ಸಾರಾಂಶ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ಬಹುಸಂಖ್ಯಾತ ಶ್ರಮಿಕ ವರ್ಗವನ್ನು ಪ್ರತಿನಿಧಿಸಿ ಹಳ್ಳಿಗರ ಮತ್ತು ಸಾಮಾನ್ಯರ ಜನರ ಬಗೆಗಿದ್ದ ಡಾ. ಟಿ.ಬಿ. ಸೊಲಬಕ್ಕನವರ ಕಳಕಳಿ ನಮಗೆ ಪ್ರೇರಣೆ ಎಂದು ಹುಬ್ಬಳ್ಳಿಯ ರಾಮಕೃಷ್ಣಾಶ್ರಮದ ರಘುವೀರಾನಂದ ಸ್ವಾಮೀಜಿ ಹೇಳಿದರು.ಭಾನುವಾರ ತಾಲೂಕಿನ ಗೊಟಗೋಡಿಯ ಶಿಲ್ಪಕಲಾ ಕುಟೀರದಲ್ಲಿ ಜರುಗಿದ ಡಾ. ಟಿ.ಬಿ. ಸೊಲಬಕ್ಕನವರ ತೃತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಕಲೆ ಮಾರಿ ಶ್ರೀಮಂತ ಆಗುವುದನ್ನು ಒಪ್ಪದ ಸೊಲಬಕ್ಕನವರ ತಮ್ಮ ಕಲೆ ಜನರ ಮನಸ್ಸನ್ನು ಕಟ್ಡಿಕೊಡಬೇಕು ಎಂದು ನಂಬಿದ್ದರು. ಜೊತೆಗೆ ತಮ್ಮ ನಂಬುಗೆಯಂತೆ ಬದುಕು ಸಾಗಿಸಿದರು. ಅವರ ಕನಸುಗಳನ್ನು ಮುನ್ನಡೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಮಾತನಾಡಿ, ನಾಲ್ಕು ದಶಕಗಳ ಕಾಲ ಸೊಲಬಕ್ಕನವರ ಒಡನಾಟದಲ್ಲಿದ್ದೆ. ದೊಡ್ಡಾಟದ ಬಗ್ಗೆ ಅವರಿಗಿದ್ದ ಉತ್ಸುಕತೆ, ಲಲಿತ ಕಲೆಗಳ ಮೇಲಿದ್ದ ಪ್ರತಿಭೆ, ಅಂದುಕೊಂಡಿದ್ದನ್ನು ಸಾಧಿಸುವ ಬದ್ಧತೆ ಮತ್ತು ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಯುವಜನತೆಗೆ ಹುಮ್ಮಸ್ಸು ನೀಡಬಲ್ಲದು ಎಂದರು.ಕಲಾಯಾನ ಉದ್ಘಾಟಿಸಿದ ಹಿರಿಯ ಕಲಾವಿದ ಮಹಾಲಿಂಗಪ್ಪ ಎ. ಮಾತನಾಡಿ, ತಮ್ಮ ಕಲಾ ಸಾಧನೆ ಮೂಲಕ ಜನಮಾನಸದಲ್ಲಿರುವ ಡಾ. ಟಿ.ಬಿ. ಸೊಲಬಕ್ಕನವರ ಜೀವನಗಾಥೆ ಪರಿಚಯಿಸುವ ಗ್ರಂಥ ಪ್ರಕಟವಾಗಬೇಕು ಎಂದರು.
ರಂಗಕರ್ಮಿ ಬಸವರಾಜ ಬೆಂಗೇರಿ ಮಾತನಾಡಿ, ಎಲ್ಲ ವರ್ಗದವರನ್ನು ಪ್ರೋತ್ಸಾಹಿಸಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ಡಾ. ಟಿ.ಬಿ. ಸೊಲಬಕ್ಕನವರ ಅವರನ್ನು ಕೇವಲ ಉತ್ತರ ಕರ್ನಾಟಕ ಭಾಗಕ್ಕೆ ಮಾತ್ರ ಸೀಮಿತಗೊಳಿಸುವುದು ಸಲ್ಲ ಎಂದರು.ಇದಕ್ಕೂ ಮುನ್ನ ಡಾ. ಟಿ.ಬಿ. ಸೊಲಬಕ್ಕನವರ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಲಾಯಿತು.
ಹಿರಿಯ ಕಲಾವಿದ ಕರಿಯಪ್ಪ ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ಫಕ್ಕೀರೇಶ ಕೊಂಡಾಯಿ ಹಾಗೂ ಬಸವರಾಜ ಶಿಗ್ಗಾಂವ ಸಂಗಡಿಗರಿಂದ ದೊಡ್ಡಾಟ ಕಲಾ ಪ್ರದರ್ಶನ ಜರುಗಿತು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಮತ್ತು ಶಿಲ್ಪಕಲಾ ಕುಟೀರದ ಕಲಾವಿದರನ್ನು ಸನ್ಮಾನಿಸಲಾಯಿತು.
ರಾಮಕೃಷ್ಣ್ಣಾಶ್ರಮದ ಸ್ವಾಮಿ ಬುದ್ಧಿ ಯೋಗಾನಂದಜೀ ಮಹಾರಾಜ್, ಸ್ವಾಮಿ ಗುರುದೇವಚರಣಾನಂದಜೀ, ಕೊಟ್ರೇಶ ಮಾಸ್ತರ ಬೆಳಗಲಿ, ಬಸಮ್ಮ ನಿಂಗಪ್ಪನವರ, ಬಾಬುರಾವ್ ನಡೋಣಿ, ರಾಜಹರ್ಷ ಸೊಲಬಕ್ಕನವರ, ಆಶಾರಾಣಿ ನಡೋಣಿ, ಶಿಲ್ಪಕಲಾ ಕುಟೀರದ ಗುರುಪಾದ ಹರಿಜನ, ಅಜಿತ್ ಸಕ್ರೆಣ್ಣವರ, ಶಾಂತಪ್ಪ ಬಾಗೇವಾಡಿ, ಬುಡ್ನೇಸಾಬ ಮುಲ್ಲಾನವರ, ಸಂಗಮೇಶ ಸೂಡಿ, ವಿರೂಪಾಕ್ಷ ಕದಲ, ಅಶೋಕ ವೆಂಕಟಾಪುರ ಮತ್ತು ಹುಲಸೋಗಿ, ಮುಗಳಿ, ಕಬನೂರ ಗ್ರಾಮಸ್ಥರು ಉಪಸ್ಥಿತರಿದ್ದರು.ಸಿಂಚನಾ ಕೋಟ್ರಪ್ಪನವರ ಪ್ರಾರ್ಥಿಸಿದರು. ಗೂಳಪ್ಪ ಅರಳಿಕಟ್ಟಿ ಸ್ವಾಗತಿಸಿ, ಸಾಹಿತಿ ಶಶಿಕಾಂತ ರಾಠೋಡ, ಜಾನಪದ ಕಲಾವಿದ ಶರೀಫ್ ಮಾಕಪ್ಪನವರ ನಿರೂಪಿಸಿದರು.