ಸಾರಾಂಶ
ಕುಮಟಾ: ಶಿಕ್ಷಣಕ್ಕಿಂತ ಸಂಸ್ಕಾರ ಪ್ರಾಪ್ತಿಗೆ ಅಧಿಕ ಶ್ರಮ ಬೇಕು. ಉತ್ತಮ ಸಾಧಕ ಗುರುವಿನ ಮಾರ್ಗದರ್ಶನದಿಂದ ಸುಸಂಸ್ಕೃತರಾಗಲು ಸಾಧ್ಯವಿದೆ. ಸಮಾಜಕ್ಕೆ ಇಂತಹ ಸುಸಂಸ್ಕೃತರ ನೇತೃತ್ವದ ಅವಶ್ಯಕತೆ ಇದೆ ಎಂದು ಹಿಂದೂ ಜಾಗರಣ ವೇದಿಕೆಯ ಸಾಮರಸ್ಯ ವಿಭಾಗದ ಕರ್ನಾಟಕ ಉತ್ತರ ಪ್ರಾಂತ ಪ್ರಮುಖ ಸು. ಕೃಷ್ಣಮೂರ್ತಿ ಹೇಳಿದರು.
ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಹಾಗೂ ತಡಸದ ತಪೋಭೂಮಿ ಟ್ರಸ್ಟ್ ವತಿಯಿಂದ ಗಾಯತ್ರಿ ತಪೋಭೂಮಿಯ ವೇದಮಾತಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಸತಿಸಹಿತ ನಾದಮಯ ಸಂಸ್ಕಾರ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ವಿನಾಯಕ ಆಕಳವಾಡಿ ಮಾತನಾಡಿ, ಜೀವನ ಶಿಕ್ಷಣ ಕಲೆಯನ್ನು ಬೋಧಿಸುವ, ಯೋಗ, ಸುಭಾಷಿತ, ಸ್ತೋತ್ರ, ಸಂಗೀತ, ವೇದಗಣಿತ, ಅಮರಕೋಶ, ಭಗವದ್ಗೀತೆ, ಚಿತ್ರಕಲೆ, ಪಂಚಾಂಗ ಪರಿಚಯ ಮುಂತಾದ ವಿಷಯಗಳನ್ನು ಸಮಯಮಿತಿಯಲ್ಲಿ ಬೋಧಿಸಿ, ಮಕ್ಕಳನ್ನು ಪರಿವರ್ತಿಸುವ ಇಂಥ ಶಿಬಿರಗಳು ಇಂದಿನ ಅಗತ್ಯವಾಗಿದೆ ಎಂದರು.
ಕೃಷಿಕ ಮಲ್ಲಿಕಾರ್ಜುನಗೌಡ ಮಾತನಾಡಿ, ಮಕ್ಕಳು ದೇವರಿದ್ದಂತೆ. ಭಾರತೀಯ ಸಂಸ್ಕೃತಿಯನ್ನು ಆಮೂಲಾಗ್ರವಾಗಿ ಪರಿಚಯಿಸುವ ಈ ಸಂಸ್ಕಾರ ಶಿಬಿರಕ್ಕೆ ಸೇವೆಗೈಯುವ ಭಾಗ್ಯ ಸಿಕ್ಕಿದಂತಾಗಿದೆ ಎಂದರು.ಶೈಲಾ ಬಿರಾದಾರ ಶಂಕರ ಜಯಂತಿ ಕುರಿತು ಮಾತನಾಡಿ, ಆಚಾರ್ಯ ಶಂಕರರು ಅಧ್ಯಾತ್ಮ ವಿದ್ಯೆಯ ಮೂಲಕ ಭಾರತಕ್ಕೆ ವಿಶಿಷ್ಟ ಯೋಗದಾನ ಮಾಡಿದ್ದಾರೆ ಎಂದರು. ಗೋಸೇವಕ ಹುಬ್ಬಳಿಯ ಭೇರುಲಾಲ ಜೈನ, ಸ್ತೋತ್ರ ಪ್ರಶಿಕ್ಷಕಿ ಸುವರ್ಣಾ ದೇಸಾಯಿ, ಸಂಗೀತಾ ಪಾಟೀಲ, ದೀಪಾ ಜಾಲಿಹಾಳ, ಯಲ್ಲಪ್ಪ ಪಾಟೀಲ ಉಪಸ್ಥಿತರಿದ್ದರು.
ಶಿಕ್ಷಕಿ ವೀಣಾ ದೇಸಾಯಿ ಸ್ವಾಗತಿಸಿದರು. ಶಿಬಿರ ಸಂಯೋಜಕ ಡಾ. ಕೆ. ಗಣಪತಿ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಪರಿಚಯಿಸಿದರು. ಸಮರ್ಥ ರೇಣಕೆ ಧನ್ಯವಾದಗೈದರು. ಗಂಗಾಧರ ಮರಾಠಿ, ಸುಮಂಗಲಾ ಭಟ್ಟ, ಗುರುಸಿದ್ಧಪ್ಪ ಅಣ್ಣಿಗೇರಿ, ಕಸ್ತೂರಿ ಯಮನೂರ ಮುಂತಾದವರು ಇದ್ದರು.