ಸೋಲಾಪುರ (ಜಯದೇವಿತಾಯಿ ಲಿಂಗಾಡೆ ಮಹಾದ್ವಾರ):
ಹೊರ ರಾಜ್ಯಗಳು ಮಾತ್ರವಲ್ಲದೇ ಹೊರ ದೇಶಗಳಲ್ಲೂ ಕನ್ನಡಿಗರು ನೆಲೆಸಿದ್ದು, ಶಿಕ್ಷಣ, ಭಾಷೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಇಲ್ಲಿಯ ವರೆಗೂ ಹೊರನಾಡು ಕನ್ನಡಿಗರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದೇ ಹೋದರೂ ಕರ್ನಾಟಕ ವಿದ್ಯಾವರ್ಧಕ ಸಂಘ ಮಾತ್ರ ಅವರ ಸಂಕಟಗಳನ್ನು ಆಲಿಸಿ ಪರಿಹಾರ ಒದಗಿಸುವ ಮಹತ್ ಕಾರ್ಯ ಮಾಡುತ್ತಿದೆ.ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಈಗಾಗಲೇ ವಾರಣಾಸಿ, ಮುಂಬೈ, ಬರೋಡಾ, ದೆಹಲಿ, ಅಮರಕಂಟಕ, ಹೈದರಾಬಾದ್, ಅಕ್ಕಲಕೋಟ, ಅಧೋನಿಗಳಲ್ಲಿ ಈಗಾಗಲೇ ಒಂಭತ್ತು ಮಹಾಮೇಳ ಯಶಸ್ವಿಯಾಗಿ ಮಾಡಿದೆ. ಇದೀಗ ಸೋಲಾಪುರ ಜಿಲ್ಲೆಯ ಕನ್ನಡ ಸಂಘಗಳ ಸಹಯೋಗದಲ್ಲಿ ಸೋಲಾಪುರ ಹುತಾತ್ಮ ಸ್ಮೃತಿ ಮಂದಿರದಲ್ಲಿ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10ನೇ ಮಹಾಮೇಳವನ್ನು ಶನಿವಾರ ಸೋಲಾಪುರ ಕಿರೀಟೇಶ್ವರ ಮಠದ ಸ್ವಾಮಿನಾಥ ಸ್ವಾಮೀಜಿ ಉದ್ಘಾಟಿಸಿದರು.
ಸೋಲಾಪುರ ಕನ್ನಡದ ಆಸ್ತಿ:ಶ್ರೀಗಳು ಮಾತನಾಡಿ, ಕನ್ನಡ ಐತಿಹಾಸಿಕ ಭಾಷೆ. ಇದು ಬರೀ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಮುಧೋಳದ ಮೃತ್ಯುಂಜಯ ಅಪ್ಪಗಳ ಕನ್ನಡದ ಪ್ರೀತಿಯಿಂದ ಇಂದು ಸೋಲಾಪುರದಲ್ಲಿ ಕನ್ನಡ ಸಮೃದ್ಧವಾಗಿ ಬೆಳೆದಿದೆ. ಸೋಲಾಪುರದ ರುದ್ರಾಂಬಿಕಾ ತಾಯಿ ಮೃತ್ಯುಂಜಯ ಅಪ್ಪಗಳನ್ನು ಮಧೋಳದಿಂದ ಕರೆಯಿಸಿ ಪ್ರವಚನ ನೀಡುತ್ತಿದ್ದರು. ಹೀಗಾಗಿ ಕಿರೀಟ ಮಠವನ್ನು ಅವರಿಗೆ ರುದ್ರಾಂಬಿಕಾ ತಾಯಿ ಭಕ್ಷೀಸಾಗಿ ಕೊಟ್ಟಿರುವುದು ಇತಿಹಾಸ. ಸೋಲಾಪುರದ ಎಲ್ಲ ಗ್ರಾಮಗಳಲ್ಲಿ ಕನ್ನಡ ಹೊಸುಹೊಕ್ಕಿದೆ. ನಾಮಫಲಕಗಳು ಕನ್ನಡದಲ್ಲಿಯೇ ಇದ್ದವು. ಆದರೆ, ರಾತ್ರೋರಾತ್ರಿ ಅವುಗಳು ಮರಾಠಿಮಯ ಆದವು. ಅಷ್ಟಾಗಿಯೂ ಸೋಲಾಪುರ ಮಾತ್ರ ಕನ್ನಡದ ಆಸ್ತಿ. ವಿಶೇಷ ಎಂದರೆ, ಇಲ್ಲಿ ಬಹುತೇಕರು ಲಿಂಗಾಯತರೇ ಇದ್ದು ಅವರ ಸಂಬಂಧಿಕರು ಕರ್ನಾಟಕದವರು ಇದ್ದಾರೆ ಎಂದರು.
ಭಾಷಿಕ ಪಕ್ಷ ಕಟ್ಟಬೇಕು:
ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿ, ಹೊರನಾಡು ಕನ್ನಡಿಗರಿಗೆ ಅಭದ್ರತೆ ಕಾಡುತ್ತಿದ್ದು ಅವರಿಗೆ ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಧೈರ್ಯ ನೀಡುವ ಕಾರ್ಯವನ್ನು ಹೊರನಾಡು ಸಂಘಗಳ ಮೂಲಕ ಮಾಡುತ್ತಿದೆ. ಆದರೆ, ಇದೇ ನಡೆಯನ್ನು ಕರ್ನಾಟಕ ಸರ್ಕಾರ ಏತಕ್ಕೆ ಮಾಡುತ್ತಿಲ್ಲ? ಆದ್ದರಿಂದ ರಾಜಕಾರಣಿಗಳನ್ನು ಹೇಗೆ ಭಾಷಾ ರಾಜಕಾರಣಕ್ಕೆ ತೊಡಗಿಸಬೇಕು ಎಂಬುದನ್ನು ಕನ್ನಡದ ಸಂಘಗಳು ಆಲೋಚನೆ ಮಾಡಬೇಕು. ಭಾಷೆ, ಭಾಷಾ ತತ್ವ ಇಟ್ಟುಕೊಂಡು ಪ್ರಣಾಳಿಕೆ ಸಿದ್ಧಪಡಿಸಿ ಭಾಷಿಕ ಪಕ್ಷವನ್ನು ಕಟ್ಟಬೇಕಿದೆ. ಆಗ ಭಾಷಾ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬ ನಂಬಿಕೆ ಇದೆ. ಇದರ ಭಾಗವಾಗಿ ದಕ್ಷಿಣ ಭಾರತದ ಐದಾರು ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರದ ಜನ ವಿರೋಧಿ ನೀತಿಗಳನ್ನು ವಿರೋಧಿಸಲು ಸಾಧ್ಯವಿದೆ ಎಂಬುದನ್ನು ಭಾಷಿಕ ನೆಲೆಗಟ್ಟಿನ ಮೂಲಕ ಆಲೋಚನೆ ಮಾಡಿದರೆ ಇಲ್ಲಿಯ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಪ್ರತಿಪಾದಿಸಿದರು.
ಸೋದರ ಭಾಷೆಗಳು ವೈರಿಗಲ್ಲ:ಪ್ರಾಸ್ತಾವಿಕ ಮಾತನಾಡಿದ ಬಸವಪ್ರಭು ಹೊಸಕೇರಿ, ಕರ್ನಾಟಕದ ಕನ್ನಡಿಗರಿಂತ ಹೆಚ್ಚು ಕನ್ನಡವನ್ನು ಹೊರನಾಡು ಕನ್ನಡಿಗರು ಜತನದಿಂದ ಕಾಪಾಡಿಕೊಂಡು ಬರುತ್ತಿದ್ದಾರೆ. ಹೊರನಾಡು ಕನ್ನಡಿಗರು ಏಕಾಂಕಿಯಲ್ಲಿ ನಮ್ಮೊಟ್ಟಿಗೆ ಇದ್ದಾರೆ ಎಂದು ಮನಸ್ಸು ಬೆಸೆಯುವ ಕೆಲಸವೇ ಸಮ್ಮೇಳನದ ಪ್ರಮುಖ ಗುರಿ ಎಂದ ಅವರು, ಕರ್ನಾಟಕದ ಸುತ್ತಲಿನ ಸಹೋದರ ಭಾಷೆಗಳು ನಮ್ಮ ವೈರಿಗಲ್ಲ. ಸಹೋದರ ಭಾಷೆಗಳೊಂದಿಗೆ ಜಗಳವಾಡಿ ಇನ್ನೊಬ್ಬ ವೈರಿ ಇಂಗ್ಲಿಷ್‌ನ್ನು ಬೆಳೆಸುತ್ತಿದ್ದೇವೆ. ನನ್ನ ಭಾಷೆಯನ್ನು ಸಂಸ್ಕೃತಿಯಾಗಿ ಉಳಿಸಿಕೊಳ್ಳಬೇಕು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಕಟಿಸಿದ ವಾಗ್ಭೂಷಣ ತ್ರೈಮಾಸಿಕ ಪತ್ರಿಕೆಯನ್ನು ಶಿಕ್ಷಣ ಇಲಾಖೆ ನಿವೃತ್ತ ಆಯುಕ್ತ ಡಾ. ವೆಂಕಟೇಶ ಮಾಚಕನೂರ ಬಿಡುಗಡೆ ಮಾಡಿದರು. ಸಂತ ತುಕಾರಾಮರ ಅಭಂಗ ಶತಕ ಕೃತಿಯನ್ನು (ಕನ್ನಡಕ್ಕೆ ಶಿವಾನಂದ ಗೋಗಾವ್) ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ನಿರೂಪಿಸಿದರು. ಸಂಘದ ಪದಾಧಿಕಾರಿಗಳಾದ ವೀರಣ್ಣ ಒಡ್ಡೀನ, ಸಂಜೀವ ಕುಲಕರ್ಣಿ, ಶಂಕರ ಕುಂಬಿ ಇದ್ದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಸತೀಶ ತುರಮರಿ ವಂದಿಸಿದರು. ರಾಜ್ಯ ಹಾಗೂ ಹೊರ ರಾಜ್ಯಗಳ ಸುಮಾರು 600 ಕನ್ನಡಿಗರು ಭಾಗವಹಿಸಿದ್ದರು. ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳಲ್ಲಿಯೇ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳು ನಡೆಯುವಂತಾಗಬೇಕು. ಕನ್ನಡ ಓದಿದರೆ ಉದ್ಯೋಗ ಸಿಗಲಿದೆ ಎಂಬ ಖಾತ್ರಿ ಗಡಿನಾಡ ಕನ್ನಡಿಗರಿಗೆ ಸಿಗುವಂತೆ ಕರ್ನಾಟಕ ವಿದ್ಯಾವರ್ಧಕ ಸಂಘವು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಬೇಕು. ಜತೆಗೆ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿರುವ ವಿವಿಗಳಲ್ಲಿ ಕನ್ನಡ ಪೀಠಗಳಲ್ಲಿ ಕನ್ನಡ ಅಧ್ಯಾಪಕರಿಲ್ಲ ಈ ಬಗ್ಗೆಯೂ ಸಂಘವು ಸರ್ಕಾರಕ್ಕೆ ಒತ್ತಾಯ ಮಾಡಲಿ ಎಂದು ಆಗ್ರಹಿಸಿದರು.ಡಾ. ಮಲ್ಲಿಕಾ ಘಂಟಿ ವಿಶ್ರಾಂತ ಕುಲಪತಿ