ಸಾರಾಂಶ
ಕನ್ನಡ ಪ್ರಭ ವಾರ್ತೆ ಮದ್ದೂರು
ಧರ್ಮದ ಹೆಸರಿನಲ್ಲಿ ಸಮಾಜ ಘಾತಕ ಶಕ್ತಿಗಳು ಮನುಷ್ಯನನ್ನು ದಾರಿ ತಪ್ಪಿಸುತ್ತಿವೆ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಕಿಡಿಕಾರಿದರು.ಪಟ್ಟಣದ ಎಂ.ಎಂ.ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಅಂತಾರಾಷ್ಟ್ರೀಯ ಅಲಯನ್ಸ್ ಕ್ಲಬ್‌ನ ಪ್ರಾಂತೀಯ ಸಮ್ಮೇಳನದಲ್ಲಿ ‘ವೈಜ್ಞಾನಿಕತೆ ನಮಗೇಕೆ ಬೇಕು’ ಎಂಬ ವಿಷಯದ ಕುರಿತು ಪ್ರಧಾನ ಭಾಷಣ ಮಾಡಿದರು.
ಮನುಷ್ಯನ ದೌರ್ಬಲ್ಯಗಳನ್ನು ಸಮಾಜಘಾತಕ ವ್ಯಕ್ತಿಗಳು ಇಂದು ದುರ್ಲಾಬ ಮಾಡಿಕೊಳ್ಳುತ್ತಿವೆ. ಗೋಡ್ಡು ಸಂಪ್ರದಾಯದ ಹೆಸರಿನಲ್ಲಿ ಧರ್ಮವನ್ನು ಮನುಷ್ಯನ ಮೇಲೆ ಬಲವಂತವಾಗಿ ಹೇರುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಧರ್ಮ ಬೀದಿಯಲ್ಲಿ ಬೆತ್ತಲೆಯಾಗಿ ಒದ್ದಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಜಗತ್ತಿನಲ್ಲಿ ತಾಂತ್ರಿಕತೆ ಬೆಳೆದಂತೆ ಮನುಷ್ಯನನ್ನು ವಿಕೃತ ಮನಸ್ಥಿತಿಗೆ ಗುರಿ ಮಾಡಲಾಗುತ್ತಿದೆ. ಪ್ರತಿ ಕ್ಷಣ ಸಮಾಜಘಾತಕ ವ್ಯಕ್ತಿಗಳು ಮನುಷ್ಯನ ಮೇಲೆ ಪ್ರತಿಕ್ಷಣ ಗದಾ ಪ್ರಹಾರ ಮಾಡಿ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಧರ್ಮ ಜಾತಿಗಳ ನಡುವೆ ಸಂಘರ್ಷಗಳು ನಡೆಯುವುದು ಖಚಿತವಾಗುತ್ತಿದೆ ಎಂದರು.
ಜನಗಳ ಮಧ್ಯೆ ಇಂದು ಸತ್ಯ ಹೇಳುವುದು ತಪ್ಪಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮನುಷ್ಯ ಜೀವನ ನಡೆಸುವುದು ಕಷ್ಟ ಸಾಧ್ಯವಾಗುತ್ತಿದೆ. ದೇವರು ಮತ್ತು ಮನುಷ್ಯ ನಡುವೆ ಒಂದು ರೀತಿಯ ಕಂದಕ ನಿರ್ಮಾಣವಾಗಿದೆ. ದಲ್ಲಾಳಿ ತನದಿಂದಾಗಿ ಅದನ್ನು ಕೆಲವು ವ್ಯಕ್ತಿಗಳು ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.ಕೋವಿಡ್ ಸಂಕಷ್ಟದಲ್ಲಿ ದೇಗುಲ ಚರ್ಚ್ ಮತ್ತು ಮಸೀದಿಗಳಿಗೆ ಬೀಗ ಹಾಕಲಾಗಿತ್ತು. ಕೋವಿಡ್ ಬಂದಿದ್ದು ದೇವರಿಂದ ಅಲ್ಲ. ಅದು ಬಂದಿದ್ದು ಹೋಗಿದ್ದು ಮನುಷ್ಯನ ಮುನ್ನೆಚ್ಚರಿಕೆ ಕ್ರಮದಿಂದ ಮಾತ್ರ. ದೇಗುಲಗಳಿಗೆ ಹೋಗಿ ಪೂಜೆ, ಪುನಸ್ಕಾರ ಮಾಡಿದರೆ ಅದು ಸೇವೆಯಾಗುವುದಿಲ್ಲ. ಸಮಾಜ ಸೇವಾ ಸಂಸ್ಥೆಗಳು ನಡೆಸುತ್ತಿರುವ ಜನಾರ್ದನ ಸೇವೆಯೇ ನಿಜವಾದ ಸೇವೆ ಎಂದರು.
ಸೇವಾ ಸಂಸ್ಥೆಗಳು ಆರ್ಥಿಕ ಸಹಾಯ ಮಾಡುವುದನ್ನು ಬಿಟ್ಟು ಮನುಷ್ಯನಿಗೆ ಸಾಂತ್ವನ ಹೇಳಿ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವ ಹಿತವಚನ ನೀಡಬೇಕು. ವಿದ್ಯಾವಂತರು ಪ್ರಜ್ಞಾವಂತಿಕ್ಕೆ ಬೆಳೆಸಿಕೊಳ್ಳಬೇಕು. ದೌರ್ಬಲ್ಯಗಳನ್ನು ದುರ್ಲಾಭ ಪಡೆಯುವ ವ್ಯಕ್ತಿಗಳ ವಿರುದ್ಧ ಸದಾ ಎಚ್ಚರಿಕೆ ವಹಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ನಿರ್ದೇಶಕ ಡಾ.ನಾಗರಾಜು ವಿ.ಬೈರಿ, ಮಾಜಿ ನಿರ್ದೇಶಕ ಜಿ.ಪಿ.ದಿವಾಕರ್, ಸಮಿತಿ ಅಧ್ಯಕ್ಷ ಅಜಂತ ರಂಗಸ್ವಾಮಿ, ಒಂದನೇ ರಾಜ್ಯಪಾಲ ಎಚ್.ಮಾದೇಗೌಡ, ಎರಡನೇ ರಾಜ್ಯಪಾಲ ಉಮೇಶ್, ಉಪರಾಜ್ಯಪಾಲ ಕೆ.ಆರ್. ಶಶಿಧರ ಈಚೆಗೆರೆ, ಜಿಲ್ಲಾ ಸಂಪುಟ ಕಾರ್ಯದರ್ಶಿ ಚಂದ್ರಶೇಖರ್. ಖಜಾಂಚಿ ರಕ್ಷಿತ್ ರಾಜ್, ಪ್ರಾಂತೀಯ ಅಧ್ಯಕ್ಷ ನೀನಾ ಪಟೇಲ್ ಮತ್ತಿತರರು ಇದ್ದರು.