಮರಿ ಶಾಂತವೀರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಉತ್ತಂಗಿಯ ಸೋಮಶಂಕರ ಶ್ರೀಗಳು, ಹೆಬ್ಬಾಳದ ನಾಗಭೂಷಣ ಶ್ರೀಗಳು, ಹಡಗಲಿಯ ಕೊಪ್ಪಳ ಶಾಖಾ ಗವಿಮಠದ ಗವಿಶ್ರೀಗಳು, ಗದ್ದಿಕೇರಿಯ ಚರಂತೇಶ್ವರ ಶ್ರೀಗಳು ಹಾಗೂ ಬಿಸರಳ್ಳಿ ಶಿವಶಾಂತವೀರ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣ ಮೂರ್ತಿ ಶೆಟ್ಟರು, ತಾಲೂಕಾಧ್ಯಕ್ಷ ವೈ. ಮಲ್ಲಿಕಾರ್ಜುನ, ಕನ್ನಿಹಳ್ಳಿ ಚಂದ್ರಶೇಖರ್, ಮಂಜುನಾಥ್ ಗೌಡರು, ವಿಶ್ವ ಕರ್ಮ ಸಮಾಜದ ಅಧ್ಯಕ್ಷ ಸಿದ್ಧರಾಜ್, ಜಾಣಾ ಅನಿಲ್, ಚುಕನಕಲ್ ರಾಮಣ್ಣ, ಒಂಟಿಗೋಡಿ ಚನ್ನಬಸಪ್ಪ, ಪಿಡಿಓ ಜಗಳೂರು ಕೊಟ್ರೇಶ್, ನೀರಾವರಿ ಇಲಾಖೆಯ ಎಇಇ ಧರ್ಮರಾಜ್ ಹಾಗೂ ಮತ್ತಿತರರಿದ್ದರು. ಶಾಸಕರ ಆಪ್ರ ಕಾರ್ಯದರ್ಶಿ ಬ್ಯಾಟಿ ನಾಗರಾಜ್, ಎ.ಎಂ.ಗಂಗಾಧರ ಸ್ವಾಮಿ ಮತ್ತು ಗವಿಸಿದ್ಧಯ್ಯ ನಿರ್ವಹಿಸಿದರು.