ಪೌರಕಾರ್ಮಿಕರಿಗೆ ಸಮಾಜ ಋಣಿಯಾಗಿರಬೇಕು: ಶೇಷಾದ್ರಿ

| Published : Oct 16 2025, 02:00 AM IST

ಪೌರಕಾರ್ಮಿಕರಿಗೆ ಸಮಾಜ ಋಣಿಯಾಗಿರಬೇಕು: ಶೇಷಾದ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ನಗರವನ್ನು ಸ್ವಚ್ಚವಾಗಿಟ್ಟು, ನಾಗರೀಕರ ಆರೋಗ್ಯ ಕಾಪಾಡುತ್ತಿರುವ ಪೌರಕಾರ್ಮಿಕರಿಗೆ ಸಮಾಜ ಋಣಿಯಾಗಿರಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ರಾಮನಗರ: ನಗರವನ್ನು ಸ್ವಚ್ಚವಾಗಿಟ್ಟು, ನಾಗರೀಕರ ಆರೋಗ್ಯ ಕಾಪಾಡುತ್ತಿರುವ ಪೌರಕಾರ್ಮಿಕರಿಗೆ ಸಮಾಜ ಋಣಿಯಾಗಿರಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ನಗರಸಭೆಯ ಪೌರಕಾರ್ಮಿಕರಿಗಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅವರು, ಪೌರ ಕಾರ್ಮಿಕರು ಹಬ್ಬ, ಸಾರ್ವತ್ರಿಕ ರಜಾ ದಿನಗಳಲ್ಲೂ ತಮ್ಮ ಸೇವೆ ಒದಗಿಸುತ್ತಿದ್ದಾರೆ. ಅವರಿಗೆ ಋಣಿಯಾಗಿರುವ ಜೊತೆಗೆ ಗೌರವ ಸಲ್ಲಿಸಬೇಕು ಎಂದರು.

ನಾಗರೀಕರು ಆರೋಗ್ಯಕರವಾಗಿ, ನೆಮ್ಮದಿಯಾಗಿ, ಬದುಕಲು ಪೌರಕಾರ್ಮಿಕರ ಶ್ರಮ ಕಾರಣ. ಬೆಳಗಿನ ಜಾವದಲ್ಲೇ ಸ್ವಚ್ಚತೆಯಲ್ಲಿ ತೊಡಗಿಸಿಕೊಳ್ಳುವ ಈ ಕಾರ್ಮಿಕರು ಜನರು ಎದ್ದೇಳುವ ಮುನ್ನ ನಗರವನ್ನು ಸ್ವಚ್ಚಗೊಳಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಭಕ್ಷಿ ಕೆರೆ ಏರಿ ಒಡೆದು ಸೀರಹಳ್ಳದಲ್ಲಿ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಬೆಳಗಿನ ಜಾವ 3 ಗಂಟೆಗೆಲ್ಲ ಮಾಹಿತಿ ಸಿಕ್ಕ ತಕ್ಷಣ ಪೌರಕಾರ್ಮಿಕರು ಮತ್ತು ನಗರಸಭೆಯ ಅಧಿಕಾರಿಗಳು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ಕೊಟ್ಟು ನಾಗರೀಕರ ರಕ್ಷಣೆಗೆ ಮುಂದಾಗಿದ್ದರು. ಇವರ ಅನನ್ಯ ಸೇವೆಯಿಂದಾಗಿ ನಾಗರೀಕರು ನೆಮ್ಮದಿಯಾಗಿದ್ದಾರೆ ಎಂದು ತಿಳಿಸಿದರು.

ನಮಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರು ಮತ್ತು ನಗರಸಭೆಯ ವಿವಿಧ ಸೇವೆಗಳನ್ನು ಸಲ್ಲಿಸುತ್ತಿರುವ ಅಧಿಕಾರಿ ಸಿಬ್ಬಂದಿಗಳಿಗಾಗಿ ಪೌರ ಕಾರ್ಮಿಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಅಕ್ಟೋಬರ್ 28ರಂದು ಸಂಜೆ ಜಾನಪದ ಲೋಕದಲ್ಲಿ ಪೌರಕಾರ್ಮಿಕರು, ಅವರ ಮಕ್ಕಳು ಮತ್ತು ಕುಟುಂಬ ವರ್ಗ ಮತ್ತು ನಗರಸಭೆಯ ಅಧಿಕಾರಿ, ಸಿಬ್ಬಂದಿ ವರ್ಗ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವರು. ಪೌರಕಾರ್ಮಿಕರ ತಂಡ ನಾಟಕ ಪ್ರದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಾಗರೀಕರು ಸಾಕ್ಷಿಯಾಗಬೇಕು ಎಂದು ಮನವಿ ಮಾಡಿದರು.

ಜಾನಪದ ಲೋಕದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶಾಸಕ ಇಕ್ಬಾಲ್ ಹುಸೇನ್, ಹಿರಿಯ ಪತ್ರಕರ್ತ ಅಮೀನ್ ಮಟ್ಟು ಮುಂತಾದವರು ಭಾಗವಹಿಸಲಿದ್ದಾರೆ ಎಂದು ಕೆ.ಶೇಷಾದ್ರಿ ಹೇಳಿದರು.

ಆಯುಕ್ತ ಡಾ.ಜಯಣ್ಣ ಮಾತನಾಡಿ, ಸದೃಡ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಕ್ರೀಡೆಗಳು, ವ್ಯಾಯಾಮ, ಯೋಗ ಮುಂದಾದ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸದೃಢ ದೇಹ ನಮ್ಮದಾಗುತ್ತದೆ. ಕ್ರೀಡಾ ಸ್ಪರ್ಧೆಗಳನ್ನು ಮನರಂಜನೆಯಾಗಿಯೂ ಸ್ವೀಕರಿಸಿ ಭಾಗವಹಿಸಬಹುದು ಎಂದರು.

ನಗರಸಭೆ ಎ.ಇ.ಇ. ಸುಬ್ರಮಣಿ ಮಾತನಾಡಿದರು. ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ಪಾರ್ವತಮ್ಮ, ಮುತ್ತುರಾಜು, ಮಹಾಲಕ್ಷ್ಮಿ, ಸೋಮಶೇಖರ್, ಮಂಜುಳಾ, ಅಜ್ಮತ್ ಪಾಷ, ಅಕ್ಲಿಂ, ಅಧಿಕಾರಿಗಳಾದ ನಟರಾಜ ಗೌಡ, ಸುನಿತಾ, ಲಕ್ಷ್ಮಿದೇವಿ, ನಾಗರಾಜ್ (ಬೆಂಕಿ), ರೇಖಾ, ಪವಿತ್ರ, ನಿರ್ಮಲ, ತಸ್ಮೀಂ, ಪ್ರಶಾಂತ್ ಮುಂತಾದವರು ಹಾಜರಿದ್ದರು. 45 ವರ್ಷ ಒಳಗಿನ ಪುರುಷ ಪೌರಕಾರ್ಮಿಕರಿಗೆ ಕ್ರಿಕೆಟ್, ಕಬ್ಬಡ್ಡಿ, 400 ಮೀ ಓಟ, 100 ಮೀಟರ್ ಓಟ, ಗುಂಡು ಎಸೆತ, ಜಾವಲೆನ್ ಎಸೆತ. 45 ವರ್ಷ ಮೇಲ್ಪಟ್ಟ ಪುರುಷ ಕಾರ್ಮಿಕರಿಗೆ ಬಾಲ್ ಇನ್ ದಿ ಬಕೆಟ್, 50 ಮೀ ಓಟ, ಗುಂಡು ಎಸೆತ, ಜಾವೆಲಿನ್ ಎಸೆತ ಸ್ಪರ್ಧೆಗಳಿದ್ದವು. 45 ವರ್ಷ ಒಳಗಿನ ಮಹಿಳಾ ಕಾರ್ಮಿಕರಿಗೆ ಕಬ್ಬಡ್ಡಿ, ರಂಗೋಲಿ ಸ್ಪರ್ಧೆ, 50 ಮೀ ಓಟ, ಗುಂಡು ಎಸೆತ ಮತ್ತು ಮ್ಯೂಸಿಕಲ್ ಚೇರ್ ಸ್ಪರ್ಧೆಗಳು ಆಯೋಜನೆಯಾಗಿದ್ದವು. 45 ವರ್ಷ ಮೇಲ್ಪಟ್ಟ ಮಹಿಳಾ ಕ್ರೀಡಾರ್ಥಿಗಳಿಗೆ ರಂಗೋಲಿ ಸ್ಪರ್ಧೆ, 50 ಮೀ ಓಟ, ಗುಂಡು ಎಸೆತ, ಮ್ಯೂಸಿಕಲ್ ಚೇರ್ ಸ್ಪರ್ಧೆಗಳಿದ್ದವು.

15ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ನಗರಸಭೆಯ ಪೌರಕಾರ್ಮಿಕರಿಗಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಕೆ.ಶೇಷಾದ್ರಿ (ಶಶಿ)ರವರು ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.