ಸಾರಾಂಶ
ಗಜೇಂದ್ರಗಡ: ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕ, ಪಾಲಕರ ಜವಾಬ್ದಾರಿಗಿಂತ ಸಮಾಜದ ಹೊಣೆ ಮಹತ್ವದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಭವಿಷ್ಯತ್ತಿನಲ್ಲಿ ಉತ್ತಮ ಸಾಧನೆ ಮಾಡಿದ ಬಳಿಕ ಸಮಾಜದ ಋಣ ತೀರಿಸುವ ಕಾರ್ಯ ಮಾಡಬೇಕು ಎಂದು ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸ್ಥಳೀಯ ಬಿ.ಎಸ್.ಎಸ್ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್. ಹಾಗೂ ಯುವ ರೆಡ್‌ಕ್ರಾಸ್ ಮತ್ತು ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ಬಿಎ,ಬಿಕಾಂ, ಬಿಎಸ್ಸಿ ಅಂತಿಮ ವರ್ಗಗಳ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಮಾತನಾಡಿದರು.ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಶಾಲಾ ಕಾಲೇಜು ನಿರ್ಮಿಸಿದೆ. ಅದರಲ್ಲಿ ಬಿ.ಎಸ್.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಒಂದಾಗಿದ್ದು, ನ್ಯಾಕ್ ಕಮೀಟಿ ನೀಡಿರುವ ಬಿ++ ಶ್ರೇಣಿಯನ್ನು ಪಡೆದ ಈ ಕಾಲೇಜಿಗೆ ಮೊದಲಿಗೆ ಅಭಿನಂದನೆ ಸಲ್ಲಿಸುವ ಮೂಲಕ ಸರ್ಕಾರಿ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ನಮ್ಮ ತಂದೆಯವರ ಹೆಸರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಬಗ್ಗೆ ಉಚಿತ ತರಬೇತಿ ಆರಂಭವಾಗಿದ್ದು, ಈಗಾಗಲೇ ನಾಡಿನ ಪ್ರಖ್ಯಾತ ತಜ್ಞರಿಂದ ಬೋಧನೆ ಕಾರ್ಯ ನಡೆಯುತ್ತಿದೆ. ಮುಂದೆಯೂ ಸಹ ಇಂತಹ ಕಾರ್ಯಗಳು ನಡೆಯಲಿವೆ. ಸರ್ಕಾರ ಪರೀಕ್ಷೆಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿಯೂ ಇಂತಹ ಪರೀಕ್ಷಾ ಪೂರ್ವ ತಯಾರಿ ತರಬೇತಿ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಕಾಲೇಜಿಗೆ ಬೇಕಾದ ಅಗತ್ಯ ಸಲಕರಣೆಗಳು, ಸಾಮಗ್ರಿಗಳು, ಕಂಪೌಡ್ ಇನ್ನಿತರ ಪರಿಕರಗಳ ಬಗ್ಗೆ ಕಾಲೇಜಿನ ಅಭಿವೃದ್ಧಿ ಮಂಡಳಿ ಮನವಿ ನೀಡಿದರು. ಈ ವೇಳೆ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಕಾಲೇಜು ಅಭಿವೃದ್ಧಿಗೆ ₹೨೫ಲಕ್ಷ ನೀಡುತ್ತೇನೆ ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ವಿವಿಧ ಸಾಂಘಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಸಾಂಕೇತಿಕವಾಗಿ ಪ್ರಶಸ್ತಿ ವಿತರಣೆ ನಡೆದ ಬಳಿಕ ಕಾಲೇಜಿನ ಉಪನ್ಯಾಸಕ ಬಳಗದವರಿಗೆ ಸನ್ಮಾನಿಸಲಾಯಿತು.
ಡಾ. ಬಿ.ಬಿ.ಪೋಲಿಸಪಾಟೀಲ, ಪ್ರಾಚಾರ್ಯ ಮಹೇಂದ್ರ ಜಿ.,ಅಶೋಕ ಬಾಗಮಾರ, ಶಿವರಾಜ ಘೋರ್ಪಡೆ, ಸಿದ್ದಣ್ಣ ಬಂಡಿ, ಅಜಿತ ವಂದಕುದರಿ, ಸುರೇಂದ್ರಸಾ ರಾಯಬಾಗಿ, ರಫೀಕ ತೊರಗಲ್ಲ, ರಾಜು ಸಾಂಗ್ಲೀಕರ, ಚಂಬಣ್ಣ ಚವಡಿ, ಪ್ರಕಾಶ ದಿವಾಣದ, ಬಸವರಾಜ ಹೂಗಾರ, ಯಲ್ಲಪ್ಪ ಬಂಕದ, ಶ್ರೀಧರ ಗಂಜಿಗೌಡ್ರ ಸೇರಿದಂತೆ ಇತರರು ಇದ್ದರು.