ನಿರುದ್ಯೋಗವೆಂದು ಕೈಕಟ್ಟಿ ಕುಳಿತುಕೊಳ್ಳದೆ ಸಹಾಯಧನದ ಸೋಲಾರ್ ರೊಟ್ಟಿ ಯಂತ್ರದ ಮೂಲಕ ಬದುಕು ಕಟ್ಟಿಕೊಂಡು ಆರೆಗೊಪ್ಪದ ನೇತ್ರಾವತಿ ಹಾಗೂ ಶಿವರಾಜ ದಂಪತಿ ಮಾದರಿಯಾಗಿದ್ದಾರೆ.
ಮಾರುತಿ ಶಿಡ್ಲಾಪೂರ
ಕನ್ನಡಪ್ರಭ ವಾರ್ತೆ ಹಾನಗಲ್ಲನಿರುದ್ಯೋಗವೆಂದು ಕೈಕಟ್ಟಿ ಕುಳಿತುಕೊಳ್ಳದೆ ಸಹಾಯಧನದ ಸೋಲಾರ್ ರೊಟ್ಟಿ ಯಂತ್ರದ ಮೂಲಕ ಬದುಕು ಕಟ್ಟಿಕೊಂಡು ಆರೆಗೊಪ್ಪದ ನೇತ್ರಾವತಿ ಹಾಗೂ ಶಿವರಾಜ ದಂಪತಿ ಮಾದರಿಯಾಗಿದ್ದಾರೆ.ತಾಲೂಕಿನ ಆರೆಗೊಪ್ಪದ ಯುವಕ ಶಿವರಾಜ ಮಹಾಡಿಕ್ ಮೂಲತಃ ಕೃಷಿಕ. ಹಾನಗಲ್ಲಿನ ಲೋಯಲಾ ವಿಕಾಸ ಕೇಂದ್ರದ ಸಲಹೆಯಂತೆ ರೊಟ್ಟಿ ಯಂತ್ರವನ್ನು ಖರೀದಿಸಿ ಉತ್ತಮ ಉದ್ಯೋಗವಾಗಿ ಮಾಡಬಹುದು ಎಂಬ ಚಿಂತನೆಗೆ ಇಂಬು ದೊರೆಯಿತು. ಬದುಕಿನ ಭರವಸೆ ಮೂಡಿಸಿದ ಸೋಲಾರ್ ರೊಟ್ಟಿ ಯಂತ್ರ ಸಂತೃಪ್ತ ಉದ್ಯೋಗಕ್ಕೆ ಅವಕಾಶವಾಗಿದ್ದು, ಅವರ ಪರಿಶ್ರಮಕ್ಕೆ ಉತ್ತಮ ಬೆಲೆಯೂ ಸಿಕ್ಕಿದ್ದು, ಗುಡಿ ಕೈಗಾರಿಕೆಯಲ್ಲಿ ತೊಡಗುವವರಿಗೆ ಮಾದರಿಯಾಗಿದ್ದಾರೆ. ಸೋಲಾರ್ ಯಂತ್ರ: ಅದರಂತೆ ವಿದ್ಯುತ್ ಚಾಲಿತ ರೊಟ್ಟಿ ಯಂತ್ರ ಖರೀದಿಸಲು ಮುಂದಾಗಿ ಅದಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ಬೇಡಿಕೆ ಸಲ್ಲಿಸಿದಾಗ ಅದು ಬಹು ಖರ್ಚುದಾಯಕ ಎಂಬ ಮಾಹಿತಿ ದೊರೆತಿದೆ. ಆಗ ಹಾನಗಲ್ಲಿನ ಲೋಯಲಾ ಸಂಸ್ಥೆಯ ಸಲಹೆಯಂತೆ ಸೋಲಾರ್ ರೊಟ್ಟಿ ಯಂತ್ರ ₹3,20,000ಕ್ಕೆ ಖರೀದಿಸಿದ್ದಾರೆ. ಈಗ ದಿನಕ್ಕೆ ೫೦೦ ರೊಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ವಿವಿಧ ಸಮಾರಂಭಗಳಿಗೆ ನೂರರಿಂದ ಸಾವಿರ ರೊಟ್ಟಿಗಳನ್ನು ತಯಾರಿಸಿ ಕೊಡುತ್ತಾರೆ. ಹಳ್ಳಿಯ ಮನೆಗಳಿಂದಲೂ ಜೋಳದ ಹಿಟ್ಟು ಕೊಟ್ಟು ರೊಟ್ಟಿ ಮಾಡಿಸಿಕೊಳ್ಳುತ್ತಾರೆ. ಮುಂಚಿತವಾಗಿ ತಿಳಿಸಿದರೆ ಬಿಸಿ ರೊಟ್ಟಿ ಹಾಗೂ ಚಪಾತಿಯನ್ನು ಕೂಡ ಮಾಡಿ ಕೊಡಲು ಇದು ಅನುಕೂಲವಾಗಿದೆ. ಬೆಂಗಳೂರು, ಹುಬ್ಬಳ್ಳಿ, ಮುಂಡಗೋಡ, ಧಾರವಾಡ ಸೇರಿದಂತೆ ಬಹಳಷ್ಟು ಕಡೆ ಇವರ ರೊಟ್ಟಿಗೆ ಬೇಡಿಕೆ ಇದೆ.ಅಲ್ಲದೆ ಇದೇ ಯಂತ್ರದಲ್ಲಿ ಹಪ್ಪಳವನ್ನೂ ಕೂಡ ಮಾಡಲು ಅನುಕೂಲವಿದೆ. ಹಪ್ಪಳ ತಯಾರಿಸಿ ಮಾರುಕಟ್ಟೆಗೆ ಕೊಡುವುದು ನಮ್ಮ ಮುಂದಿನ ಯೋಜನೆಯಾಗಿದೆ ಎನ್ನುತ್ತಾರೆ ನೇತ್ರಾವತಿ ಹಾಗೂ ಶಿವರಾಜ ದಂಪತಿ.
ಇದು ಸ್ವಯಂ ಉದ್ಯೋಗಕ್ಕೆ ಅವಕಾಶವಾಗಿದೆ. ಉತ್ತಮ ಗುಣಮಟ್ಟದ ಆಹಾರ ತಯಾರಿಸಿಕೊಡಲು ಸಾಧ್ಯವಾಗಿದೆ. ಸದ್ಯದಲ್ಲಿಯೆ ಇಂತಹ ಇನ್ನೂ ಎರಡು ಯಂತ್ರಗಳ ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ಜೈಸನ್ ಪಾಯ್ಸಹೇಳಿದರು.ಕೇಂದ್ರ ಸರ್ಕಾರದ ಯೋಜನೆಯಲ್ಲಿ ಶೇ.೩೫, ಶೇ.15 ರಾಜ್ಯ ಸರ್ಕಾರದ ಸಹಾಯಧನದಲ್ಲಿ ಈ ಯಂತ್ರಗಳನ್ನು ಪೂರೈಸಲಾಗಿದೆ. ಉಳಿದ ಹಣಕ್ಕೆ ಬ್ಯಾಂಕ್ ಸಾಲ ಕೊಡಿಸಲಾಗಿದೆ ಎಂದು ಹಾವೇರಿ ಕೃಷಿ ಇಲಾಖೆ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಯಶೋದಾ ದ್ಯಾವಪ್ಪನವರ ಹೇಳಿದರು.