ಸಾಮಾಜಿಕ ಬದಲಾವಣೆ ಅಧ್ಯಯನಕ್ಕೆ ಸಮಾಜಶಾಸ್ತ್ರ ಅಗತ್ಯ

| Published : Nov 08 2025, 01:30 AM IST

ಸಾರಾಂಶ

ಸಾಮಾಜಿಕ ಬದಲಾವಣೆಯು ಜನಜೀವನ ವಿಧಾನಗಳಲ್ಲಿ ಆಗುವ ಮಾರ್ಪಾಡನ್ನು ಸೂಚಿಸುತ್ತದೆ. ಇದರ ಕುರಿತಾಗಿ ಶೈಕ್ಷಣಿಕ ಶಿಸ್ತಾದ ಸಮಾಜಶಾಸ್ತ್ರವು ಕುಲಶಾಸ್ತ್ರೀಯ ಮತ್ತು ಜನಾಂಗೀಯ ಅಧ್ಯಯನಗಳನ್ನು ಕೈಗೊಂಡು ಆಗಿರುವ ಬದಲಾಣೆಗಳನ್ನು ವ್ಯವಸ್ಥಿತವಾಗಿ ಗುರುತಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಡುತ್ತದೆ ಎಂದು ಚಳ್ಳಕೆರೆಯ ಬಾಪೂಜಿ ಪದವಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಡಿ.ಕರಿಯಣ್ಣ ಹೇಳಿದರು.

ಹರಿಹರ: ಸಾಮಾಜಿಕ ಬದಲಾವಣೆಯು ಜನಜೀವನ ವಿಧಾನಗಳಲ್ಲಿ ಆಗುವ ಮಾರ್ಪಾಡನ್ನು ಸೂಚಿಸುತ್ತದೆ. ಇದರ ಕುರಿತಾಗಿ ಶೈಕ್ಷಣಿಕ ಶಿಸ್ತಾದ ಸಮಾಜಶಾಸ್ತ್ರವು ಕುಲಶಾಸ್ತ್ರೀಯ ಮತ್ತು ಜನಾಂಗೀಯ ಅಧ್ಯಯನಗಳನ್ನು ಕೈಗೊಂಡು ಆಗಿರುವ ಬದಲಾಣೆಗಳನ್ನು ವ್ಯವಸ್ಥಿತವಾಗಿ ಗುರುತಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಡುತ್ತದೆ ಎಂದು ಚಳ್ಳಕೆರೆಯ ಬಾಪೂಜಿ ಪದವಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಡಿ.ಕರಿಯಣ್ಣ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮತ್ತು ಐ.ಕ್ಯೂ.ಎಸ್.ಸಿ. ಸಹಯೋಗದಲ್ಲಿ ಶುಕ್ರವಾರ ನಡೆದ ಆಧುನಿಕ ಸಮಾಜ ಹಾಗೂ ಸಾಮಾಜಿಕ ಬದಲಾವಣೆ ಮತ್ತು ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರ ಮಾಪನಗಳ ಪಾತ್ರ ಎಂಬ ವಿಷಯದ ವಿಶೇಷ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಸಮಾಜದಲ್ಲಿನ ಸಾಮಾಜಿಕ ಬದಲಾವಣೆಯು ನಡವಳಿಕೆ, ಸಾಂಸ್ಕೃತಿಕ ಮೌಲ್ಯಗಳು ಮತ್ತು ಸಾಮಾಜಿಕ ಸಂಸ್ಥೆಗಳಲ್ಲಿನ ಗಮನಾರ್ಹ ಬದಲಾವಣೆಗಳನ್ನು ಸೂಚಿಸುತ್ತದೆ. ಇದು ತಾಂತ್ರಿಕ ಪ್ರಗತಿ, ಜಾಗತೀಕರಣ ಮತ್ತು ನಗರೀಕರಣದಂತಹ ಅಂಶಗಳಿಂದ ನಡೆಸಲ್ಪಡುತ್ತದೆ. ಈ ಬದಲಾವಣೆಗಳು ಕುಟುಂಬ ರಚನೆಗಳಿಂದ ಹಿಡಿದು ಆರ್ಥಿಕ ವ್ಯವಸ್ಥೆಗಳವರೆಗೆ ಎಲ್ಲವನ್ನೂ ಮರುರೂಪಿಸುತ್ತಿವೆ. ಇದು ಪ್ರಗತಿ ಮತ್ತು ಹೊಸ ಸವಾಲುಗಳಿಗೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದರು.

ಚಿತ್ರದುರ್ಗದ ಎಸ್‌ಜೆಎಂ ಪದವಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್. ಆನಂದ ಮಾತನಾಡಿ, ಸಮಾಜ ಶಾಸ್ತ್ರೀಯ ಸಂಶೋಧನೆಯು ವಿಭಿನ್ನ ಗುರಿಗಳನ್ನು ಹೊಂದಿರುತ್ತವೆ. ವಿವರಣೆಯು ಸಂಶೋಧನೆಯ ಪ್ರಮುಖ ಭಾಗವಾಗಿದೆ. ಆದರೆ, ಹೆಚ್ಚಿನ ಸಮಾಜಶಾಸ್ತ್ರಜ್ಞರು ತಾವು ಗಮನಿಸುವುದನ್ನು ಸಾಮಾಜಿಕ ಸಮಸ್ಯೆಗಳನ್ನು ವಿವರಿಸಿ ಮತ್ತು ಊಹಿಸಿ ಅಧ್ಯಯನಗಳನ್ನು ಕೈಗೊಳ್ಳಲು ಪ್ರಯತ್ನಿಸುತ್ತಾರೆ. ಸಮಾಜಶಾಸ್ತ್ರಜ್ಞರು ಸಾಮಾನ್ಯವಾಗಿ ಬಳಸುವ ಮೂರು ಸಂಶೋಧನಾ ವಿಧಾನಗಳು ವೀಕ್ಷಣಾ ತಂತ್ರ, ಸಮೀಕ್ಷೆ ಮತ್ತು ಪ್ರಯೋಗಗಳಾಗಿವೆ ಎಂದು ಹೇಳಿದರು.

ಸಾಮಾಜಿಕ ವಿಜ್ಞಾನದ ಸಂಶೋಧನೆಯಲ್ಲಿ ಅಂಕಿಅಂಶ ಎಂಬ ಪದವನ್ನು ದತ್ತಾಂಶಗಳ ಸಂಗ್ರಹಕ್ಕಾಗಿ ಬಳಸಲಾಗುತ್ತದೆ. ಸಾಮಾಜಿಕ ಸಮಸ್ಯೆಗಳ ಅಧ್ಯಯನಕ್ಕೆ ಸಾಂಖ್ಯೀಕ ದತ್ತಾಂಶ ಅವಶ್ಯಕವಾಗಿಬೇಕು. ಆ ಮೂಲಕ ಸಮಾಜದಲ್ಲಿನ ಸಮಸ್ಯೆಗಳನ್ನು ಕೂಲಂಕುಶವಾಗಿ ವಿಶ್ಲೇಷಿಸಲು ಸಾಧ್ಯ. ಸಮಾಜ ಶಾಸ್ತ್ರಜ್ಞರು ಮತ್ತು ಇತರ ವಿಜ್ಞಾನಿಗಳು ದತ್ತಾಂಶಗಳನ್ನು ಸಂಕ್ಷೇಪಿಸುತ್ತಾರೆ. ಸಂಶೋಧನಾ ನಮೂನೆಗಳ ನಡುವಿನ ಸಂಬಂಧಗಳನ್ನು ಕಂಡುಕೊಳ್ಳುತ್ತಾರೆ ಎಂದು ಸಂಖ್ಯಾಶಾಸ್ತ್ರದ ಮಹತ್ವ ವಿವರಿಸಿದರು.

ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎನ್.ರಮೇಶ್ ವಹಿಸಿ, ಸಮಾಜಶಾಸ್ತ್ರ ವಿಭಾಗವು ನಾಯಕ ಸಮುದಾಯದ ಕುರಿತು ನಡೆಸಿದ ಶಾಸ್ತ್ರಿಯ ಅಧ್ಯಯನದ ವರದಿ ಬಿಡುಗಡೆಗೊಳಿಸಿ ಮಾತನಾಡಿದರು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಅನಂತನಾಗ್ ಎಚ್.ಪಿ., ಅಬ್ದುಲ್ ಬಷೀರ್, ಹನುಮಂತಪ್ಪ.ಕೆ.ವೈ., ಡಾ.ತಿಪ್ಪೇಸ್ವಾಮಿ ಎಚ್., ತೇಜಸ್ವಿನಿ ಹಾಗೂ ಇತರರು ಉಪಸ್ಥಿತರಿದ್ದರು.