ಮಳೆಗಾಲದಲ್ಲಿ ಸುರಿಯುವ ಮಳೆಯಿಂದ ಜಮೀನಿನಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುತ್ತದೆ, ಇದರಿಂದ ಭೂಮಿ ಬರಡಾಗುತ್ತದೆ. ಅದಕ್ಕಾಗಿ ನೀರಿನ ಸಂರಕ್ಷಣೆ ಮಾಡುವ ಮೂಲಕ ಮಣ್ಣಿನ ಸವಕಳಿ ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.
ಲಕ್ಷ್ಮೇಶ್ವರ: ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದು ಹಾಗೂ ಜನರಲ್ಲಿ ಅರಿವು ಮೂಡಿಸುವುದು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಕಾರ್ಯಕ್ರಮದ ಮೂಲಕ ಉದ್ದೇಶವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಸಮೀಪದ ಹರದಗಟ್ಟಿ ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಹಾಗೂ ಜಿಪಂ ಸಹಯೋಗದಲ್ಲಿ ಗುರುವಾರ ನಡೆದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ 2.0 ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಳೆಗಾಲದಲ್ಲಿ ಸುರಿಯುವ ಮಳೆಯಿಂದ ಜಮೀನಿನಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುತ್ತದೆ, ಇದರಿಂದ ಭೂಮಿ ಬರಡಾಗುತ್ತದೆ. ಅದಕ್ಕಾಗಿ ನೀರಿನ ಸಂರಕ್ಷಣೆ ಮಾಡುವ ಮೂಲಕ ಮಣ್ಣಿನ ಸವಕಳಿ ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜಾರಿಯಾಗುತ್ತಿದೆ. ಮಣ್ಣು ನೀರಿನ ಸಂರಕ್ಷಣೆ ಮಾಡುವ ಮೂಲಕ ಫಲವತ್ತಾದ ಭೂಮಿಯನ್ನು ಉಳಿಸಿಕೊಳ್ಳುವ ಕಾರ್ಯ ಮಾಡಬೇಕಾಗಿದೆ. ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಸೇರಿದಂತೆ 9 ಗ್ರಾಮದಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವ ಕಾರ್ಯ ನಡೆಯುತ್ತಿದೆ. ರೈತರಿಗೆ ಈ ಯೋಜನೆ ಅಡಿಯಲ್ಲಿ ವಿವಿಧ ಕೃಷಿ ಸಂಬಂಧಿತ ಸಲಕರಣೆ ನೀಡುವ ಮೂಲಕ ರೈತರಿಗೆ ಸಹಾಯ ಮಾಡುವ ಕಾರ್ಯ ಮಾಡಲಾಗುತ್ತಿದೆ. ಬೆಳೆ ಹಾನಿಯಿಂದ ಉಂಟಾದ ನಷ್ಟಕ್ಕೆ ಪರಿಹಾರ ಕೊಡುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.ಜಿಲ್ಲಾ ಕೃಷಿ ಉಪನಿರ್ದೇಶಕಿ ಸ್ಪೂರ್ತಿ ಜಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಅತಿವೃಷ್ಟಿಯಿಂದ ಮಣ್ಣು ಕೊಚ್ಚಿಕೊಂಡು ಹೋಗುವ ಮೂಲಕ ಫಲವತ್ತಾದ ಭೂಮಿ ಬರಡಾಗುವುದನ್ನು ತಪ್ಪಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. 2,500 ಹೆಕ್ಟೇರ್ ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ಬದು ನಿರ್ಮಾಣ, ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಮೂಲಕ ಸಮುದಾಯದ ಏಳಿಗೆ ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಗದಗ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ್ ಕೃಷಿ ಇಲಾಖೆ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಕೃಷಿ ತಜ್ಞ ನಾರಾಯಣ ಬಂಡಿ ಉಪನ್ಯಾಸ ನೀಡಿದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಪ್ರೇಮಕ್ಕ ನಾಯಕ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವೀರೇಂದ್ರಗೌಡ ಪಾಟೀಲ್, ಜಾನು ಲಮಾಣಿ, ಹುಲ್ಲೂರು ಗ್ರಾಪಂ ಅಧ್ಯಕ್ಷೆ ಲೀಲಾ ತಳವಾರ, ವೀಣಾ ಅಕ್ಕಿ, ಪಿಡಿಒ ಪ್ರಶಾಂತ ಮಾಡಳ್ಳಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ ನರಸಮ್ಮನವರ, ನಿಂಗಪ್ಪ ಬನ್ನಿ, ಥಾವರೆಪ್ಪ ಲಮಾಣಿ, ಗಂಗಾಧರ ಮೇಣಸಿನಕಾಯಿ, ಪರಮೇಶ್ವರಗೌಡ ಪಾಟೀಲ್, ಬಸವರಾಜ ಗಾಣಿಗೇರ, ಕೃಷಿ ಸಹಾಯಕ ಪ್ರಕಾಶ ಹೊನ್ನಪ್ಪನವರ ಇದ್ದರು.