ವಿಧಾನಸೌಧ, ವಿಕಾಸಸೌಧಕ್ಕೆ ಸೋಲಾರ್ ಮೂಲಕ ವಿದ್ಯುತ್ ಪೂರೈಸಲು ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸೌಧ, ವಿಕಾಸಸೌಧಕ್ಕೆ ಸೋಲಾರ್ ಮೂಲಕ ವಿದ್ಯುತ್ ಪೂರೈಸಲು ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.

ನಗರದ ಸೆಲ್ಕೋ ಸಂಸ್ಥೆಯ ಮೂಲಕ ಒಟ್ಟು 300 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಗ್ರಿಡ್ ಸ್ಥಾಪಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ ಮೂಲಕ ವರ್ಷಕ್ಕೆ 4.50 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ.

ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡಗಳ ಮೇಲೆ ಹಾಗೂ ರಾಜಭವನ ಮತ್ತು ವಿಧಾನಸೌಧ ನಡುವಿನ ಜಾಗದಲ್ಲಿ ಒಟ್ಟು 3 ಕಡೆಗಳಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ಗ್ರಿಡ್ ಮೂಲಕ ವಿದ್ಯುತ್ ಪೂರೈಸಲಾಗುತ್ತದೆ. ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಬಳಕೆಯಾಗುವ ವಿದ್ಯುತ್‌ನ ಶೇ.20ರಷ್ಟು ವಿದ್ಯುತ್ ಸೋಲಾರ್ ಮೂಲಕ ಪೂರೈಕೆಯಾಗಲಿದೆ ಎಂದು ತಿಳಿದು ಬಂದಿದೆ.

ವಿಧಾನಸೌಧದ ಸೌಂದರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗುತ್ತಿದೆ. ಈ ಪ್ರಕ್ರಿಯೆ ಇನ್ನು 20 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಬೆಸ್ಕಾಂನಿಂದ ಮೀಟರ್ ಅಳವಡಿಕೆಯಾದ ಬಳಿಕ ವಿದ್ಯುತ್ ಪೂರೈಕೆ ಆರಂಭವಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಯೋಜನೆ ಕುರಿತು ಮಾತನಾಡಿದ ಸೆಲ್ಕೋ ಇಂಡಿಯಾ ಸಹ ಸಂಸ್ಥಾಪಕ ಹರೀಶ್ ಹಂದೆ, ವರ್ಷಕ್ಕೆ ಸುಮಾರು 310 ರಿಂದ 320 ದಿನಗಳ ಕಾಲ ಸೋಲಾರ್ ವಿದ್ಯುತ್ ಉತ್ಪಾದನೆಯಾಗುವ ಲೆಕ್ಕಾಚಾರವನ್ನು ಹೊಂದಲಾಗಿದೆ. ವಿಧಾನಸೌಧ, ವಿಕಾಸಸೌಧದಂತಹ ಕಟ್ಟಡಗಳಲ್ಲಿ ಸೋಲಾರ್ ಮೂಲಕ ವಿದ್ಯುತ್ ಉತ್ಪಾದನೆಯು ಇತರ ಕಟ್ಟಡಗಳಿಗೆ ಸ್ಪೂರ್ತಿಯನ್ನು ನೀಡುತ್ತದೆ. ಅಲ್ಲದೇ, ಸಾಂಪ್ರದಾಯಿಕ ಮಾರ್ಗಗಳಲ್ಲಿ ಉತ್ಪಾದಿಸುವ ವಿದ್ಯುತ್‌ಗಿಂತ ಸೋಲಾರ್ ವಿದ್ಯುತ್ ಸುಸ್ಥಿರ ಮತ್ತು ಪರಿಸರ ಸ್ನೇಹಿ ಆಗಿದೆ ಎಂದರು.

ಯೋಜನೆಗಾಗಿ ಮಾಡುತ್ತಿರುವ ವೆಚ್ಚವೂ ಉಚಿತ ವಿದ್ಯುತ್ ಮೂಲಕ 7 ವರ್ಷಗಳಲ್ಲಿ ಇಲಾಖೆಗೆ ವಾಪಸ್ ಆಗುತ್ತದೆ ಹರೀಶ್ ಹಂದೆ ತಿಳಿಸಿದರು.

ವಿಕಾಸಸೌಧದ ಮೇಲೆ ಈಗಾಗಲೇ 90 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಯಾನಲ್ ಅಳವಡಿಸಲಾಗಿದ್ದು, ಕಳೆದ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.