ಹಾಸನ ಜಿಲ್ಲೆಯಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ವೀರಶೈವ ಲಿಂಗಾಯಿತ ಮತದಾರರಿದ್ದು, ಈ ಶಕ್ತಿಯನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವ ಅಗತ್ಯವಿದೆ ಎಂದರು. ಸಮಾಜದಲ್ಲಿ ಒಗ್ಗಟ್ಟು ಬೆಳೆಸಿಕೊಂಡರೆ ರಾಜಕೀಯ ಕ್ಷೇತ್ರದಲ್ಲಿ ಸೂಕ್ತ ಸ್ಥಾನಮಾನಗಳನ್ನೂ ಪಡೆಯಲು ಸಾಧ್ಯವಾಗುತ್ತದೆ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಸಂಘಟನೆಯ ಬೆಳವಣಿಗೆಗಾಗಿ ಪ್ರತಿಯೊಬ್ಬರೂ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಸಮಾಜದ ಸದಸ್ಯತ್ವ ಅಭಿಯಾನವನ್ನು ಇನ್ನಷ್ಟು ಬಲಪಡಿಸಿ, ಸಂಘಟನೆಯನ್ನು ತಳಮಟ್ಟದಿಂದ ವಿಸ್ತರಿಸುವ ಅಗತ್ಯವಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ವೀರಶೈವ ಲಿಂಗಾಯಿತ ಸಮಾಜವು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಇನ್ನಷ್ಟು ಸದೃಢವಾಗಬೇಕಾದರೆ ಸಂಘಟನೆಯೇ ಪ್ರಮುಖ ಶಕ್ತಿಯಾಗಿದ್ದು, ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಮಾಜದ ಒಗ್ಗಟ್ಟಿಗೆ ಕೈಜೋಡಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಘಟಕದ ಸದಸ್ಯ ಹಾಗೂ ಉದ್ಯಮಿ ಗ್ರಾನೈಟ್ ರಾಜಶೇಖರ್ ಕರೆ ನೀಡಿದರು.ನಗರದ ತಣ್ಣೀರುಹಳ್ಳ ಮಠದಲ್ಲಿ ಆ. ೩ರಂದು ನಡೆದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹಾಸನ ಮಹಾನಗರ ಪ್ರಾಧಿಕಾರ ಮಟ್ಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ವೀರಶೈವ ಲಿಂಗಾಯಿತ ಮತದಾರರಿದ್ದು, ಈ ಶಕ್ತಿಯನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವ ಅಗತ್ಯವಿದೆ ಎಂದರು. ಸಮಾಜದಲ್ಲಿ ಒಗ್ಗಟ್ಟು ಬೆಳೆಸಿಕೊಂಡರೆ ರಾಜಕೀಯ ಕ್ಷೇತ್ರದಲ್ಲಿ ಸೂಕ್ತ ಸ್ಥಾನಮಾನಗಳನ್ನೂ ಪಡೆಯಲು ಸಾಧ್ಯವಾಗುತ್ತದೆ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಸಂಘಟನೆಯ ಬೆಳವಣಿಗೆಗಾಗಿ ಪ್ರತಿಯೊಬ್ಬರೂ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಸಮಾಜದ ಸದಸ್ಯತ್ವ ಅಭಿಯಾನವನ್ನು ಇನ್ನಷ್ಟು ಬಲಪಡಿಸಿ, ಸಂಘಟನೆಯನ್ನು ತಳಮಟ್ಟದಿಂದ ವಿಸ್ತರಿಸುವ ಅಗತ್ಯವಿದೆ ಎಂದು ಹೇಳಿದರು.ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಘಟಕದ ಉಪಾಧ್ಯಕ್ಷೆ ರಾಜೇಶ್ವರಿ ನಾಗರಾಜ್, ರಾಷ್ಟ್ರ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರ್ಪಡೆಗೊಳಿಸಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಹಾಸನ ನಗರದಲ್ಲಿ ಸಮಾಜದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯದ ಕೊರತೆ ಇರುವುದರಿಂದ ಶೀಘ್ರದಲ್ಲೇ ವೀರಶೈವ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ಜೊತೆಗೆ ಮಹಾಸಭೆಗೆ ಸ್ವಂತ ಕಟ್ಟಡ ನಿರ್ಮಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕೆಂದು ಹೇಳಿದರು.ಹಾಸನ ಮಹಾನಗರ ಪ್ರಾಧಿಕಾರ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಚ್.ಪಿ. ರೋಹಿತ್ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಸಮಾಜವನ್ನು ಮತ್ತಷ್ಟು ಸಂಘಟಿಸುವ ಕಾರ್ಯಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷ ನವಿಲೆ ಪರಮೇಶ್ ಮಾತನಾಡಿ, ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಉಳಿದ ಕಡೆಗಳಲ್ಲಿ ಯುವ ಘಟಕ ಹಾಗೂ ಮಹಿಳಾ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಸಮಾಜದ ಸಂಘಟನೆಯಲ್ಲಿ ಪ್ರತಿಯೊಬ್ಬರೂ ನಿರಂತರವಾಗಿ ಸಕ್ರಿಯರಾಗಿರಬೇಕು ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ರಾಜ್ಯ ಘಟಕದ ನಿರ್ದೇಶಕ ಎಚ್. ಪಿ. ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಬಿ.ಜಿ. ಯತೀಶ್ ಹಾಗೂ ಪುನೀತ್ ಪಟೇಲ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಮತಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಜಿ.ಎಸ್. ಅವಿನಾಶ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಹಾಗೂ ಹಾಸನ ಮಹಾನಗರ ಪಾಲಿಕೆ ಘಟಕದ ಉಪಾಧ್ಯಕ್ಷ ಬಿ.ಆರ್. ಉದಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ವಿ. ವಿಕಾಸ್ ವಂದಿಸಿದರು.ಸಮಾರಂಭದಲ್ಲಿ ಹಾಸನ ಮಹಾನಗರ ಪಾಲಿಕೆ ಘಟಕದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಜಿಲ್ಲಾ ಮಾಜಿ ಯುವ ಘಟಕದ ಅಧ್ಯಕ್ಷ ಸಂಗಮ್, ರಾಜ್ಯ ಮಹಿಳಾ ಘಟಕದ ನಿರ್ದೇಶಕಿ ಜ್ಯೋತಿ ಗಣೇಶ್, ಜಿಲ್ಲಾ ಖಜಾಂಚಿ ಎಸ್. ಜಯಶಂಕರ್, ಜಿಲ್ಲಾ ಕಾರ್ಯದರ್ಶಿಗಳಾದ ಎಂ.ಎಂ. ಸುರೇಶ್, ಶಾಂತರಾಜು, ಜಿಲ್ಲಾ ನಿರ್ದೇಶಕರಾದ ಶೋಬನ್ ಬಾಬು, ಶರತ್ ಭೂಷಣ್, ಶಿವಾನಂದ್, ವಿಜಯ್ ಕುಮಾರ್, ನಂದೀಶ್, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ರಾಜಣ್ಣ, ಹೋಳೆನರಸೀಪುರ ತಾಲೂಕು ಅಧ್ಯಕ್ಷ ಕೆ. ರಾಜಶೇಖರ್, ಹಾಸನ ಮಹಾನಗರ ಪಾಲಿಕೆ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಪಿ. ಮಂಜುನಾಥ್, ಉಪಾಧ್ಯಕ್ಷ ಎಚ್.ಪಿ. ಮಧು ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.