ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ನಾವೆಲ್ಲ ಒಗ್ಗಟ್ಟಿನಿಂದ ಮುನ್ನೆಡೆದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಮಾಜ ಸಂಘಟನೆಯಲ್ಲಿ ತಾಲೂಕು ಸೇರಿದಂತೆ ತಳಹದಿಯಲ್ಲಿರುವ ಸಮಾಜದ ಘಟಕಗಳು ಕಾರ್ಯನಿರ್ವಹಣೆಯಲ್ಲಿ ಮುಂದಾದಾಗ ಬಣಜಿಗ ಸಮಾಜ ಏಳಿಗೆ ಸಾಧ್ಯವಾಗುತ್ತದೆ ಎಂದು ಬೆಳಗಾವಿ ಸಂಸದ ಜಗದೀಶ ಶಟ್ಟರ ಹೇಳಿದರು.ಪಟ್ಟಣದ ವಿಜಯ ಮಹಾಂತೇಶ ಮಂಗಲ ಭವನದಲ್ಲಿ ರವಿವಾರ ನಡೆದ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳು ಪದಗ್ರಹಣ, ಪ್ರತಿಭಾ ಪುಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬಸವಣ್ಣನವರ ತತ್ವಗಳನ್ನು ಪಾಲನೆ ಮಾಡುತ್ತಿರುವ ಸಮಾಜವೆಂದರೆ ಬಣಜಿಗ ಸಮಾಜ. ಸಮಾಜವು ಯಾವುದೇ ಜಾತಿಭೇದ ಮಾಡದೇ ಎಲ್ಲಾ ಸಮಾಜದವರೊಂದಿಗೆ ಸೌಹಾರ್ದತೆಯಿಂದ ಇರುವುದರಿಂದಲೇ ರಾಜ್ಯದಲ್ಲಿ ೯ ಜನ ಮುಖ್ಯಮಂತ್ರಿಗಳಲ್ಲಿ ಬಣಜಿಗ ಸಮಾಜದವರೇ ೭ ಜನ ಮುಖ್ಯಮಂತ್ರಿಗಳಾಗಿದ್ದಾರೆ. ಇದಕ್ಕಾಗಿಯೇ ಸಮಾಜಕ್ಕೆ ಜನರು ಗೌರವ ನೀಡುತ್ತಿದ್ದಾರೆ. ಇದನ್ನು ಮುಂದಿನ ಪೀಳಿಗೆಗೆ ಕರೆದೊಯ್ಯುವ ಕಾರ್ಯ ನಡೆಯಬೇಕಿದೆ ಎಂದು ತಿಳಿಸಿದರು.ಸಮಾಜದ ಶಕ್ತಿ ತೋರಿಸಬೇಕಿದೆ: ಕರ್ನಾಟಕದ ನೆರೆ ರಾಜ್ಯಗಳಲ್ಲಿ ಬಣಜಿಗ ಸಮಾಜದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅದರಂತೆ ನಮ್ಮ ರಾಜ್ಯದಲ್ಲಿಯೂ ಈಗಾಗಲೇ ಬಳ್ಳಾರಿ, ಬೀಳಗಿಯಲ್ಲಿಯೂ ಸಮಾಜದ ಸಂಘದಿಂದ ಸಹಕಾರಿ ಬ್ಯಾಂಕ್‌ಗಳನ್ನು ತೆರೆದು ಬಡ ಕುಟುಂಬಗಳಿಗೆ ಆರ್ಥಿಕ ಬೆಂಬಲ ನೀಡಿ ಅವರನ್ನು ಎಲ್ಲರಂತೆ ಸಮಾಜದಲ್ಲಿ ಜೀವನ ನಡೆಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಕಾರ್ಯ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ನಡೆಯಬೇಕಿದೆ ಎಂದರು.ಶಾಸಕ ಹಾಗೂ ಸಾಬೂನ ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷ ಸಿ.ಎಸ್.ನಾಡಗೌಡ ಮಾತನಾಡಿ, ಎಲ್ಲಾ ಸಮಾಜದ ಬಹುತೇಕ ಕ್ಷೇತ್ರಗಳಲ್ಲಿ ಬಣಜಿಗ ಸಮಾಜದವರೇ ಮುಂಚೂಣಿಯಲ್ಲಿರುವುದನ್ನು ಯಾರು ಅಲ್ಲಗಳಿಯುವಂತಿಲ್ಲ. ರಾಜಕೀಯ ರಂಗದಲ್ಲಿ ಅತೀ ಹೆಚ್ಚು ಶಾಸಕರಾಗಿದ್ದು ಬಣಜಿಗ ಸಮಾಜದವರು. ಆದರೆ, ಇಂದು ವೀರಶೈವವೇ ಬೇರೆ ಲಿಂಗಾಯತವೇ ಬೇರೆ ಎಂಬ ಹೇಳಿಕೆಗಳು ಕೇಳಿಬರುತ್ತಿದೆ. ಇದರಿಂದ ವೀರಶೈವ- ಲಿಂಗಾಯತರ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ನಾವು ಯೋಚಿಸುತ್ತಿಲ್ಲ. ವೃತ್ತಿಯ ಮುಖಾಂತರ ಉಪ ಜಾತಿಯನ್ನು ಬರೆಸಲಾಗುತ್ತಿದೆ. ಇದರಿಂದ ಸಮಾಜಕ್ಕೆ ಬಹಳಷ್ಟು ಹಿನ್ನಡೆಯಾಗಲಿದೆ. ಆದ್ದರಿಂದ, ಎಲ್ಲರೂ ಜಾತಿಯಲ್ಲಿ ವೀರಶೈವ-ಲಿಂಗಾಯತ ಎಂದೇ ಬರೆಸಿ. ಇದರಿಂದ ಈಗಾಗಲೇ ೭ ಜನ ಮುಖ್ಯಮಂತ್ರಿಗಳನ್ನು ನೀಡಿರುವ ಬಣಜಿಗರ ಸಮಾಜಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ೭ ಜನ ಮುಖ್ಯಮಂತ್ರಿಗಳನ್ನು ನೀಡುವ ಶಕ್ತಿ ದೊರಕುತ್ತದೆ. ಮುದ್ದೇಬಿಹಾಳ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಡಿಯುವ ನೀರಿಗಾಗಿ ₹ ೯.೫ ಕೋಟಿ ನೀಡಿದರೆ ಹಾಗೂ ಜಗದೀಶ ಶೆಟ್ಟರ ಚಿಮ್ಮಲಗಿ ಲಿಫ್ಟ್ ನೀರಾವರಿಗಾಗಿ ಕ್ಷೇತ್ರದಲ್ಲಿ ಧ್ವನಿ ಎತ್ತಿದಾಗ ಮುಂದೆ ಬಂದು ಸಮಸ್ಯೆಯನ್ನು ಬಗೆಹರಿಸಿದರು ಎಂದರು.ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಬಣಜಿಗ ಸಮಾಜಕ್ಕೆ ೨ಎ ಮೀಸಲಾತಿ ದೊರಕುವಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಶ್ರಮ ಬಹಳಷ್ಟಿದೆ. ಅಲ್ಲದೇ, ಮುದ್ದೇಬಿಹಾಳ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ₹ ೧೮೦೦ಕೋಟಿ ಅನುದಾನ ನೀಡಿ ಚಿಮ್ಮಲಗಿ ಏತ ನೀರಾವರಿಗೆ ಚಾಲನೆ ನೀಡಿದ ವ್ಯಕ್ತಿ ಅವರು ಎಂದು ಅವರು ಹೇಳಿದರು.ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು. ಸಾಹಿತಿ ಅಶೋಕ ಹಂಚಿಲಿ ಸಮಾಜದ ಕೊಡುಗೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ರುದ್ರೇಶ ಕಿತ್ತೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ ಚಟ್ಟೇರಗೆ ನಿಕಟಪೂರ್ವ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಅಧಿಕಾರ ಹಸ್ತಾಂತರಿಸಿದರು. ಇದೇ ವೇಳೆ ಸಮಾಜದ ನಿವೃತ್ತ ನೌಕರರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಾಧಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಘಟಕದ ಗೌರವಾಧ್ಯಕ್ಷ ಎಂ.ಎಸ್.ನಾವದಗಿ, ಪ್ರ.ಕಾರ್ಯದರ್ಶಿ ರಾಜು ಬೊಳ್ಳೊಳ್ಳಿ, ಬಸವರಾಜ ಮೋಟಗಿ, ಮಹಾಂತಪ್ಪ ನಾವದಗಿ, ಸಂಗಮೇಶ ನಾವದಗಿ, ಬಸವರಾಜ ಚಿನಿವಾರ, ಬಸವರಾಜ ಬೆಲ್ಲದ, ಸಂಗಣ್ಣ ನಾಶಿ, ಪ್ರವೀಣ ನಾಗಠಾಣ, ಶಿವಾನಂದ ಹುರಕಡ್ಲಿ, ರಮೇಶ ಕಿತ್ತೂರ, ಡಿ.ಎಸ್.ಚಳಗೇರಿ, ಎಸ್.ಎಸ್.ಹುನಗುಂದ, ಮುತ್ತು ಕಡಿ, ಸುಧೀರ ನಾವದಗಿ, ಜಗದೀಶ ಲಕ್ಷಟ್ಟಿ, ಜಗದೀಶ ಕಂಠಿ, ರಾಜು ಜೋಳದ, ಸಂಗಮೇಶ ಕಂಠಿ, ಅಶೋಕ ಚಿನಿವಾರ, ಶಂಕರ ಕಡಿ, ಸುಚಿತ ಚಳಗೇರಿ, ಆನಂದ ತುಪ್ಪದ, ಶಾಹೀಲ್ ನಾಗಠಾಣ, ಸಮರ್ಥ ನಾವದಗಿ, ಸಂಗಮ್ಮ ಜೋಳದ, ಕವಿತಾ ಕಡಿ, ಶ್ವೇತಾ ನಾವದಗಿ, ರೇಖಾ ಗಡೇದ, ಬಸಮ್ಮ ಕೋಳೂರ, ಪಾರ್ವತಿ ಪವಾಡಶೆಟ್ಟಿ, ವಿಜಯಲಕ್ಷ್ಮೀ ಗಡೇದ, ಶೋಭಾ ನಾಗಠಾಣ, ಕವಿತಾ ದಡ್ಡಿ, ಶೈಲಜಾ ಪಾವಲೆ ಸೇರಿದಂತೆ ಇತರರಿದ್ದರು.ಕೋಟ್‌ವೀರಶೈವ-ಲಿಂಗಾಯತ ಸಮಾಜದಲ್ಲಿ ರೆಡ್ಡಿ, ಪಂಚಮಸಾಲಿ, ಬಣಜಿಗ ಸೇರಿದಂತೆ ಇನ್ನಿತರ ಸಮಾಜದವರು ವಿವಿಧ ಸಂಘಟನೆ ಕೈಗೊಂಡು ಸಮಾವೇಶಗಳನ್ನು ಮಾಡಿದರೂ ವೀರಶೈವ ಸಮಾಜದ ಒಂದೇ ಎನ್ನುವ ಗುರಿ ಇರಬೇಕು. ಸದ್ಯ ನಡೆಯುತ್ತಿರುವ ಸಮೀಕ್ಷೆಯಲ್ಲಿ ಧರ್ಮ ಹಿಂದು, ಜಾತಿ ವೀರಶೈವ ಹಾಗೂ ಉಪ ಜಾತಿಯಲ್ಲಿ ಬಣಜಿಗ, ರೆಡ್ಡಿ, ಪಂಚಮಸಾಲಿ ಸೇರಿದಂತೆ ಇನ್ನಿತರ ಸಮಾಜದ ಉಪ ಜಾತಿಯ ಹೆಸರನ್ನು ನೋಂದಾಯಿಸಬೇಕು.ಜಗದೀಶ ಶೆಟ್ಟರ, ಸಂಸದ