ಸಾರಾಂಶ
ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಜ್ಞಾನವಿಕಾಸ ನೀಡುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಮುಖ ಕಾರ್ಯವಾಗಿದೆ.
ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶಗಳು ಸಬಲೀಕರಣವಾದರೆ ದೇಶದ ಅಭಿವೃದ್ಧಿ ಸಾಧ್ಯ. ಮಹಿಳೆಯರು ಸ್ವಾವಲಂಬನೆ ಜೀವನ ಸಾಗಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ ಎಂದು ಕೊಪ್ಪಳ ವಿಭಾಗದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ ತಿಳಿಸಿದರು.
ಪಟ್ಟಣದ ಶಂಖ ಬಸದಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಜ್ಞಾನವಿಕಾಸ ನೀಡುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಮುಖ ಕಾರ್ಯವಾಗಿದೆ. ಮಹಿಳೆಯರಲ್ಲಿ ಅಡಗಿರುವ ಪ್ರತಿಭೆಯನ್ನು ಸಮಾಜದಲ್ಲಿ ಬೆಳಕಿಗೆ ತರುವ ಕಾರ್ಯ ಮಾಡುತ್ತಿದೆ. ಮಹಿಳೆಗೆ ಶಿಕ್ಷಣ ಹಾಗೂ ಜ್ಞಾನವನ್ನು ನೀಡಿದಲ್ಲಿ ಆ ಕುಟುಂಬ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಬಲಗೊಳ್ಳಲು ಸಾಧ್ಯ. ಮಹಿಳೆಯರು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.ಧಾರವಾಡದ ಎಸ್‌ಡಿಎಂನ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯ ಡಾ. ಬಸವರಾಜ ಮಾತನಾಡಿ, ಪ್ರತಿದಿನ ಹೃದಯಾಘಾತದಿಂದ 1 ಲಕ್ಷಕ್ಕೆ 63 ಜನ ಮರಣ ಹೊಂದುತ್ತಿದ್ದಾರೆ. ಇದರಲ್ಲಿ 40- 50 ವಯಸ್ಸಿನ ಯುವಕರು ಹೆಚ್ಚಿನವರು ಹೃದಯಾಘಾತದಿಂದ ನಿಧನ ಹೊಂದುತ್ತಾರೆ. ಇದು ನೋವಿನ ಸಂಗತಿಯಾಗಿದೆ ಎಂದರು.ಗ್ರಾಮೀಣ ಭಾಗದ ಯುವಕರಿಗಿಂತ ನಗರ ಭಾಗದ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಹೃದಯಾಘಾತಕ್ಕೆ ವಂಶಾವಳಿ, ದಢೂತಿ ದೇಹ. ಸಿಗರೇಟ್ ಸೇವನೆ, ಒತ್ತಡದ ಜೀವನ ಹಾಗೂ ವಿಶ್ರಾಂತಿರಹಿತ ಜೀವನ, ಕೌಟುಂಬಿಕ ಒತ್ತಡ, ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಇದೆ ಎಂದರು.ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯು ಕುಸಿದುಬಿದ್ದು ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದಲ್ಲಿ ಹೆಚ್ಚಿನ ಸಾವು ತಪ್ಪಿಸಲು ಸಾಧ್ಯ ಎಂದರು.ಈ ವೇಳೆ ತಹಸೀಲ್ದಾರ್ ರಾಘವೇಂದ್ರ ಕೆ. ಪುರಸಭೆ ಸದಸ್ಯ ರಾಜು ಕುಂಬಿ, ಅಶ್ವಿನಿ ಅಂಕಲಕೋಟಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಫಕ್ಕೀರೇಶ ಮ್ಯಾಟಣ್ಣವರ, ಪಿಎಸ್‌ಐ ನಾಗರಾಜ ಗಡಾದ ಇದ್ದರು. ಅಧ್ಯಕ್ಷತೆಯನ್ನು ಸುರೇಂದ್ರಗೌಡ ಪಾಟೀಲ ವಹಿಸಿದ್ದರು.ನಂದಕುಮಾರ್ ಪಾಟೀಲ ಹಾಗೂ ನೂರಾರು ಸಂಖ್ಯೆಯ ಮಹಿಳೆಯರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಗದಗ ಜಿಲ್ಲೆಯ ನಿರ್ದೇಶಕ ಕೇಶವ ದೇವಾಂಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಾ ಸ್ವಾಗತಿಸಿದರು. ಪುನೀತ ಓಲೆಕಾರ ಕಾರ್ಯಕ್ರಮ ನಿರ್ವಹಿಸಿದರು.