ಸಾರಾಂಶ
ರಟ್ಟೀಹಳ್ಳಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅನೇಕ ಹಗರಣಗಳಲ್ಲಿ ಮುಳುಗಿ, ಹಿಂದುಳಿದ ವಾಲ್ಮೀಕಿ ನಿಗಮದ ಅಭಿವೃದ್ಧಿ ಹಣವನ್ನು ನುಂಗಿ ಹಾಕಿ ಸಮಾಜಕ್ಕೆ ಅನ್ಯಾಯ ಮಾಡಿದೆ. ಕಾರಣ ಅ.17ರಂದು ನಡೆಯುವ ವಾಲ್ಮೀಕಿ ಜಯಂತಿಯನ್ನು ಪಕ್ಷಾತೀತವಾಗಿ ಬಹಿಷ್ಕರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಮಂಜುನಾಥ ತಳವಾರ ಘೋಷಿಸಿದರು.
ತಹಸೀಲ್ದಾರ್ ಕೆ. ಗುರು ಬಸವರಾಜ ಅಧ್ಯಕ್ಷತೆಯಲ್ಲಿ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ನಂತರ ಮಾತನಾಡಿದ ತಾಲೂಕು ಅಧ್ಯಕ್ಷ ಮಂಜುನಾಥ ತಳವಾರ ಹಿಂದುಳಿದ ಸಮಾಜದ ಅಭಿವೃದ್ಧಿಗೆ ಸದಾ ಸಿದ್ಧವೆಂದು ಕೇವಲ ಭಾಷಣಕ್ಕೆ ಸೀಮಿತಗೊಳಿಸಿರುವ ಇವರು ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಣ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ. ಅನಿವಾರ್ಯ ಕಾರಣಗಳಿಂದ ಸರಕಾರದ ನಡೆಯನ್ನು ಪಕ್ಷಾತೀತವಾಗಿ ಖಂಡಿಸಲಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸರಕಾರ ವಾಲ್ಮೀಕಿ ನಿಗಮದಲ್ಲಿನ ದುರುಪಯೋಗವಾದ ಹಣವನ್ನು ಮರಳಿ ನಿಗಮಕ್ಕೆ ನೀಡಬೇಕು, ನಮ್ಮ ಸಮಾಜಕ್ಕಾದ ಅನ್ಯಾಯ ಸರಿಪಡಿಸಿ ಸಮಾಜದ ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ 500 ಕೋಟಿ ಹಣ ನೀಡಬೇಕು ಎಂದು ಆಗ್ರಹಿಸಿದರು. ಸಮಾಜಕ್ಕಾದ ಅನ್ಯಾಯ ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ನಿವೃತ್ತ ಶಿಕ್ಷಕ ಕೆ.ಡಿ. ದಿವೀಗಿಹಳ್ಳಿ ಮಾತನಾಡಿ, ಸರ್ಕಾರದಿಂದ ಅಭಿವೃದ್ಧಿಗಾಗಿ ಸಮರ್ಪಕ ಅನುದಾನ ಬಿಡುಗಡೆಯಾಗುತ್ತಿಲ್ಲ. ಶಾಲಾ ಕಾಲೇಜುಗಳಲ್ಲಿ ನೀಡುತ್ತಿರುವ ಸಮಾಜದ ಮಕ್ಕಳಿಗೆ ನೀಡುವ ಸ್ಕಾಲರಶಿಪ್ ಬಂದ ಮಾಡಲಾಗಿದೆ. ತಾಲೂಕಿನಾದ್ಯಂತ ವಾಲ್ಮೀಕಿ ಭವನಗಳು ಅರ್ಧಕ್ಕೆ ನಿಂತಿವೆ, ಎಸ್.ಟಿ. ಸಮುದಾಯಕ್ಕೆ ನೀಡುವ ಅನುದಾನ ಕಟ್ ಮಾಡಲಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಹಾಗೂ ನಿಗಮದ ಹಣ ದುರುಪಯೋಗ ಸೇರಿದಂತೆ ಸರಕಾರ ನಮಗೆ ಅನ್ಯಾಯ ಮಾಡುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ನಿಗಮಕ್ಕೆ ಮರಳಿ ಹೆಚ್ಚುವರಿಯಾಗಿ 500 ಕೋಟಿ ನೀಡಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲವಾದಲ್ಲಿ ಅ.17ರ ನಂತರ ತಾಲೂಕಿನಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಕೆ. ಗುರುಬಸವರಾಜ ಮಾತನಾಡಿ, ಸಭೆಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಕೈಗೊಂಡ ನಿರ್ಣಯವನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.ಸಮಾಜಕಲ್ಯಾಣ ಅಧಿಕಾರಿ ಮೆಹಬೂಬ ಸಾಬ್ ನದಾಫ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಬಿ. ನಂದೀಶ, ದೇವರಾಜ ಸಣ್ಣಕಾರಗಿ, ಎಂ.ಬಿ. ಪಾಟೀಲ್, ಸಮಾಜ ಮುಖಂಡರಾದ ಆಂಜನೇಯ ಹೊಸಕಟ್ಟಿ, ಶಿವಕುಮಾರ ದಿವೀಗಿಹಳ್ಳಿ, ರವಿ ಹದಡೇರ, ಮಂಜು ತಳವಾರ, ಮಾರುತಿ ವಾಲ್ಮೀಕಿ, ಸುರೇಶ ನಾಯಕ, ಬಿ.ಬಿ. ಬಾಲಣ್ಣನವರ, ಬಸವರಾಜ ಹೊಸಕಟ್ಟಿ, ರಾಜು ನಾಯಕ, ಮಂಜು ಬಳ್ಳಾರಿ, ನಾಗರಾಜ ಬಳ್ಳಾರಿ, ಪರಮೇಶಪ್ಪ ಅಂತರವಳ್ಳಿ, ಕುಮಾರ ಮಾಸೂರ, ಶಿವು ಮೈಲಾರಿ, ರಮೇಶ ಕಮತಳ್ಳಿ, ಪ್ರಶಾಂತ ಅಡ್ಮನಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.