- ಹರಿಹರಕ್ಕೆ ಬಂದಿಳಿದ ಎನ್‌ಐಎ ತಂಡ । ಗ್ರಾಮಾಂತರ ಠಾಣೆಗೆ ಭೇಟಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಬನ್ನಿಕೋಡು ಗ್ರಾಮದಲ್ಲಿ ಬಂಧಿತನಾದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಸೊಹೇಲ್ ಹಾಗೂ ಆತನ ಸಹೋದರ ಶೋಯೆಬ್‌ನನ್ನು ರಾಷ್ಟ್ರೀಯ ತನಿಖಾ ದಳದ ಇಬ್ಬರು ಅಧಿಕಾರಿಗಳ ತಂಡ ವಿಚಾರಣೆಗೆ ಒಳಪಡಿಸಿದೆ.
ಹರಿಹರ ನ್ಯಾಯಾಲಯದಿಂದ ಗುರುವಾರವಷ್ಟೇ ನ್ಯಾಯಾಂಗ ಬಂಧನಕ್ಕೆ ಪಡೆದ ಹರಿಹರ ಪೊಲೀಸರು ತೀವ್ರ ವಿಚಾರಣೆ ಕೈಗೊಂಡ ಬೆನ್ನಲ್ಲೇ ಎನ್‌ಐಎ ರಂಗ ಪ್ರವೇಶ ಮಾಡಿರುವುದು ಪ್ರಕರಣದ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸಿದೆ.ಎನ್‌ಐಎ ಮಹಿಳಾ ಅಧಿಕಾರಿ ಸೇರಿದಂತೆ ಇಬ್ಬರು ಅಧಿಕಾರಿಗಳ ತಂಡ ಜಿಲ್ಲೆಯ ಹರಿಹರದ ಗ್ರಾಮಾಂತರ ಠಾಣೆಗೆ ಭೇಟಿ ನೀಡಿ, ಪೊಲೀಸ್ ವಶದಲ್ಲಿದ್ದ ಶಂಕಿತ ಉಗ್ರ ಉತ್ತರ ಪ್ರದೇಶ ಮೂಲದ ಸೊಹೇಲ್ ಹಾಗೂ ಆತನ ಸಹೋದರ ಶೋಯೆಬ್‌ನನ್ನು ವಿಚಾರಣೆ ನಡೆಸಿದರು.
ಸೊಹೇಲ್ ಹಾಗೂ ಶೋಯಬ್ ವಿಚಾರಣೆ ನಡೆಸಿ, ಇಬ್ಬರ ಮೊಬೈಲ್‌ಗಳ ತಪಾಸಣೆ, ಸಾಮಾಜಿಕ ಜಾಲತಾಣಗಳ ಬಗ್ಗೆ ಮಾಹಿತಿ ಪಡೆದ ಎನ್‌ಐಎ ಅಧಿಕಾರಿಗಳು ಐದಾರು ತಾಸು ವಿಚಾರಣೆ ಕೈಗೊಂಡರು. ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಪೇಂಟಿಂಗ್ ಕೆಲಸಗಾರನ ಹೆಸರಿನಲ್ಲಿ 15-20 ದಿನಗಳ ಹಿಂದಷ್ಟೇ ಹರಿಹರ ತಾ. ಬನ್ನಿಕೋಡು ಗ್ರಾಮಕ್ಕೆ ಬಂದಿದ್ದ ಸೊಹೇಲ್‌ನ ಬಗ್ಗೆ ಕೇಂದ್ರ ಗುಪ್ತಚರ ವಿಭಾಗದ ಮಾಹಿತಿ ಆಧರಿಸಿ ಮಂಗಳವಾರ ಬೆಳಗಿನ ಜಾವ ಜಿಲ್ಲಾ ಪೊಲೀಸ್, ಹರಿಹರ ಗ್ರಾಮಾಂತರ ಪೊಲೀಸರು ಜಂಟಿ ದಾಳಿ ನಡೆಸಿದ್ದರು. ಬಂಧಿತ ಶಂಕಿತ ಉಗ್ರನ ಬಗ್ಗೆ ಆತನ ಮೊಬೈಲ್, ಪಾಕಿಸ್ತಾನ ಮೂಲದ ರಾಣಾ ಎಂಬಾತನ ಜೊತೆಗೆ ಉರ್ದು- ಹಿಂದಿ ಮಿಶ್ರಿತ ಆಡಿಯೋ, ಮೆಸೇಜ್ ಕಳಿಸಿದ್ದ ಸೊಹೇಲ್ ತಾನು ಅಯೋಧ್ಯ ರಾಮಮಂದಿರ ಸ್ಫೋಟಿಸುವ ಬಯಕೆ ಹೊಂದಿದ್ದಾಗಿ ಪಾಕ್‌ನ ರಾಣಾ ಹಾಗೂ ಭಾರತ ವಿರೋಧಿ ಧೋರಣೆಯ ಗ್ರೂಪ್‌ಗೆ ಮೆಸೇಜ್, ಉಗ್ರರ ರೀತಿ ಹೋಲುವ ಫೋಟೋಗಳು, ಶಸ್ತ್ರಾಸ್ತ್ರಗಳ ಫೋಟೋಗಳು ಸಿಕ್ಕಿರುವುದು ಎನ್‌ಐಎ ರಂಗ ಪ್ರವೇಶಕ್ಕೆ ಕಾರಣವಾಗಿವೆ.
ಹರಿಹರ ಗ್ರಾಮಾಂತರ ಠಾಣೆಗೆ ಡಿವೈಎಸ್ಪಿ ಸುಶೀಲಮ್ಮ ನೇತೃತ್ವದ ತಂಡ ಶಂಕಿತ ಉಗ್ರನ ವಿಚಾರಣೆ ಕೈಗೊಂಡಿದೆ. ಎಎಸ್‌ಪಿ ಪರಮೇಶ್ವರ ಹೆಗಡೆ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ, ಸಿಪಿಐ ಸುರೇಶ್ ಸಗರಿ ಇತರರು ಇದ್ದರು.- - -