ಸಿ.ಎಸ್. ಆರ್. ಫಂಡ್ ಆರಂಭಕ್ಕೆ ಸ್ಫೂರ್ತಿಯಾದ ಸೊಸೈಟಿ ಬ್ಯಾಂಕ್ : ವೀರಪ್ಪ ಮೊಯಿಲಿ

| Published : Nov 15 2024, 12:33 AM IST

ಸಾರಾಂಶ

ಕಳೆದ ೫೩ ವರ್ಷದಿಂದ ಸೊಸೈಟಿ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಟಿಎಪಿಎಂಎಸ್, ಎಪಿಎಂಸಿ, ಇತ್ಯಾದಿಗಳ ನಿರ್ದೇಶಕರಾಗಿದ್ದ ಹಿರಿಯ ಸಹಕಾರಿ ಎಂ. ಗಣೇಶ್ ನಾಯಕ್ ಅವರಿಗೆ ಈ ಬಾರಿ 10ನೇ ವರ್ಷದ ಸಹಕಾರ ಕಲ್ಪವೃಕ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವನಾಗಿ ಭಾರೀ ವ್ಯವಹಾರ ಸಂಸ್ಥೆಗಳ ಲಾಭಾಂಶವನ್ನು ಗ್ರಾಮೀಣ ಭಾರತಕ್ಕೆ ಹಂಚುವ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ಆರ್ ಫಂಡ್) ಪರಿಕಲ್ಪನೆಯನ್ನು ತಾನು ಜಾರಿಗೊಳಿಸಲು ಮೂಡುಬಿದಿರೆ ಸೊಸೈಟಿ ಬ್ಯಾಂಕ್‌ನ ಸೇವಾ ಮನೋಭಾವ, ಮೂಡುಬಿದಿರೆಯ ತವರು ನೆಲ ತನಗೆ ಸ್ಫೂರ್ತಿಯಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದರು.ಅವರು ಗುರುವಾರ ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಹಕಾರ ಸಪ್ತಾಹ ಸಂಭ್ರಮ- ೨೦೨೪ ಉದ್ಘಾಟಿಸಿ ಸಹಕಾರ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಜಾಪ್ರಭುತ್ವದ ಸ್ಥಂಭಗಳಲ್ಲಿ ಒಂದಾದ ಸಹಕಾರ ಚಳುವಳಿ ರಾಜಕೀಯದ ಸರಕಾರವಾಗಬಾರದು. ಸಾಮುದಾಯಿಕ, ನಿಸ್ಪಕ್ಷಪಾತ, ನಿರ್ವಂಚನೆಯ, ಸ್ವಹಿತಾಸಕ್ತಿರಹಿತ, ಪಾರದರ್ಶಕತೆಯ ಮೌಲ್ಯಗಳಿಂದ ನನ್ನ ತವರು ನೆಲದ ಮೂಡುಬಿದಿರೆ ಸೊಸೈಟಿ ನಾಡಿಗೆ ಮಾತ್ರವಲ್ಲ ರಾಷ್ಟ್ರಕ್ಕೆ ಮಾದರಿಯಾಗಿ ಬೆಳೆದಿರುವ ಬಗ್ಗೆ ಅಭಿಮಾನವಿದೆ ಎಂದ ಮೊಯ್ಲಿ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ನಬಾರ್ಡ್ ಮೂಲಕ ರೈತರಿಗೆ ಆರ್ಥಿಕ ಚೈತನ್ಯ ನೀಡುವಲ್ಲಿ ತನ್ನ ಸಲಹೆ ಅನುಷ್ಠಾನವಾಗಿತ್ತು ಎಂದರು.

ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ ಮೂಡುಬಿದಿರೆ ಹಾಗೂ ಇಲ್ಲಿನ ಜನತೆ ಸ್ವಾಭಿಮಾನದ ಹೆಜ್ಜೆಗಳನ್ನಿಡುವ ಮೂಲಕ ಪ್ರಗತಿಗೆ ಮುಖ ಮಾಡುವಲ್ಲಿ ಸೊಸೈಟಿ ಕೊಡುಗೆ ಗಮನಾರ್ಹ ಎಂದರು.

ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಕಸಿತ ಭಾರತದಲ್ಲಿ ಸಹಕಾರಿ ಸಂಸ್ಥೆಗಳ ಜವಾಬ್ದಾರಿ ಹೆಚ್ಚಿದೆ. ಈ ನಿಟ್ಟಿನಲ್ಲಿ ಒಂದು ಬಾರಿ ಒಂದು ಸಾವಿರ ರು.ಗೆ ಗರಿಷ್ಠ ಎರಡು ಲಕ್ಷದ ಆರೋಗ್ಯ ವಿಮೆಯ ಕಲ್ಪವೃಕ್ಷ ಕಾರ್ಡ್, ರೈತರಿಗೆ ಪಿಂಚಣಿ ನೀಡುವ ಮೂಡುಬಿದಿರೆ ಸೊಸೈಟಿಯ ಪರಿಕಲ್ಪನೆಗಳು ರಾಷ್ಟ್ರದಲ್ಲೇ ವಿನೂತನ ಎಂದರು.ಮಾಜಿ ಸಚಿವ ಸೊಸೈಟಿ ನಿರ್ದೇಶಕ, ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ಜಯಶ್ರೀ ಅಮರನಾಥ ಶೆಟ್ಟಿ, ಚೌಟರ ಅರಮನೆಯ ಕುಲದೀಪ್ ಎಂ. ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಡಾ.ಎಚ್‌.ಎನ್. ರಮೇಶ್ ಮುಖ್ಯ ಅತಿಥಿಗಳಾಗಿದ್ದರು.

ಕಲ್ಪವೃಕ್ಷ ಪ್ರಶಸ್ತಿ ಪ್ರದಾನ: ಕಳೆದ ೫೩ ವರ್ಷದಿಂದ ಸೊಸೈಟಿ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಟಿಎಪಿಎಂಎಸ್, ಎಪಿಎಂಸಿ, ಇತ್ಯಾದಿಗಳ ನಿರ್ದೇಶಕರಾಗಿದ್ದ ಹಿರಿಯ ಸಹಕಾರಿ ಎಂ. ಗಣೇಶ್ ನಾಯಕ್ ಅವರಿಗೆ ಈ ಬಾರಿ 10ನೇ ವರ್ಷದ ಸಹಕಾರ ಕಲ್ಪವೃಕ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿನ್ನದ ಪದಕ, ರಜತ ಸ್ಮರಣಿಕೆ, 25 ಸಾವಿರ ರು. ನಗದು, ತಾಮ್ರ ಪತ್ರ ಸಹಿತ ಸಹಕಾರಿ ಗೌರವದ ಪ್ರಶಸ್ತಿಯನ್ನು ಬ್ಯಾಂಕ್‌ ವತಿಯಿಂದ ಗಣ್ಯರ ಸಮ್ಮುಖದಲ್ಲಿ ಗಣೇಶ್ ನಾಯಕ್ ಅವರಿಗೆ ಪ್ರದಾನ ಮಾಡಲಾಯಿತು.

ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಸ್ವಾಗತಿಸಿ ಪ್ರಸಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ವಿವಿಧ ದೇವಸ್ಥಾನ, ದೈವಸ್ಥಾನಕ್ಕೆ ಆರ್ಥಿಕ ಕೊಡುಗೆಯನ್ನು ವಿತರಿಸಲಾಯಿತು. ಯುವ ಸ್ಯಾಕ್ಸೋಫೋನ್ ವಾದಕಿ ಶಾರ್ವರಿ ಪಿ. ದೇವಾಡಿಗ ಅವರನ್ನು ಗೌರವಿಸಲಾಯಿತು. ನಿರ್ದೇಶಕ ಜಯರಾಮ್ ಕೋಟ್ಯಾನ್ ವಂದಿಸಿದರು. ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಘುವೀರ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು. ಚೇತನಾ ರಾಜೇಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.ಇಂದು ಸಾಧಕ ಪ್ರಶಸ್ತಿ ಪ್ರದಾನ: ನ.೧೫ರಂದು ಶುಕ್ರವಾರ ಶಾಸಕ ಉಮಾನಾಥ ಕೋಟ್ಯಾನ್ ಅವರಿಂದ ವಿವಿಧ ಯೋಜನೆಗಳ ಉದ್ಘಾಟನೆ, ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ ನಡೆಯಲಿದೆ. ನಿಶ್ಮಿತಾ ಸಮೂಹ ಸಂಸ್ಥೆಯ ಮಾಲಕ ನಾರಾಯಣ ಪಿ.ಎಂ. ಅವರಿಗೆ ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ, ವಿವಿಧ ಸಂಘ-ಸಂಸ್ಥೆಗಳಿಗೆ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮವಿದೆ. ನ.20ರ ವರೆಗೆ ಪ್ರತೀ ದಿನ ಸಂಜೆ ೬ರಿಂದ ಸಭಾ ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಲಾಪಗಳು ನಡೆಯಲಿವೆ.