ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಧಾನ ಮಂತ್ರಿ ಕುಸುಮ್-ಬಿ ಯೋಜನೆಯಡಿ ಸೋಲಾರ್ ಪಂಪ್‌ಸೆಟ್‌ ಅಳವಡಿಸುವ ಯೋಜನೆಯ ಸಾವಿರಾರು ಕೋಟಿ ರು. ಭ್ರಷ್ಟಾಚಾರದಲ್ಲಿ ಕಆರ್‌ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಇಂಧನ ಸಚಿವ ಕೆ.ಜೆ.ಜಾರ್ಜ್‌ ನೇರ ಮತ್ತು ವ್ಯವಸ್ಥಿತವಾಗಿ ಪಾಲುದಾರರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಯೋಜನೆಯಲ್ಲಿ ಶೃಂಗೇರಿ ಶಾಸಕರೂ ಆದ ಕೆಆರ್‌ಇಡಿಎಲ್ ಅಧ್ಯಕ್ಷ ರಾಜೇಗೌಡ, ಇಂಧನ ಸಚಿವ ಕೆ.ಜೆ.ಜಾರ್ಜ್ ಶಾಮೀಲಾಗಿದ್ದು, ಈ ಪ್ರಕರಣ‍ವನ್ನು ಸಿಬಿಐಗೆ ಒಪ್ಪಿಸುವಂತೆ ಇನ್ನು 2-3 ದಿನಗಳಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರನ್ನು ಭೇಟಿ ಮಾಡಿ, ಜಿಲ್ಲಾ ಬಿಜೆಪಿಯಿಂದ ಮನವಿ ಅರ್ಪಿಸಲಿದ್ದೇವೆ ಎಂದರು.

ದೇಶದ ರೈತರು ನೀರಾವರಿಗಾಗಿ ವಿದ್ಯುತ್ ಅಥವಾ ಡೀಸೆಲ್ ಪಂಪ್‌ಸೆಟ್ ಮೇಲೆ ಅವಲಂಭಿತವಾಗುವುದನ್ನು ತಪ್ಪಿಸಲು, ದುಬಾರಿ ಡೀಸೆಲ್‌, ವಿದ್ಯುತ್ ಸಮಸ್ಯೆ ತಪ್ಪಿಸಿ, ರೈತರಿಗೆ ಅನುಕೂಲ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸೌರ ವಿದ್ಯುತ್ ಬಳಸಿ, ಪಂಪ್‌ಸೆಟ್ ಮೂಲಕ ನೀರೆತ್ತುವ ಪ್ರಧಾನ ಮಂತ್ರಿ ಕುಸುಮ್-ಬಿ ಯೋಜನೆ ಜಾರಿಗೊಳಿಸಿತ್ತು. ಸೋಲಾರ್‌ ಪಂಪ್‌ ಸೆಟ್ ಅಳವಡಿಸಲು ಕೇಂದ್ರವು ಶೇ.30 ಸಹಾಯಧನ, ರಾಜ್ಯ ಶೇ.50 ಸಹಾಯಧನ ನೀಡಿದರೆ, ರೈತರು ತಮ್ಮ ಪಾಲಿನ ಶೇ.20ರಷ್ಟು ಪಾಲನ್ನು ಆನ್‌ಲೈನ್ ಮೂಲಕ ತುಂಬಬೇಕಿತ್ತು ಎಂದು ತಿಳಿಸಿದರು.

ಕೆಆರ್‌ಇಡಿಎಲ್ ರೈತರ ಜಮೀನುಗಳ ಕೊಳವೆ-ತೆರೆದ ಬಾವಿಗಳಿಗೆ ಸೋಲಾರ್ ಪಂಪ್‌ಸೆಟ್ ಅಳವಡಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ದಾವಣಗೆರೆ ಜಿಲ್ಲೆಯಿಂದ ಅರ್ಜಿ ಸಲ್ಲಿಸಿದ್ದ 6023 ರೈತರ ಪೈಕಿ 2440 ರೈತರು ಮಾತ್ರ ತಮ್ಮ ಪಾಲಿನ ಶೇ.20ರಷ್ಟು ಹಣ ಪಾವತಿಸಿದ್ದಾರೆ. ಬಹುತೇಕ ರೈತರು 5 ಎಚ್‌ಪಿ ಸಾಮರ್ಥ್ಯದ ಸೋಲಾರ್‌ ಪಂಪ್‌ಸೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ಒಟ್ಟು ಯೋಜನಾ ವೆಚ್ಚ 2,85,536 ರು. ಆಗಿದೆ. ಇದರಲ್ಲಿ ಕೇಂದ್ರದ ಪಾಲು 84,259 ರು., ರಾಜ್ಯದ ಪಾಲು 1,42,768 ರು. ಆಗಿದ್ದು, ಫಲಾನುಭವಿ ರೈತ ತನ್ನ ಪಾಲಿನ 1,42,768 ರು. ಹಣವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು ಎಂದರು.


ಪಕ್ಷದ ಜಿಲ್ಲಾ ವಕ್ತಾರ, ರೈತ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಸೋಲಾರ್ ಪಂಪ್ ಸೆಟ್ ಅಳವಡಿಸಲು ರಾಜ್ಯಾದ್ಯಂತ 13 ಅನುಷ್ಠಾನ ಸಂಸ್ಥೆಗಳನ್ನು ಗುರುತಿಸಿದ್ದು, ಈ ಏಜೆನ್ಸಿಗಳನ್ನು ಕೆಆರ್‌ಇಡಿಎಲ್ ಯಾವ ರೀತಿ ಆಯ್ಕೆ ಮಾಡಿದೆಯೆಂಬುದೇ ನಿಗೂಢವಾಗಿದೆ ಎಂದರು.

ರೈತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗಲೇ ಶೇ.20ರಷ್ಟು ಹಣ ಸಂದಾಯ ಮಾಡುತ್ತಾರೆ. ಹಾಗಾಗಿ ಸಂಸ್ಥೆಯವರು ರೈತರನ್ನು ಸಂಪರ್ಕಿಸಿ, ಸೌರ ವಿದ್ಯುತ್ ಪಂಪ್‌ಸೆಟ್ ಅಳವಡಿಸಿ, ಸುಸ್ಥಿತಿಯಲ್ಲಿ ರೈತರಿಗೆ ಅದನ್ನು ಹಸ್ತಾಂತರಿಸಬೇಕು. 5 ವರ್ಷ ಕಾಲ ಅದೇ ಏಜೆನ್ಸಿಗೆ ನಿರ್ವಹಣೆ ಜವಾಬ್ಧಾರಿ ಇರುತ್ತದೆ. ಏಜೆನ್ಸಿ ಆಯಾ ತಾಲೂಕಿನಲ್ಲಿ ಕಚೇರಿ ಸ್ಥಾಪಿಸಿ, ರೈತರಿಗೆ ಸಹಾಯವಾಣಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ 2440 ರೈತರು ಸೌರ ವಿದ್ಯುತ್ ಪಂಪ್‌ಸೆಟ್‌ಗೆ ಶೇ.20 ಹಣ ಪಾವತಿಸಿ, ಅರ್ಜಿ ಸಲ್ಲಿಸಿದ್ದಾರೆ. ನಾನೂ ಸಹ ಅರ್ಜಿ ಸಲ್ಲಿಸಿದ್ದು, ಸಂಬಂಧಿಸಿದ ಏಜೆನ್ಸಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಪ್ರತಿ ರೈತರಿಗೆ 30 ಸಾವಿರ ರು.ನಂತೆ 2440 ರೈತರಿಂದ 7.32 ಕೋಟಿ ರು. ಅನುಷ್ಟಾನ ಸಂಸ್ಥೆಗೆ ಸಂದಾಯವಾಗಿದೆ ಎಂದು ದೂರಿದರು.

ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ತಾರೇಶ ನಾಯ್ಕ, ಮಾಯಕೊಂಡದ ಸಚಿನ್ ಇತರರು ಇದ್ದರು.

ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಭೇಟಿ, ಮನವಿ

ಕೆಆರ್‌ಇಡಿಎಲ್‌ನಿಂದ ಆಗಿರುವ ಸಾವಿರಾರು ಕೋಟಿ ರು. ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸುವಂತೆ ಇನ್ನು 3-4 ದಿನದಲ್ಲೇ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಭೇಟಿ ಮಾಡಿ, ಮನವಿ ಅರ್ಪಿಸುತ್ತೇವೆ. ತಕ್ಷಣವೇ ಕೆಆರ್‌ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಇಂಧನ ಸಚಿವ ಕೆ.ಜೆ.ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಇಬ್ಬರನ್ನೂ ಆ ಸ್ಥಾನಗಳಿಂದ ಸರ್ಕಾರ ಕಿತ್ತು ಹಾಕಿ, ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು ಎಂದು ಮಾಜಿ ಶಾಸಕ ರಾಮಚಂದ್ರ ಹೇಳಿದರು.