ಹೊರಗುತ್ತಿಗೆ ನೌಕರರಿಗೆ ವೇತನಕ್ಕೆ ಸೊಸೈಟಿ ಸ್ಥಾಪನೆ

| Published : Sep 11 2025, 12:03 AM IST

ಹೊರಗುತ್ತಿಗೆ ನೌಕರರಿಗೆ ವೇತನಕ್ಕೆ ಸೊಸೈಟಿ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿನಿಮಾ ಟಿಕೆಟ್ ಮೇಲೆ ಶೇ.1 ಅಥವಾ 2 ರಷ್ಟು ಮನರಂಜನಾ ತೆರಿಗೆ ಸಂಗ್ರಹಿಸಿ ಸಿನಿಮಾ ಕ್ಷೇತ್ರದ ಕಾರ್ಮಿಕರಿಗೆ ಯೋಜನೆ ತರಲಾಗುವುದು. ವಿವಿಧ ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವೇತನ ನೀಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೊಸೈಟಿಯೊಂದನ್ನು ಸ್ಥಾಪಿಸಿ ಅದರ ಮೂಲಕ ನೇರವಾಗಿ ಸಂಬಂಧಪಟ್ಟ ನೌಕರರ ಖಾತೆಗೆ ವೇತನ ಜಮೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೇಶದ ಯಾವ ರಾಜ್ಯದಲ್ಲೂ ಜಾರಿ ಮಾಡದ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಜಾರಿಗೊಳಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಎಸ್ ಲಾಡ್ ತಿಳಿಸಿದರು.

ಕಾರ್ಮಿಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮತ್ತು ಸಾರಿಗೆ ಇಲಾಖೆ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಬುಧವಾರ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಮಿಕರ ಪರ 3 ಯೋಜನೆ

ಕಾರ್ಮಿಕರ ಪರವಾದ ಮೂರು ಯೋಜನೆಗಳನ್ನು ಜಾರಿ ಮಾಡಿದೆ. ದ್ವಿಚಕ್ರ ವಾಹನ ಸೇರಿದಂತೆ ವಿವಿಧ ಸಾರಿಗೆ ವ್ಯವಸ್ಥೆಯ ಮೂಲಕ ಆಹಾರ ಪೂರೈಕೆ ಮತ್ತಿತರ ಸೇವೆಗಳನ್ನು ನೀಡುತ್ತಿರುವ ಸ್ವಿಗ್ಗಿ, ಜೊಮ್ಯಾಟ್ ಇನ್ನಿತರ ಕಂಪನಿಗಳ ಕಾರ್ಮಿಕರ ಅನುಕೂಲಕ್ಕಾಗಿ ಗಿಗ್ ಎಂಬ ವಿಶಿಷ್ಟ ಯೋಜನೆಯನ್ನು ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಗೃಹ ಕಾರ್ಮಿಕರಿಗಾಗಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ವಿಶೇಷ ಯೋಜನೆಯೊಂದನ್ನು ಜಾರಿ ಮಾಡಲಾಗುವುದು.

ಸಿನಿಮಾ ಕಾರ್ಮಿಕರಿಗೆ ಯೋಜನೆ

ಸಿನಿಮಾ ಟಿಕೆಟ್ ಮೇಲೆ ಶೇ.1 ಅಥವಾ 2 ರಷ್ಟು ಮನರಂಜನಾ ತೆರಿಗೆ ಸಂಗ್ರಹಿಸಿ ಸಿನಿಮಾ ಕ್ಷೇತ್ರದ ಕಾರ್ಮಿಕರಿಗೆ ಯೋಜನೆ ತರಲಾಗುವುದು. ವಿವಿಧ ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವೇತನ ನೀಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೊಸೈಟಿಯೊಂದನ್ನು ಸ್ಥಾಪಿಸಿ ಅದರ ಮೂಲಕ ನೇರವಾಗಿ ಸಂಬಂಧಪಟ್ಟ ನೌಕರರ ಖಾತೆಗೆ ವೇತನ ಜಮೆ ಮಾಡಲಾಗುವುದು. ಇದರಿಂದ ಹೊರಗುತ್ತಿಗೆ ನೌಕರರ ವೇತನ ಮತ್ತು ಸೌಲಭ್ಯಗಳನ್ನು ಮಧ್ಯವರ್ತಿ ಏಜೆನ್ಸಿಗಳು ದುರುಪಯೋಗ ಮಾಡಿಕೊಳ್ಳುವುದನ್ನು ತಡೆಯಲಾಗುವುದು ಎಂದರು.

ಈ ವೇಳೆ ಶಾಸಕ ಪ್ರದೀಪ್ ಈಶ್ವರ್, ಲಿಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗರಾಜ್, ಕಾರ್ಮಿಕ ಇಲಾಖೆ ಆಯುಕ್ತ ಹೆಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೇಶವರೆಡ್ಡಿ, ಜಿಲ್ಲಾಧಿಕಾರಿ ಪಿ. ಎನ್ ರವೀಂದ್ರ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ ವೈ ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಅಶ್ವಿನ್, ಅಸಂಘಟಿತ ವಲಯದ ಕಾರ್ಮಿಕರು ಇದ್ದರು.