ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಕರ್ನಾಟಕ-ಗೋವಾ ಎನ್‌ಸಿಸಿ ನಿರ್ದೇಶನಾಲಯವು ಉದ್ಯಮಶೀಲತೆ ಮತ್ತು ಸ್ಟಾರ್ಟಪ್ ಕೌಶಲಗಳನ್ನು ವೃದ್ಧಿಸಲು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಎನ್‌ಸಿಸಿ ಎಕ್ಸ್‌ಚೇಂಜ್ ಆಫ್ ಪಾರ್ಟಿಸಿಪೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಮಣಿಪಾಲ್ ಕೌಶಲಾಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಆಯ್ದ ಎನ್‌ಸಿಸಿ ಕೆಡೆಟ್‌ಗಳಿಗೆ ವಿವಿಧ ಸಾಫ್ಟ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಯಕ್ರಮವು ಮಣಿಪಾಲದ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಎಂಐಟಿ) ಗುರುವಾರ ನಡೆಯಿತು.ಈ ಸಂದರ್ಭ ನಿವೃತ್ತ ಬ್ರಿಗೇಡಿಯರ್ ಹಾಗೂ ಎಂ.ಎಸ್.ಡಿ.ಸಿ. ಚೇರ್ಮನ್ ಸುರ್ಜಿತ್ ಸಿಂಗ್ ಪಾಬ್ಲಾ ಮಾತನಾಡಿ, ಎನ್‌ಸಿಸಿ ವಿದ್ಯಾರ್ಥಿಗಳು ಸಕ್ರಿಯವಾಗಿ ಎನ್‌ಸಿಸಿ ಮಾನವೀಯ ಮೌಲ್ಯ, ಶಿಸ್ತು ಮತ್ತು ಧೈರ್ಯವನ್ನು ರೂಪಿಸುತ್ತದೆ. ಅದರ ಜೊತೆಗೆ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಬೆಳೆಸಿಕೊಂಡರೆ ಭವಿಷ್ಯದ ಜೀವನದಲ್ಲಿ ಯಶಸ್ಸು, ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಜೊತೆಗೆ ದೇಶದ ಆಂತರಿಕ ಭದ್ರತೆಯಲ್ಲಿ ಪಾಲ್ಗೊಳ್ಳಲು ಸಹ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಮಣಿಪಾಲ್ ಕೌಶಲಾಭಿವೃದ್ಧಿ ಕೇಂದ್ರದ ಡಾ. ಅಂಜಯ್ ಡಿ., ಡಾ. ಮೊಹಮ್ಮದ್ ಝುಬೇರ್, ಡಾ. ಸುಚೇತಾ ಕೊಲೆಕಾರ್ ಉಪಸ್ಥಿತರಿದ್ದರು. ಎನ್‌ಸಿಸಿ ನಿರ್ದೇಶನಾಲಯದ ಬ್ರಿಗೇಡಿಯರ್ ರಾಹುಲ್ ಚೌಹಾಣ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಡಿ.21ರಿಂದ 30ರ ವರೆಗೆ 10 ದಿನಗಳ ಕಾಲ ವಿಶೇಷವಾಗಿ ಎನ್‌ಸಿಸಿ ಕೆಡೆಟ್‌ಗಳಿಗಾಗಿಯೇ ಈ ಲಘುಕೌಶಲ್ಯಾಭಿವೃದ್ಧಿ ಶಿಬಿರ ನಡೆಯಲಿದ್ದು, ಆಯ್ಕೆಯಾದ 80 ಕೆಡೆಟ್‌ಗಳು ಭಾಗವಹಿಸುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ತಜ್ಞರು ಮತ್ತು ಗಣ್ಯ ವ್ಯಕ್ತಿಗಳಿಂದ ಉಪನ್ಯಾಸಗಳು, ಪ್ರದರ್ಶನಗಳು ಮತ್ತು ಸಂವಾದಗಳು ನಡೆಯುತ್ತಿವೆ.