ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಹೆಣ್ಣು ಮಾತನಾಡದಂತೆ, ಭಾವನೆಯನ್ನು ವ್ಯಕ್ತಪಡಿಸದೆ ಸಮಾಜ ಮೌನವಾಗಿಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ವಿಷಾದಿಸಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸಂವಹನ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ರಾಜ್ಯೋತ್ಸವ ಅಂಗವಾಗಿ ಹಿರಿಯ ಸಾಹಿತಿಗಳಿಗೆ ಸನ್ಮಾನ, ಸಂವಹನ ಸಿರಿ ಯುವ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ 2024ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸವಾರಂಭದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಪುರುಷರಿಗಿಂತ ಹೆಚ್ಚು ಸವಾಲುಗಳನ್ನು ಎದುರಿಸುತ್ತಿರುವುದರಿಂದ ಮಹಿಳೆಯರು ಅಧಿಕಾರವನ್ನು ನಿರ್ವಹಿಸುವುದು ತುಂಬಾ ಕಷ್ಟವಾಗಿರುತ್ತದೆ. ಸವಾಲುಗಳ ನಡುವೆಯೇ ಪುರುಷರಿಗಿಂತ ಹೆಚ್ಚಿನ ಚಾಕಚಕ್ಯಕೆ, ಧೈರ್ಯವನ್ನು ಪ್ರದರ್ಶಿಸುವ ಮೂಲಕ ಮಹಿಳೆಯರು ಯಶಸ್ವಿಯಾಗಬೇಕು ಎಂದು ಅವರು ಕರೆ ನೀಡಿದರು.ಪ್ರಶಸ್ತಿ, ಪುರಸ್ಕಾರಗಳು ಕವಿಯ ಸಾಧನೆಯನ್ನು ಗುರುತಿಸುವ ಮಾನದಂಡ ಆಗುವುದಿಲ್ಲ. ಕೃತಿಯ ಮೌಲ್ಯಗಳು ಕವಿಯ ಸಾಧನೆಯನ್ನು ತಿಳಿಸುತ್ತವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಹುತೇಕ ಸಾಧಕರು ಗ್ರಾಮೀಣ ಪ್ರದೇಶದಿಂದ ಬಂದವರೇ ಆಗಿದ್ದಾರೆ ಎಂದರು.
ಇದೇ ವೇಳೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಡಿ.ಕೆ. ರಾಜೇಂದ್ರ, ಮಹಾರಾಣಿ ಸರ್ಕಾರಿ ಪಿಯು ಕಾಲೇಜಿನ ಅಧ್ಯಾಪಕ ಡಾ.ಎನ್.ಎನ್. ಚಿಕ್ಕಮಾದು, ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಡಾ. ಪದ್ಮಾಶೇಖರ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು.ಹಿರಿಯ ವಿದ್ವಾಂಸ ಡಾ. ರಾಮೇಗೌಡ, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ, ಜೆಎಸ್ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ, ವಿಜ್ಞಾನ ಲೇಖಕ ಎಸ್. ರಾಮಪ್ರಸಾದ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಸಂವಹನ ಟ್ರಸ್ಟ್ ಅಧ್ಯಕ್ಷ ಡಿ.ಎನ್. ಲೋಕಪ್ಪ ಮೊದಲಾದವರು ಇದ್ದರು.